ಪಲ್ಸ್ ಪೋಲಿಯೊ–2025ಕ್ಕೆ ಆಳಂದ್ ತಾಲೂಕು ಸಂಪೂರ್ಣ ಸಜ್ಜು
ಪಲ್ಸ್ ಪೋಲಿಯೊ–2025ಕ್ಕೆ ಆಳಂದ್ ತಾಲೂಕು ಸಂಪೂರ್ಣ ಸಜ್ಜು
214 ಬೂತ್, 217 ತಂಡಗಳು, 39,744 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಗುರಿ
ಆಳಂದ: ದೇಶದಾದ್ಯಂತ ನಡೆಯುತ್ತಿರುವ ಪಲ್ಸ್ ಪೋಲಿಯೊ–2025 ಅಭಿಯಾನದ ಭಾಗವಾಗಿ ಆಳಂದ್ ತಾಲೂಕಿನಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಲ್ಸ್ ಪೋಲಿಯೊ ಚಟುವಟಿಕೆ ಕರ್ನಾಟಕ ಸೇರಿದಂತೆ ಅಂಡಮಾನ್–ನಿಕೋಬಾರ್, ಆಂಧ್ರಪ್ರದೇಶ, ಛತ್ತೀಸ್‌ಗಢ, ಚಂಡೀಗಢ, ದಾದ್ರಾ ಮತ್ತು ನಾಗರ್ ಹವೇಲಿ, ದಮನ್ ಮತ್ತು ದೀವು, ಗೋವಾ, ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ, ಲಡಾಖ್, ಲಕ್ಷದ್ವೀಪ, ಮೇಘಾಲಯ, ಪುದುಚೇರಿ, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ.
ಆಳಂದ್ ತಾಲೂಕಿನಲ್ಲಿ ಒಟ್ಟು 214 ಪಲ್ಸ್ ಪೋಲಿಯೊ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, 3 ಮೊಬೈಲ್ ತಂಡಗಳು ಮತ್ತು 14 ಟ್ರಾನ್ಸಿಟ್ ತಂಡಗಳನ್ನು ನಿಯೋಜಿಸಲಾಗಿದೆ. ಐದು ವರ್ಷದೊಳಗಿನ ಒಟ್ಟು 39,744 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 66,850 ಮನೆಗಳನ್ನು ಒಳಗೊಂಡಂತೆ ಮನೆ–ಮನೆ ಭೇಟಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಆಳಂದ್ ಪಟ್ಟಣದಲ್ಲಿ 5 ಟ್ರಾನ್ಸಿಟ್ ತಂಡಗಳನ್ನು ಕಾರ್ಯನಿರ್ವಹಿಸಲಾಗಿದ್ದು, ಬಸ್ ನಿಲ್ದಾಣದಲ್ಲಿ 2, ನ್ಯಾಯಾಲಯ ತಡಕಲ್ ರಸ್ತೆಯಲ್ಲಿ 1, ಲಾಲ್ದೆ ಮಶಾಕ್ ದರ್ಗಾ ಬಳಿ 1 ಹಾಗೂ ಎಸ್.ಆರ್. ಶಾ ಮಕ್ಕಳ ಆಸ್ಪತ್ರೆ ಬಳಿ 1 ತಂಡ ನಿಯೋಜಿಸಲಾಗಿದೆ. ಅಲ್ಲದೆ ಕಡಗಂಚಿ, ನರೋಣಾ ಮಾದನ ಹಿಪ್ಪರಗಾ, ಮಾಡಿಯಾಳ, ಕೊರಳ್ಳಿ, ಭೂಸನೂರು ಫ್ಯಾಕ್ಟರಿ, ನಿಂಬರ್ಗಾ, ಧಂಗಾಪುರ ಹಾಗೂ ಖಜೂರಿ ಗಡಿಭಾಗದ ಬಸ್ ನಿಲ್ದಾಣಗಳಲ್ಲಿ ಒಟ್ಟು 9 ಟ್ರಾನ್ಸಿಟ್ ತಂಡಗಳು ಕಾರ್ಯನಿರ್ವಹಿಸಲಿವೆ.
ತಾಲೂಕಿನ ಎಲ್ಲಾ ಗ್ರಾಮಗಳು ಮತ್ತು ಪಟ್ಟಣ ಪ್ರದೇಶ ಒಳಗೊಂಡಂತೆ ಒಟ್ಟು 217 ತಂಡಗಳನ್ನು ರಚಿಸಲಾಗಿದ್ದು, 434 ತಂಡದ ಸದಸ್ಯರು ಹಾಗೂ 45 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಈ ಅಭಿಯಾನದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಡಿಸೆಂಬರ್ 21ರಂದು ಬೂತ್ ದಿನವಾಗಿ ಲಸಿಕೆ ನೀಡಲಾಗುತ್ತಿದ್ದು, ಡಿಸೆಂಬರ್ 22ರಿಂದ 24ರವರೆಗೆ ಮನೆ–ಮನೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಕಾರ್ಯ ನಡೆಯಲಿದೆ.
ಪಲ್ಸ್ ಪೋಲಿಯೊ–2025 ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಸರ್ಕಾರಿ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಮಾಧ್ಯಮಗಳು ಮಾಹಿತಿ ಪ್ರಸಾರಕ್ಕೆ ಸಹಕರಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬೂರೆ ಅವರು ಮನವಿ ಮಾಡಿದ್ದಾರೆ.
ವರದಿ ಡಾ.ಅವಿನಾಶ S . ದೇವನೂರ .
