“ಶಬನಮ್ ಟ್ರಸ್ಟ್ ವತಿಯಿಂದ ಸಾಹಿತ್ಯ ಸ್ಮರಣೆ ಕಾರ್ಯಕ್ರಮಕ್ಕೆ ಮಂದಿಯ ಮೆಚ್ಚುಗೆ”
“ಶಬನಮ್ ಟ್ರಸ್ಟ್ ವತಿಯಿಂದ ಸಾಹಿತ್ಯ ಸ್ಮರಣೆ ಕಾರ್ಯಕ್ರಮಕ್ಕೆ ಮಂದಿಯ ಮೆಚ್ಚುಗೆ”
ಬೀದರ, 28-11-2025: ಬೀದರದ ಅರುಣೋದಯ ಪ್ರೌಢ ಶಾಲೆ ಯಲ್ಲಿ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ) ಭಾಲ್ಕಿ ಇವರ ವತಿಯಿಂದ “ರುಕ್ಮೋದ್ದಿನ್ ಇಸ್ಲಾಂಪುರ ಅವರ ಬದುಕು–ಬರಹ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೀದರ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ಮಾತನಾಡಿ, “ರುಕ್ಮೋದ್ದಿನ್ ಇಸ್ಲಾಂಪುರ ಅವರು ಸಾಹಿತ್ಯಾಭಿರುಚಿಯನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡವರು. ನಡೆ-ನುಡಿಗಳ ಮೂಲಕ ಸುಂದರವಾದ ವ್ಯಕ್ತಿತ್ವದ ಮಾದರಿಯಾಗಿದ್ದಾರೆ,” ಎಂದರು.
ವಿಶೇಷ ಉಪನ್ಯಾಸ ನೀಡಿದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿ.ಯು ಕಾಲೇಜಿನ ಉಪ ಪ್ರಾಚಾರ್ಯ ಲೋಕೇಶ್ ಉಡಬಾಳೆ ಅವರು, “ನಿಷ್ಠೆ, ಕಾಯಕದಲ್ಲಿ ಭಕ್ತಿ, ದೇವರಲ್ಲಿ ಗೌರವ, ಗುರು-ಹಿರಿಯರಲ್ಲಿ ಅಭಿಮಾನ — ಇವೆಲ್ಲ ನಮ್ಮ ನಾಡು ನುಡಿ ಸಂಸ್ಕೃತಿಯ ಮೂಲಾಧಾರ. ರುಕ್ಮೋದ್ದಿನ್ ಇಸ್ಲಾಂಪುರ ಅವರು ಜಾತಿ-ಮತ ಪಂಥಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಸಾರಿದ ಸಾಹಿತ್ಯ ಸೃಷ್ಟಿಸಿದ್ದಾರೆ. ಮಾನಸ ಗಂಗೋತ್ರಿ ಮಡಿಲಲ್ಲಿ ಎಂಬ ಶೀರ್ಷಿಕೆಯಲ್ಲಿ 61 ಲೇಖನಗಳು ಹಾಗೂ 11 ಕೃತಿಗಳನ್ನು ಜನರಿಗೆ ಅರ್ಪಿಸಿದ್ದಾರೆ,” ಎಂದು ಶ್ಲಾಘಿಸಿದರು.
ಆಶಯ ನುಡಿಗಳನ್ನು ಟ್ರಸ್ಟ್ ಅಧ್ಯಕ್ಷ ಡಾ. ಮಕ್ತುಂಬಿ ಎಂ ಮಾತನಾಡಿ, “ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಸಾಹಿತ್ಯದ ಶಕ್ತಿ ನಮ್ಮ ನಡುವೆ ಇಂದಿಗೂ ಜೀವಂತವಾಗಿದೆ,” ಎಂದು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರುಣೋದಯ ಪ್ರೌಢ ಶಾಲೆಯ ಆಡಳಿತಾಧಿಕಾರಿ ಸಂತೋಷ ಮಂಗಳೂರೆ ಅವರು ಮಾತನಾಡಿ, “ಮಹಾನ್ ಸಾಧಕರನ್ನು ಅರಿಯುವುದು ಜೀವನದ ಬೆಳವಣಿಗೆಗೆ ಮಹತ್ವದ ಹಂತ. ರುಕ್ಮೋದ್ದಿನ್ ಇಸ್ಲಾಂಪುರ ಅವರ ಸಾಹಿತ್ಯ ಅನೇಕರ ಬದುಕಿಗೆ ದಾರಿದೀಪವಾಗಿದೆ,” ಎಂದರು.
ಮುಖ್ಯ ಅತಿಥಿಗಳಾಗಿ ಸಂತೋಷ ಸೋಲಪುರೆ (ವಿದ್ಯಾಶ್ರೀ ಪ್ರೌಢ ಶಾಲೆ), ನರಸಾರೆಡ್ಡಿ (ಶ್ರೀ ಗುರು ಪಬ್ಲಿಕ್ ಶಾಲೆ ಅಧ್ಯಕ್ಷ), ಹಾಗೂ ಡಾ. ಚಂದ್ರಶೇಖರ ಬಿರಾದಾರ (ವಿಶ್ರಾಂತ ಪ್ರಾಧ್ಯಾಪಕರು) ಭಾಗವಹಿಸಿದ್ದರು.
ನಂದಿನಿ ದಶರಥ ಅವರಿಂದ ಪ್ರಾರ್ಥನೆ ಗೀತೆ ಜರುಗಿತು.ಕಾರ್ಯಕ್ರಮವನ್ನು ಮಮತಾ ಮಂಗಳೂರೆ ಸುಂದರವಾಗಿ ನಿರೂಪಿಸಿದರು.ಪ್ರಶಾಂತ ಚಕ್ರವರ್ತಿ ಸ್ವಾಗತಿಸಿದರು ಹಾಗೂ ರೇವಮ್ಮ ಪಟ್ನೆ ವಂದಿಸಿದರು.
