ಕಾಲಮಾನದ ಸಾಕ್ಷಿ ಪ್ರಜ್ಞೆ ಚೆನ್ನಣ್ಣ ಹೆಸರಿನ ಪ್ರತಿಷ್ಠಾನ ಅಗತ್ಯ

ಕಾಲಮಾನದ ಸಾಕ್ಷಿ ಪ್ರಜ್ಞೆ ಚೆನ್ನಣ್ಣ ಹೆಸರಿನ ಪ್ರತಿಷ್ಠಾನ ಅಗತ್ಯ

*ಡಾ. ಚೆನ್ನಣ್ಣ ವಾಲೀಕಾರ ಪುಣ್ಯಸ್ಮರಣೆಯಲ್ಲಿ ಡಾ ಸಿದ್ದರಾಮ ಹೊನ್ಕಲ್ ಹೇಳಿಕೆ*

ಕಾಲಮಾನದ ಸಾಕ್ಷಿ ಪ್ರಜ್ಞೆ ಚೆನ್ನಣ್ಣ ಹೆಸರಿನ ಪ್ರತಿಷ್ಠಾನ ಅಗತ್ಯ

( ವರದಿ : ಡಾ. ಸದಾನಂದ ಪೆರ್ಲ)

ಕಲಬುರಗಿ : ಬಂಡಾಯ ಸಾಹಿತ್ಯವನ್ನು ಹುಟ್ಟು ಹಾಕಿದ ಕಲ್ಯಾಣ ಕರ್ನಾಟಕದ ಶ್ರೇಷ್ಠ ದಲಿತ ಸಾಹಿತಿ ಚೆನ್ನಣ್ಣ ವಾಲೀಕಾರ ಬದ್ಧತೆಗೆ ಹೆಸರಾದವರು. ಸರಕಾರವು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆ ಮಾಡುವುದು ಅತ್ಯಂತ ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಿರಿಯ ಸಾಹಿತಿ ಡಾ. ಸಿದ್ದರಾಮ ಹೊನ್ಕಲ್ ಹೇಳಿದರು.

   ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಡಿ. 16ರಂದು ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಡಿಯಲ್ಲಿ ಬಂಡಾಯ ಬರಹಗಾರ, ಹೋರಾಟಗಾರ, ಸಾಮಾಜಿಕ ಚಿಂತಕರಾದ ಡಾ ಚೆನ್ನಣ್ಣ ವಾಲೀಕಾರ ಅವರ ಆರನೆಯ ಪುಣ್ಯ ತಿಥಿಯ ನಿಮಿತ್ತ ನಡೆದ ವಿಶೇಷ ಉಪನ್ಯಾಸ ಮತ್ತು ಡಾ. ಚೆನ್ನಣ್ಣನವರ ಹೋರಾಟ ಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ನೋವಿನಲ್ಲಿ ಕಾವ್ಯ ಹುಟ್ಟುತ್ತದೆ ಎಂದು ಸಾರಿ ಪ್ರಖರ ಸಾಹಿತ್ಯವನ್ನು ನೀಡಿದ ಚೆನ್ನಣ್ಣ ವಾಲೀಕಾರ ಸಾಹಿತಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾದವರು. ದಲಿತ ಚಳುವಳಿಯನ್ನು ಹುಟ್ಟು ಹಾಕಿದ ಬಂಡಾಯದ ಧ್ವನಿ ಚೆನ್ನಣ್ಣ ಆಗಿದ್ದರು. ತಮ್ಮ ಬರಹಗಳ ಮೂಲಕ ಸಾಹಿತ್ಯ ಸಂವೇದನೆ ನೀಡಿ ಇತರ ಬರಹಗಾರರಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಬದ್ಧತೆಯ ಕವಿಯಾಗಿದ್ದರು. ಮಾನವೀಯ ಅಂತಃಕರಣದ ವ್ಯಕ್ತಿಯಾಗಿ ಸಾಹಿತ್ಯದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಮೇರು ಸಾಹಿತಿಯ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಿ ಅವರ ಸಾಹಿತ್ಯ ಮತ್ತು ಮಾನವೀಯ ಕೊಡುಗೆಗಳನ್ನು ಪ್ರಸಾರ ಮಾಡಿ ಕವಿಯನ್ನು ಶಾಶ್ವತವಾಗಿಸಬೇಕು ಎಂದು ಹೇಳಿದರು. 

   ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ ಎಚ್ ನಿರಗುಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಚೆನ್ನಣ್ಣ ವಾಲೀಕಾರ ಬಡವರ,ನಿರ್ಗತಿಕರ ನೋವಿಗೆ ಸ್ಪಂದಿಸಿ ಸಾಹಿತ್ಯ ಸೃಷ್ಟಿಸಿದವರು. ಸಮಾಜದಲ್ಲಿನ ಅಸಮತೋಲನ ತೊಡೆದು ಹಾಕಲು ಸಮ ಸಮಾಜದ ನಿರ್ಮಾಣಕ್ಕಾಗಿ ಐವತ್ತಕ್ಕೂ ಹೆಚ್ಚು ಕೃತಿಗಳ ಮೂಲಕ ಧ್ವನಿ ನೀಡಿದವರು. ನಿರಾಡಂಬರ ಮತ್ತು ಸರಳ ಜೀವನ ಶೈಲಿಯಲ್ಲಿ ಬದುಕಿದ ವಾಲೀಕಾರ ಅವರು ಎಲ್ಲರಿಗೂ ಮಾದರಿಯಾದವರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶೀಘ್ರದಲ್ಲಿ ಚೆನ್ನಣ್ಣ ವಾಲೀಕಾರ, ಶಾಂತರಸ ಮತ್ತು ಗೀತಾ ನಾಗಭೂಷಣ ಅವರ ಸಮಗ್ರ ಸಂಪುಟ ಹೊರ ತರುವ ಯೋಜನೆ ಹೊಂದಲಾಗಿದೆ. ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಧಿಕಾರದಿಂದ 25 ಸಾವಿರ ರೂ.ಮೌಲ್ಯದ ಪುಸ್ತಕಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು. 

    ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಅಮೃತಾ ಕಟಕೆಯವರು ಡಾ. ಚೆನ್ನಣ್ಣ ವಾಲೀಕಾರರ ಕಾವ್ಯ _ ತತ್ವ ಮತ್ತು ಸತ್ವ ಕುರಿತಾಗಿ ಮಾತನಾಡಿ ಚೆನ್ನಣ್ಣನವರು ಸಿಸ್ಟ ಸಾಹಿತ್ಯವನ್ನು ಒಡೆದು ಹಾಕಿ ಆಡು ಭಾಷೆಯ ಮೂಲಕ ಜನಸಾಮಾನ್ಯರಿಗಾಗಿ ಸಾಹಿತ್ಯವನ್ನು ಕಟ್ಟಿಕೊಟ್ಟವರು. ಬಂಡಾಯದ ಭಾವನೆಯನ್ನು ಹುಟ್ಟು ಹಾಕಿದ್ದ ಅವರ ಕಾವ್ಯ ಕ್ರಾಂತಿ, ಬಂಡಾಯ ಮತ್ತು ಹೋರಾಟದ ಧ್ವನಿಯನ್ನು ಹೊಂದಿದೆ. ನೋವಿಗೆ ಧ್ವನಿಯಾದ ಅವರ ಕಾವ್ಯವು ಕೇವಲ ಅಂಕ, ಉದ್ಯೋಗ ಗುರಿಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಶಕ್ತಿ ತುಂಬುವ ದಾರಿ ತೋರುತ್ತದೆ. ಇಂತಹ ಹಿರಿಯರ ಆದರ್ಶದ ಬೆಳಕಿನಲ್ಲಿ ಯುವಕರು ಮತ್ತು ಬರಹಗಾರರು ದಾರಿ ಕಂಡುಕೊಳ್ಳಬೇಕಾಗಿದೆ. ಈ ಭಾಗದ ಕವಿ ಮತ್ತು ಸಾಹಿತಿಗಳನ್ನು ನಿರ್ಲಕ್ಷ್ಯ ಮಾಡಿ ಗುರುತಿಸಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಮೌಲಿಕ ಸಾಹಿತ್ಯ ಗುಣ ಹೊಂದಿದ ಚೆನ್ನಣ್ಣ ನಾಡು ಕಂಡ ಒಬ್ಬ ಶ್ರೇಷ್ಠ ಸಾಹಿತಿ ಎಂದರು. 

   ರಾಜ್ಯದಲ್ಲಿ 27 ಪ್ರತಿಷ್ಠಾನಗಳಿದ್ದರೂ ಕರ್ನಾಟಕ ಭಾಗದಲ್ಲಿ ಶಾಂತರಸ ಚೆನ್ನಣ್ಣ ಹೆಸರಿನ ಪ್ರತಿಷ್ಠಾನಕ್ಕಾಗಿ ಇನ್ನು ಕೂಡ ಮೀನ ಮೇಷ ಎಣಿಸಲಾಗುತ್ತಿದೆ ಇದು ಪ್ರಾದೇಶಿಕ ಅಸಮಾನತೆಗೆ ಜ್ವಲಂತ ಸಾಕ್ಷಿಯಾಗಿದ್ದು ಸತತವಾಗಿ ಮನವಿಗಳನ್ನು ನೀಡಿ ಒತ್ತಾಯಿಸಲಾಗುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ.ಸ್ವಾಮಿ ರಾವ್ ಕುಲಕರ್ಣಿ ಹೇಳಿದರು. 

  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸವಿತಾ ತಿವಾರಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಶ್ರೀಮತಿ ಸಿದ್ದಮ್ಮ ಚೆನ್ನಣ್ಣ ವಾಲೀಕಾರ, ಡಾ. ಶಾರದಾ ದೇವಿ ಜಾಧವ್, ಡಾ. ಮಲ್ಲೇಶಪ್ಪ ಕುಂಬಾರ್ ವಿಜಯ್ ಕುಮಾರ್ ಸಾಲಿಮನಿ, ನಾಗಪ್ಪ ಟಿ ಗೋಗಿ, ಡಾ. ರವೀಂದ್ರ ಕುಮಾರ್ ಭಂಡಾರಿ, ಡಾ. ಬಲಭೀಮ ಸಾಂಗ್ಲಿ, ಅಪ್ಪಾ ಸಾಹೇಬ ವಾಲೀಕಾರ,ಡಾ. ಬಿ ಎಚ್ ಢವಳಪ್ಪ, ಡಾ. ರಾಜಕುಮಾರ್ ಸಲಗರ, ಪಿಡ್ಡೆಪ್ಪ ಜಾಲಗಾರ ಸುರಪುರ, ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಡಾ. ಕೆ ಎಸ್ ಬಂಧು ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿ ಶ್ಯಾಮಲಾ ಸ್ವಾಮಿ ನಿರೂಪಣೆ ಮಾಡಿದರು.ಸಂಗೀತ ಕಲಾವಿದರಾದ ಸಿದ್ಧಾರ್ಥ ಚಿಮ್ಮ ಇದಲಾಯಿ ಮತ್ತು ಸಂಗಡಿಗರು ಡಾ. ಚೆನ್ನಣ್ಣ ವಾಲೀಕಾರರ ಹೋರಾಟದ ಗೀತೆಗಳನ್ನು ಪ್ರಸ್ತುತಪಡಿಸಿದರು.