ಪ್ರಣವಾನಂದ ಶ್ರೀಗಳ 700 ಕಿ.ಮೀ ಪಾದಯಾತ್ರೆಗೆ ಸಜ್ಜು: ಈಡಿಗ ಪಂಗಡಗಳ ಹಕ್ಕುಗಳಿಗಾಗಿ ಐತಿಹಾಸಿಕ ನಡಿಗೆ – ಡಾ. ಸದಾನಂದ ಪೆರ್ಲ
ಪ್ರಣವಾನಂದ ಶ್ರೀಗಳ ಪಾದಯಾತ್ರೆ ತಯಾರಿ ಪೂರ್ಣ ಕೋಟ ಉದ್ಘಾಟನೆ
ಪಕ್ಷ _ ಸರಕಾರದ ವಿರುದ್ಧವಲ್ಲ ಈಡಿಗ ಪಂಗಡಗಳ ಹಕ್ಕುಗಳಿಗೆ ಐತಿಹಾಸಿಕ 700 ಕೀ. ಮೀ.ನಡಿಗೆ : ಡಾ: ಸದಾನಂದ ಪೆರ್ಲ ಹೇಳಿಕೆ
ಕಲಬುರಗಿ : ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಭವಿಷ್ಯವನ್ನು ನಿರ್ಮಾಣ ಮಾಡಲು 18 ಬೇಡಿಕೆಗಳನ್ನು ಒತ್ತಾಯಿಸಿ ಪೂಜ್ಯ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಜ 6 ರಿಂದ ಫೆ. 12 ರವರೆಗೆ 41ದಿನಗಳ ವರೆಗೆ ನಡೆಸುವ ಇತಿಹಾಸಿಕ ಪಾದಯಾತ್ರೆ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು ಮಾಜಿ ಸಚಿವರು ಹಾಗೂ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಚಿತ್ತಾಪುರದ ಕರದಾಳ ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾಕ್ಟರ್ ಸದಾನಂದ ಪೆರ್ಲ ತಿಳಿಸಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಜ.4ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವಾತಂತ್ರ್ಯ ಬಂದು 78 ವರ್ಷ ಸಂದರೂ ಈಡಿಗ ಸೇರಿದಂತೆ 26 ಪಂಗಡಗಳ ಸಮಗ್ರ ಕಲ್ಯಾಣಕ್ಕೆ ಸರ್ಕಾರಗಳು ಮೀನ ಮೇಷ ಎಣಿಸುತ್ತಿದ್ದು ಸರಕಾರದ ಗಮನ ಸೆಳೆಯಲು ಇದೀಗ 18 ಬೇಡಿಕೆಗಳನ್ನು ಒತ್ತಾಯಿಸಿ ನಡೆಸುವ ಪಾದಯಾತ್ರೆಯ ಬಹಿರಂಗ ಸಭೆ ಚಿತಾಪುರದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜ. 6ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಕರದಾಳ ಮಠದಲ್ಲಿ ಅತಿ ಹಿಂದುಳಿದ ಮಠಗಳ ಆರು ಮಠಾಧೀಶರು ಬೆಳಗ್ಗೆ 9.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಪಾದಯಾತ್ರೆಯು ಸುಮಾರು 9 ಕಿಲೋಮೀಟರ್ ಕ್ರಮಿಸಿ ಚಿತಾಪುರ ಪಟ್ಟಣಕ್ಕೆ ಆಗಮಿಸಲಿದೆ.ನಂತರ ಬಜಾಜ್ ಕಲ್ಯಾಣ ಮಂಟಪ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ. ಮಾಜಿ ಸಚಿವ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು ತೆಲಂಗಾಣದ ಮಾಜಿ ಸಚಿವರಾದ ವಿ .ಶ್ರೀನಿವಾಸ ಗೌಡ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್. ಆರ್ ಶ್ರೀನಾಥ್, ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ ತುಮಕೂರು, ಮಾಜಿ ಸಂಸದ ಡಾ. ಉಮೇಶ್ ಜಾಧವ್ , ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕ ರಾಜಶೇಖರ ಕೋಟ್ಯಾನ್,ನಿತಿನ್ ಗುತ್ತೇದಾರ್,ಬಾಲರಾಜ್ ಗುತ್ತೇದಾರ್,ಶಾಸಕರಾದ ಡಾ.ಅವಿನಾಶ ಜಾಧವ್, ಬಸವರಾಜ ಮತ್ತಿಮುಡು,ಹಾಗೂ ಜಿಲ್ಲೆಯ ಮಾಜಿ ಶಾಸಕರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈ ಪಾದಯಾತ್ರೆ ಪ್ರತಿದಿನ 20 ಕೀ. ಮೀ.ಸಂಚರಿಸಲಿದೆ. ಚಿತ್ತಾಪುರದಿಂದ ಜ.7ರಂದು ಹೊರಟು ರಾವೂರ, ವಾಡಿ, ಶಹಾಬಾದ್ (ವಾಸ್ತವ್ಯ) ಮಾಡಲಿದೆ. ಜ 8ರಂದು ಜೇವರ್ಗಿ(ವಾಸ್ತವ್ಯ)9ರಂದು ಆಂದೋಲ,ಚಿಕ್ಕಮೂಡಬಾಳ(ವಾಸ್ತವ್ಯ) 10ರಂದು ಅಳ್ಳಳ್ಳಿ, ಶಹಾಪುರ(ವಾಸ್ತವ್ಯ)11ರಂದು ರಸ್ತಾಪುರ, ಕ್ರಾಸ್ ಬಿರನೂರ(ವಾಸ್ತವ್ಯ) 12ರಂದು ಹೂವಿನ ಹಡಿಗೆ, ಶಿರವಾರ ಕ್ರಾಸ್ (ವಾಸ್ತವ್ಯ) ಮೂಲಕ ಸಾಗಲಿದೆ.
ಕಳೆದ ಸರ್ಕಾರವು ನಿಗಮ ಘೋಷಿಸಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಪ್ರಸ್ತುತ ಸರ್ಕಾರವು ಎರಡುವರೆ ವರ್ಷ ಕಳೆದರೂ ಈಡಿಗ ನಿಗಮಕ್ಕೆ ಹಣಕಾಸಿನ ನೆರವು ನೀಡದೆ ನೂತನ ಅಧ್ಯಕ್ಷರ ನೇಮಕ ಮಾಡಿದರೂ ಅಧಿಕಾರ ವಹಿಸಲು ಅವಕಾಶ ನೀಡಲಿಲ್ಲ. ಅದಕ್ಕಾಗಿ 18 ಬೇಡಿಕೆಗಳನ್ನು ಒತ್ತಾಯಿಸಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ನಿಗಮಕ್ಕೆ 500 ಕೋಟಿ ರೂ. ಬಿಡುಗಡೆ , ಕುಲಕಸಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತರಿಗೆ ಪ್ಯಾಕೇಜ್ ಘೋಷಣೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆ, ಮಾಡುವುದು, ಅಬಕಾರಿ ಹರಾಜಿನಲ್ಲಿ ಕುಲಕಸುಬು ಕಳೆದುಕೊಂಡ ಈಡಿಗ ಸೇರಿ 26 ಸಮುದಾಯದವರಿಗಾಗಿ ಮೀಸಲಾತಿ ಘೋಷಣೆ ಮುಂತಾದ 18 ಬೇಡಿಕೆಗಳನ್ನು ಒತ್ತಾಯಿಸಲಾಗಿದೆ ಎಂದು ಡಾ.ಪೆರ್ಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಪೇಂದ್ರ ಗುತ್ತೇದಾರ್ ನಾಗೂರ, ವೆಂಕಟೇಶ ಎಂ.ಕಡೇಚೂರ್, ರಾಜೇಶ್ ದತ್ತು ಗುತ್ತೇದಾರ್, ವೆಂಕಟೇಶ್ ಗುಂಡಾನೂರು, ಮಹೇಶ್ ಗುತ್ತೇದಾರ್ ಹೊಳಕುಂದ, ಮಲ್ಲಿಕಾರ್ಜುನ ಕುಕ್ಕುಂದ ಹಾಗೂ ಬಿ. ಎಂ ರಾವೂರ್ ಉಪಸ್ಥಿತರಿದ್ದರು.
15 ಬಹಿರಂಗ ಸಭೆ_ ಗಣ್ಯರ ಪಾಲ್ಗೊಳ್ಳುವಿಕೆ
40 ದಿನಗಳ ಪಾದಯಾತ್ರೆಯಲ್ಲಿ ಒಟ್ಟು 15 ಬಹಿರಂಗ ಸಭೆಗಳು ನಡೆಯಲಿದೆ. ಜೇವರ್ಗಿ ಶಹಪುರ ಪಟ್ಟಣ ಶಿರಭಾರ ಮಾನ್ವಿ ಜವಳಗೆರೆ ಗಂಗಾವತಿ ಹೊಸಪೇಟೆ ಚಿತ್ರದುರ್ಗ ತುಮಕೂರು ಯಶವಂತಪುರ ಮುಂತಾದಡೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯದ ಸಮುದಾಯದ ನಾಯಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ಸುನಿಲ್ ಕುಮಾರ್, ಸಿ ಟಿ ರವಿ,ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಬೇಳೂರು ಗೋಪಾಲಕೃಷ್ಣ,
ಹರತಾಳು ಹಾಲಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸ್ವಾಮೀಜಿಯವರ ಜೊತೆ ಪ್ರತಿದಿನ ಕನಿಷ್ಠ 250 ರಷ್ಟು ಸಮಾಜ ಬಾಂಧವರು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಆಕರ್ಷಕ ರಥ ಸಿದ್ಧ
ಪಾದಯಾತ್ರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಹೊಂದಿದ ಅಲಂಕೃತ ರಥ ಸಿದ್ಧಗೊಳಿಸಲಾಗಿದೆ. ಇನ್ನೊಂದು ಡಿಜಿಟಲ್ ವಾಹನದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆಯ ಬ್ರಹ್ಮಶ್ರೀ ನಾರಾಯಣ ಗುರು ಸಿನಿಮಾ ಪ್ರದರ್ಶನ ಮಾಡಲಾಗುವುದು ಮತ್ತು ಗುರುಗಳ ಭಕ್ತಿಗೀತೆ ಮೊಳಗಲಿದೆ.
ಹಲವು ಸಂಘಟನೆಗಳ ಸಹಯೋಗ
ಪಾದಯಾತ್ರೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಆರ್ಯ ಈಡಿಗ ಸಂಘ, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ, ಬಿಲ್ಲವ ಸಂಘಟನೆ, ಧೀವರ, ನಾಮಧಾರಿ ,ತೀಯಾ ಸಂಘಟನೆಗಳು ಹಾಗೂ ಕಾಮಧೇನು ಮಹಿಳಾಸಂಘ ಕೈಜೋಡಿಸಿವೆ.
