ದಲಿತ ಯುವಕನನ್ನು ಪ್ರೀತಿಸಿದ್ದ ಗರ್ಭಿಣಿ ಯುವತಿಯ ಬರ್ಬರ ಹತ್ಯೆ ಖಂಡನೆ

ದಲಿತ ಯುವಕನನ್ನು ಪ್ರೀತಿಸಿದ್ದ ಗರ್ಭಿಣಿ ಯುವತಿಯ ಬರ್ಬರ ಹತ್ಯೆ ಖಂಡನೆ

ಭೀಮ ಆರ್ಮಿ ಕಮಲಾಪೂರ ತಾಲೂಕು ಘಟಕದಿಂದ ಪ್ರತಿಭಟನೆ

ದಲಿತ ಯುವಕನನ್ನು ಪ್ರೀತಿಸಿದ್ದ ಗರ್ಭಿಣಿ ಯುವತಿಯ ಬರ್ಬರ ಹತ್ಯೆ ಖಂಡನೆ

ಕಲಬುರಗಿ:ಹುಬ್ಬಳ್ಳಿ ತಾಲೂಕಿನ ಇನಾಂರಾಪೂರ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಲಿಂಗಾಯತ ಸಮುದಾಯದ ಗರ್ಭಿಣಿ ಯುವತಿಯನ್ನು ಅವಳ ತಂದೆ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಭೀಮ ಆರ್ಮಿ ಕಮಲಾಪೂರ ತಾಲೂಕು ಘಟಕದ ವತಿಯಿಂದ ಇಂದು ಕಮಲಾಪೂರ ತಾಲೂಕಿನ ಸೊಂತ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹತ್ಯೆಗೊಳಗಾದ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕುಟುಂಬಸ್ಥರು ದಲಿತ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಅಮಾನುಷವಾಗಿ ಕೊಲೆ ಮಾಡಿರುವುದು ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ, ಜಾತಿ ದೌರ್ಜನ್ಯ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಮಲಾಪೂರ ತಹಶೀಲ್ದಾರ್ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕೊಲೆ ಆರೋಪಿ ವಿರುದ್ಧ ತ್ವರಿತವಾಗಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಭೀಮ ಆರ್ಮಿ ಕಮಲಾಪೂರ ತಾಲೂಕು ಅಧ್ಯಕ್ಷ ಕೀರ್ತಿ ರತನ್ ಹೈಬತ್ತಿ, ನಿತಿನ್ ಪಂಗರಗಿ, ಸಂದೀಪ ದೊಡ್ಡಮನಿ, ಕಾಳಗಿ ತಾಲೂಕು ಭೀಮ ಆರ್ಮಿ ಅಧ್ಯಕ್ಷ ಸತೀಶ್ ಹೊಸಳ್ಳಿ, ಅಕ್ಷಯ ಮುತ್ತಂಗಿ, ಸಾಗರ ಬೋಯರ್, ಸುಜೀತ್ ಪೋಲಾ, ಅಂಬರೀಶ್ ಪಂಗರಗಿ, ಸುನಿಲ್ ಪೋಲಾ, ಮೈಲಾರಿ ಪಟವಾದ, ಯುವ ನಾಯಕ ಕಿರಣ್ ಹೈಬತ್ತಿ (ತಾಲೂಕು ಉಪಾಧ್ಯಕ್ಷರು) ಪ್ರದೀಪ್ ಪಂಗರಗಿ ದಲಿತ ಯುವ ಮುಖಂಡರು ಸೊಂತ ಸೇರಿದಂತೆ ಅನೇಕ ದಲಿತಪರ ಸಂಘಟನೆಗಳ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ವರದಿ: ಮಚಂದ್ರನಾಥ ಕಾಂಬಳೆ