ಮಕ್ಕಳಲ್ಲಿ ಜಾಗೃತಿ ಮೂಡಿಸಲು 'ವಿಶ್ವ ಜಲ ದಿನ' ಮತ್ತು 'ವಿಶ್ವ ಅರಣ್ಯ ದಿನ' ಕಾರ್ಯಕ್ರಮಗಳು :ಸಚಿವ ಪ್ರಿಯಾಂಕ್ ಖರ್ಗೆ

ಮಕ್ಕಳಲ್ಲಿ ಜಾಗೃತಿ ಮೂಡಿಸಲು 'ವಿಶ್ವ ಜಲ ದಿನ' ಮತ್ತು 'ವಿಶ್ವ ಅರಣ್ಯ ದಿನ' ಕಾರ್ಯಕ್ರಮಗಳು :ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಾರ್ಚ್ 22ರಂದು 'ವಿಶ್ವ ಜಲ ದಿನ'ದ ಅಂಗವಾಗಿ ರಾಜ್ಯದ ಗ್ರಾಮ ಪಂಚಾಯತಿಗಳ ಅರಿವು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನೀರಿನ ಮಹತ್ವ, ಮಿತ ಬಳಕೆ, ಸಂರಕ್ಷಣೆ, ಮಳೆ ನೀರು ಕೊಯ್ಲು ಮತ್ತು ಸಂಗ್ರಹಣೆ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೊಳ್ಳುವ ವಿಧಾನ, ನೀರಿನ ಮೂಲಗಳು, ನೀರಿನ ಕೊಳವೆ ಮಾರ್ಗಗಳ ಸುರಕ್ಷತೆ, ಕೈಪಂಪ್ ಕೊಳವೆ ಬಾವಿಗಳು ಮತ್ತು ಕಿರುನೀರು ಸರಬರಾಜು ಯೋಜನೆಗಳ ನೈರ್ಮಲ್ಯ ಕಾಪಾಡುವಿಕೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕ್ಷೇತ್ರ ಭೇಟಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.
ಇದೇ ರೀತಿ, ಮಾರ್ಚ್ 21ರಂದು 'ವಿಶ್ವ ಅರಣ್ಯ ದಿನ'ವನ್ನು ಆಚರಿಸಲು ಯೋಜಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಿಂದ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಪ್ರತಿ ವಿದ್ಯಾರ್ಥಿಯೂ ಒಂದೊಂದು ಸಸಿ ನೆಟ್ಟು, ಅದನ್ನು ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಲಾಗುವುದು. ಸಸಿಗಳಿಗೆ ನೀರುಣಿಸಿ ಬೆಳೆಸುವ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವ ಜಾಗೃತಿಯ ಕಾರ್ಯಕ್ರಮವೂ ನಡೆಯಲಿದೆ.
ಈ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಸಹಕಾರಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟಿದ್ದಾರೆ