ಜ.18 ಮತ್ತು 19 ರಂದು ಶ್ರೀಕೋರಿಸಿದ್ಧೇಶ್ವರ ರ ಜಾತ್ರಾ ಮಹೋತ್ಸವ.
ಜ.18 ಮತ್ತು 19 ರಂದು ಶ್ರೀಕೋರಿಸಿದ್ಧೇಶ್ವರ ರ ಜಾತ್ರಾ ಮಹೋತ್ಸವ.
8 ರಿಂದ ಧಾರ್ಮಿಕ ಸಾಂಸ್ಕೃತಿಕ.ವೈಭವ ಆರಂಭ
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ, ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.18 ಮತ್ತು 19 ರಂದು ಅದ್ಧೂರಿಯಾಗಿ ನೆರವೇರಲಿದೆ.
ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ದಿಗ್ದರ್ಶನದಲ್ಲಿ ನಡೆಯುವ ಜಾತ್ರಾಮಹೋತ್ಸವದ ಅಂಗವಾಗಿ ಹನ್ನೊಂದು ದಿನ ಮುಂಚಿತವಾಗಿಯೇ ಜ.8 ರಿಂದ ಶ್ರೀಮಠದಲ್ಲಿ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
18 ರಂದು ಅವರಾತ್ರಿ ಅಮಾವಾಸ್ಯೆಯ ದಿನದಂದು ಸಂಜೆ ಜಾತ್ರಾಮಹೋತ್ಸವದ ಅಧಿಕೃತ ಉದ್ಘಾಟನೆ, ಶಿವಾನುಭವ ಚಿಂತನ ನಡೆಯಲಿದ್ದು,ಶ್ರೀಮಠದ ವತಿಯಿಂದ ನಾಡಿನ ಪ್ರತಿಷ್ಠಿತ ಗಣ್ಯ ಸಾಧಕರಿಗೆ "ಶ್ರೀ ಸಿದ್ಧತೋಟೇಂದ್ರ" ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಅಂದೇ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ಭಕ್ತರ ಹರಕೆಯ ತನಾರತಿ ಮಹೋತ್ಸವ ನಡೆಯಲಿದ್ದು,ನಾಡಿನ-ಪರನಾಡಿನ ಸಾವಿರಾರು ಭಕ್ತರು ಹರಕೆ ಸಮರ್ಪಣೆ ಮಾಡಲಿದ್ದಾರೆ.
ಜ.19 ರಂದು ಸೋಮವಾರ ಸಂಜೆ 6 ಗಂಟೆಗೆ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಭವ್ಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.ಜಾನಪದ ಕಲಾತಂಡಗಳ ಕಲಾ ಪ್ರದರ್ಶನ, ವಿಶೇಷ ಮದ್ದು ಸುಡುವ ಕಾರ್ಯಕ್ರಮಗಳು ರಥೋತ್ಸವದ ಮೆರಗು ಹೆಚ್ಚಿಸಲಿವೆ.
ನಂತರ ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದ್ದು,ನಾಡಿನ ಹಿರಿಯ ಮತ್ತು ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜ.20 ರಿಂದ ಬೃಹತ್ ಜಾನುವಾರು ಜಾತ್ರೆ ನಡೆಯಲಿದೆ.ವಿವಿಧ ಭಾಗಗಳ ಸಾವಿರಾರು ತಳಿಯ ಜಾನುವಾರುಗಳ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ.ಉತ್ತಮ ರಾಸುಗಳಿಗೆ ಪ್ರಶಸ್ತಿ ಪ್ರದಾನ ಕೂಡ ನಡೆಯಲಿದೆ.ಗ್ರಾಮೀಣ ಕ್ರೀಡಾಕೂಟಗಳಾದ ಕೈಕುಸ್ತಿ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಜಾತ್ರಾಮಹೋತ್ಸವದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದ್ದು,ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ದಾಸೋಹ ಮನೆ ಸ್ವಚ್ಛತೆ,ಶ್ರೀಮಠದ ಆವರಣದ ಸಿಂಗಾರ ಸೇರಿದಂತೆ ಹಲವು ಕಾರ್ಯಗಳನ್ನು ಭಕ್ತರು ಸ್ವಯಂಪ್ರೇರಿತರಾಗಿ ಮಾಡುತ್ತಿದ್ದಾರೆ.
ನಾಡಿನ ಹರಗುರುಚರಮೂರ್ತಿಗಳು,ರಾಜಕೀಯ, ಸಾಮಾಜಿಕ,ಸಾಹಿತ್ಯ,ಶೈಕ್ಷಣಿಕ ಕ್ಷೇತ್ರಗಳ ದಿಗ್ಗಜರು ಸೇರಿದಂತೆ ಕಲಾವಿದರು ಭಾಗವಹಿಸುವ ಈ ವೈಭವದ ಜಾತ್ರಾ ಮಹೋತ್ಸವದಲ್ಲಿ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಲು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
