ಪಾಂಚಜನ್ಯ ಪುರಸ್ಕಾರಕ್ಕೆ ದುಷ್ಯಂತ್ ಶ್ರೀಧರ್ ಭಾಜನ

ಪಾಂಚಜನ್ಯ ಪುರಸ್ಕಾರಕ್ಕೆ ದುಷ್ಯಂತ್ ಶ್ರೀಧರ್ ಭಾಜನ

ಪಾಂಚಜನ್ಯ ಪುರಸ್ಕಾರಕ್ಕೆ ದುಷ್ಯಂತ್ ಶ್ರೀಧರ್ ಭಾಜನ –

 ಡಿ.28 ಪಾಂಚಜನ್ಯ ಪ್ರತಿಷ್ಠಾನದ 13 ನೇ ವಾರ್ಷಿಕೋತ್ಸವ

ಆಧ್ಯಾತ್ಮಿಕ ಕ್ಷೇತ್ರದ ವಿಶಿಷ್ಟ ಸೇವೆಗಾಗಿ ಖ್ಯಾತ ವಾಗ್ಮಿ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಪಾಂಚಜನ್ಯ ಪುರಸ್ಕಾರ ಪ್ರದಾನಿಸಲಾಗುವುದು. ಡಿ.28ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಜಯನಗರ 4ನೇ ಬ್ಲಾಕ್‌ನ ಯುವಪಥ–ವಿವೇಕ ಆಡಿಟೋರಿಯಂನಲ್ಲಿ ಪಾಂಚಜನ್ಯ ಪ್ರತಿಷ್ಠಾನದ 13ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ.

ಸನಾತನ ಧರ್ಮದ ತತ್ವಗಳನ್ನು ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ ವಾಚಸ್ಪತಿ, ಪ್ರವಚನ ರತ್ನಮಣಿ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ ಅಭಿನಂದನಾ ಪತ್ರ, ಸ್ಮರಣಿಕೆ, ಫಲತಾಂಬೂಲದೊಂದಿಗೆ ರೂ.1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. 

ಸನಾತನ ಧರ್ಮದ ಸಾರಸರ್ವಸ್ವವನ್ನು ತಮ್ಮ ಅಮೋಘ ವಾಗ್ವೈಭವದ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಾರ ಮಾಡುತ್ತಿರುವ ಖ್ಯಾತ ಅಧ್ಯಾತ್ಮ ವಿದ್ವಾಂಸ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ ‘ಪಾಂಚಜನ್ಯ ಪುರಸ್ಕಾರ – 2025’ ಅನ್ನು ಪಾಂಚಜನ್ಯ ಪ್ರತಿಷ್ಠಾನವು ಪ್ರದಾನಿಸಲಿದೆ.

ಕುಂಭಕೋಣಂನ ಆರ್ಷ ಸಂಸ್ಕೃತಿಯ ಶ್ರೀವೈಷ್ಣವ ಪರಂಪರೆಯ ಹಿನ್ನೆಲೆಯಿಂದ ಬಂದ ಶ್ರೀ ದುಷ್ಯಂತ್ ಶ್ರೀಧರ್ ಅವರು, ಬಾಲ್ಯದಲ್ಲಿಯೇ ಸಂಸ್ಕೃತ, ಪುರಾಣ, ವೇದಾಂತ ಅಧ್ಯಯನದಲ್ಲಿ ಪರಿಣತಿ ಗಳಿಸಿದರು. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿಯಲ್ಲಿ ಉನ್ನತ ಶಿಕ್ಷಣ ಪಡೆದು ಕಾರ್ಪೊರೇಟ್ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದ ಅವರು, ಮುಂಬೈನ ರಾಮಾಯಣ ಉಪನ್ಯಾಸ ಸರಣಿಯ ಬಳಿಕ ಸಂಪೂರ್ಣವಾಗಿ ಅಧ್ಯಾತ್ಮ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು.

ವೇದಾಂತದ ಗಂಭೀರ ತತ್ತ್ವಗಳನ್ನು ಸಮಕಾಲೀನ ಬದುಕಿಗೆ ಅನ್ವಯಿಸುವ ವಿಶಿಷ್ಟ ಶೈಲಿಯ ಉಪನ್ಯಾಸಗಳ ಮೂಲಕ ಅವರು ವಿಶ್ವದ 23 ದೇಶಗಳ 125ಕ್ಕೂ ಅಧಿಕ ನಗರಗಳಲ್ಲಿ 3500ಕ್ಕೂ ಹೆಚ್ಚು ಪ್ರವಚನಗಳನ್ನು ನೀಡಿ ಭಾರತೀಯ ಧಾರ್ಮಿಕ ಪರಂಪರೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿದ್ದಾರೆ. ತಮಿಳು, ತೆಲುಗು, ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಅವರು ಬಹುಭಾಷಾ ವಿದ್ವಾಂಸರಾಗಿಯೂ ಗುರುತಿಸಿಕೊಂಡಿದ್ದಾರೆ.

ಲೇಖಕರಾಗಿ ದಿ ಪಿಯರ್ಲೆಸ್ ಪೊಯೆಟ್ ಅಂಡ್ ಪ್ರಿಸೆಪ್ಟರ್, ರಾಮಾಯಣಮ್ ಸಂಪುಟಗಳು, ಸಂಸ್ಕೃತ ಚಲನಚಿತ್ರ ಶಾಕುಂತಲಾ, ವೇದಾಂತ ದೇಶಿಕ ಚಿತ್ರ, ಪೆರಿಯವರ್ ವೆಬ್ ಸರಣಿ, ನೃತ್ಯರೂಪಕಗಳಂತಹ ಅನೇಕ ಸಾಂಸ್ಕೃತಿಕ ಕೊಡುಗೆಗಳು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ದೇವಾಲಯಗಳ ಸ್ವಾಯತ್ತತೆ, ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಸನಾತನ ಧರ್ಮದ ಮೇಲಿನ ಅವರ ಅಚಲ ನಿಷ್ಠೆಯನ್ನು ಪ್ರತಿಬಿಂಬಿಸುತ್ತವೆ.

ಆಧ್ಯಾತ್ಮದ ಅಸ್ತಿಭಾರದ ಮೇಲೆ ಸಮಾಜದ ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳ ಉನ್ನತಿಗೆ ಶ್ರಮಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನವು, ಸನಾತನ ಪರಂಪರೆಗೆ ಅಪಾರ ಕೊಡುಗೆ ನೀಡುತ್ತಿರುವ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ ‘ಪಾಂಚಜನ್ಯ ಪುರಸ್ಕಾರ – 2025’ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ.

ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಮುರಳಿ ಎಸ್. ಕಾಕೋಳು ತಿಳಿಸಿದ್ದಾರೆ.

ಪಾಂಚಜನ್ಯ ಪ್ರತಿಷ್ಠಾನ: ಗ್ರಾಮೀಣ ಅಭಿವೃದ್ಧಿಗೆ ದಶಕ ದಾಟಿದ ನಿಸ್ವಾರ್ಥ ಸೇವೆ

ಅಕ್ಷರ, ಆರೋಗ್ಯ ಮತ್ತು ಆಧ್ಯಾತ್ಮವನ್ನು ಮೂಲಮಂತ್ರವನ್ನಾಗಿ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನವು ತನ್ನ ಸ್ಥಾಪನೆಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಮಾಜಸೇವೆಗೆ ಕಟ್ಟಿಬದ್ಧವಾಗಿರುವ ಪ್ರತಿಷ್ಠಾನವು ಗ್ರಾಮೀಣ ಜನರ ಬದುಕಿಗೆ ಬೆಳಕಾಗುವ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬಂದಿದೆ.

 ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಇದರ ಪರಿಣಾಮವಾಗಿ ಶೇ.90ಕ್ಕಿಂತ ಅಧಿಕ ಫಲಿತಾಂಶ ದಾಖಲಾಗಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ಗುರುವಂದನೆ’ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಿಕ್ಷಕರಿಗೆ ಗೌರವ ಸಲ್ಲಿಸಲಾಗುತ್ತಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಕಲಾಪೋಷಣೆಗೆ ಒತ್ತು ನೀಡಿ ಶ್ರೀಕೃಷ್ಣ ಕಲಾದರ್ಶನ ಸಮೂಹಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಪ್ರತಿಷ್ಠಾನವು ಪ್ರತಿವರ್ಷ ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ “ಪಾಂಚಜನ್ಯ ಪುರಸ್ಕಾರ” ನೀಡಿ ಗೌರವಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೋಲಾರ್ ಲ್ಯಾಂಪ್ ವಿತರಣೆ, ಡಿಜಿಟಲ್ ಸಾಕ್ಷರತಾ ಕೇಂದ್ರ ಸ್ಥಾಪನೆ, ಸರ್ಕಾರಿ ಶಾಲಾ ಕೊಠಡಿಗಳ ನವೀಕರಣ ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

 ಇದಲ್ಲದೆ ಉಚಿತ ಆರೋಗ್ಯ, ನೇತ್ರ ಹಾಗೂ ದಂತ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಮಾನವಸೇವೆಯೇ ಮಾಧವನ ಸೇವೆ ಎಂಬ ಧ್ಯೇಯದೊಂದಿಗೆ ಪಾಂಚಜನ್ಯ ಪ್ರತಿಷ್ಠಾನವು ಮುಂದಿನ ದಿನಗಳಲ್ಲೂ ಗ್ರಾಮೀಣ ಅಭಿವೃದ್ಧಿಗೆ ತನ್ನ ಸೇವೆಯನ್ನು ನಿರಂತರವಾಗಿ ಮುಂದುವರಿಸಲಿದೆ ಎಂದು ಪ್ರತಿಷ್ಠಾನದ ಪದಾಧಿಕಾರಿಗಳು ತಿಳಿಸಿದ್ದಾರೆ.

 ವಿವರಗಳಿಗೆ ಸಂಪರ್ಕಿಸಿ : ೯೮೪೫೦ ೭೫೨೫೦

ಪೂರ್ವಭಾವಿ ಪ್ರಚಾರ ಹಾಗೂ ಕಾರ್ಯಕ್ರಮದಂದು ವರದಿ ಪ್ರಕಟಿಸುವ ಸಲುವಾಗಿ ಪತ್ರಿಕಾ ಛಾಯಾಚಿತ್ರಕಾರರು ಮತ್ತು ವರದಿಗಾರರನ್ನು ಕಳುಹಿಸಿಕೊಡಲು ಸವಿನಯ ಮನವಿ ಮಾಡಲಾಗಿದೆ.