ಬೀದರದಲ್ಲಿ 'ಕನ್ನಡ ನಾಡು–ನುಡಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ಭವ್ಯವಾಗಿ ನೆರವೇರಿತು

ಬೀದರದಲ್ಲಿ 'ಕನ್ನಡ ನಾಡು–ನುಡಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ಭವ್ಯವಾಗಿ ನೆರವೇರಿತು

ಬೀದರದಲ್ಲಿ 'ಕನ್ನಡ ನಾಡು–ನುಡಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು 

ಬೀದರ, 25-11-2025:ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರ ಇವರ ಸಂಯುಕ್ತ ಆಶ್ರಯದಲ್ಲಿ “ಕನ್ನಡ ನಾಡು–ನುಡಿ” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತ್ಯಕರಾದ ಪುಣ್ಯವತಿ ವಿಸಾಜಿ ಅವರು ಮಾತನಾಡಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಸಮೃದ್ಧವಾಗಿದ್ದು, ಕನ್ನಡವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿದಾಗ ಮಾತ್ರ ಅದರ ಬೆಳವಣಿಗೆ ಸಾಧ್ಯವೆಂದು ನುಡಿದರು.

ಆಶಯ ನುಡಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಎಂ. ಮಚ್ಚೆ ಅವರು ಗಡಿ ಪ್ರದೇಶಗಳಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಒತ್ತಿಹೇಳಿ, ಮಿಶ್ರಭಾಷೆಯಿಂದ ಕನ್ನಡವನ್ನು ಶುದ್ಧೀಕರಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಿದ್ಧರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ನಾಗಪ್ಪ ಜಾನಕನೂರ ಅವರು ಕನ್ನಡ ಉಳಿವಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ಹೆಚ್ಚಬೇಕು ಎಂದು ತಿಳಿಸಿ, ಶಿಕ್ಷಣ, ಸಮಾಜ, ರಾಜಕೀಯ, ಆರ್ಥಿಕತೆಯಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡದ ಛಾಪು ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬೀದರ ಪ್ರಾಚಾರ್ಯ ಪಿ. ಮನೋಜಕುಮಾರ ಕುಲಕರ್ಣಿ ಅವರು ಅನ್ಯಭಾಷಿಕರಿಗೆ ಕನ್ನಡ ಕಲಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ಕನ್ನಡಿಗರ ಜೊತೆ ಇರುವುದೇ ಭಾಷಾ ಅಧ್ಯಯನಕ್ಕೆ ಮಾರ್ಗವಾಗುತ್ತದೆ ಎಂದು ಹೇಳಿದರು.

ಪ್ರೊ. ಶ್ರೀಕಾಂತ ಪಾಟೀಲ್ ಅವರು ಅನ್ಯಭಾಷಿಕರು ಕನ್ನಡಿಗರ ಜೊತೆಗಿದ್ದರೆ ಭಾಷೆ ಸಹಜವಾಗಿ ಕಲಿಯುತ್ತಾರೆ ಎಂದು ಅಭಿಪ್ರಾಯಿಸಿದರು.

ಡಾ. ಮಕ್ತುಂಬಿ ಎಂ, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ, ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಬೇಕೆಂದು ಹೇಳಿ, ಮಕ್ಕಳಿಗೆ ಪುಸ್ತಕಗಳನ್ನು ನೀಡಿದರೆ ಅವರು ಓದಿನತ್ತ ಆಕರ್ಷಿತರಾಗುತ್ತಾರೆ ಎಂದು ನುಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕು. ಕೀರ್ತನ ಪ್ರಾರ್ಥನೆ ಸಲ್ಲಿಸಿದರು.ಡಾ. ಮನೋಹರ ನಿರೂಪಣೆ ನಡೆಸಿದರು.ಪ್ರೊ. ಶ್ರೀನಿವಾಸ ಸ್ವಾಗತಿಸಿದರು. ಪಾರ್ವತಿ ಮೇತ್ರೇ ವಂದನೆ ಸಲ್ಲಿಸಿದರು.