ತೃಪ್ತಿಯ ಕಾಯಕ ಸಮಾಜ ಸೇವೆಗೆ ಪ್ರೇರಣೆ : ಜೆ. ಟಿ ಸುಧಾಕರ್
ತೃಪ್ತಿಯ ಕಾಯಕ ಸಮಾಜ ಸೇವೆಗೆ ಪ್ರೇರಣೆ : ಜೆ. ಟಿ ಸುಧಾಕರ್
ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾನದಿಂದ 20 ಲಕ್ಷ ರೂ.ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ
ಕಲಬುರಗಿ : ಬೆಂಗಳೂರಿನ ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನದ ಸಮಾಜಸೇವಾ ಕಾರ್ಯದಿಂದ ಕೇವಲ ತೃಪ್ತಿಯಷ್ಟೇ ಅಲ್ಲ. ಅದು ಸಮಾಜ ಸೇವೆಗೆ ಇನ್ನಷ್ಟು ಪ್ರೇರಣೆಯಾಗಲಿ ಎಂಬುದೇ ಮುಖ್ಯ ಉದ್ದೇಶ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಜೆ.ಪಿ ಸುಧಾಕರ್ ಹೇಳಿದರು.
ಬೆಂಗಳೂರಿನ ಜೆ ಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳ 216 ಅರ್ಹ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಇಲ್ಲಿನ ಹೋಟೆಲ್ ಅಭಿಶ್ರೀ ಸಭಾಂಗಣದಲ್ಲಿ ಫೆ. 15ರಂದು ಉದ್ಘಾಟನೆ ಮಾಡಿ ಮಾತನಾಡಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ಸ್ಕಾಲರ್ ಶಿಪ್ ನೀಡುತ್ತಿದ್ದು ಉಳಿದ ಭಾಗದಲ್ಲಿ ಶೇಕಡಾ 80 ರಿಂದ 90 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇಕಡ 60ರಷ್ಟು ಅಂಕಗಳಿಸಿದರೂ ವಿದ್ಯಾರ್ಥಿ ಪುರಸ್ಕಾರ ನೀಡಲಾಗುತ್ತಿದೆ. ಪ್ರತಿಷ್ಠಾನವು ನಾರಾಯಣ ಗುರುಗಳ ತತ್ವದಡಿಯಲ್ಲಿ ಕಾಯಕ ನಿರತವಾಗಿದ್ದು ಸಮುದಾಯದ ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಉತ್ತಮ ಶಿಕ್ಷಣ ಪಡೆದು ದೇಶದ ಆದರ್ಶ ನಾಗರಿಕರಾಗಿ ಸಮಾಜಕ್ಕೆ ಸೇವಾ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಮಾತನಾಡಿ ಪ್ರತಿಷ್ಠಾನದ ಕೆಲಸ ಶ್ಲಾಘನೀಯವಾದುದು. ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಯಿಂದ ಉತ್ತಮ ಶಿಕ್ಷಣ ಹೊಂದಲು ಸಹಕಾರಿಯಾಗಲಿದೆ. ಸಮುದಾಯದ ಜನರ ಅಭಿವೃದ್ಧಿಗಾಗಿ ಸರಕಾರದ ಹಂತದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಚರ್ಚಿಸಲಾಗಿದೆ ಎಂದು ಹೇಳಿದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ಮಂಜಪ್ಪ ಜಿ , ಸದಸ್ಯರಾದ ಪೂರ್ಣೇಶ್ ಎಂ ಆರ್, ಕಾರ್ಯದರ್ಶಿ ಶ್ರೀಮತಿ ಕುಸುಮ ಅಜಯ್ , ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಬಿಎಸ್ಎನ್ಎಲ್ ನ ಡಿಜಿಎಂ ಅನಂತರಾಮ್ ಚೌಧರಿ, ಕೆ.ಎಸ್ ಮಲ್ಲಿಕಾರ್ಜುನ ಬೆಳಗಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶಿವಾನಂದ ಎಚ್.ಎಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳಾದ ಸತೀಶ್ ವಿ ಗುತ್ತೇದಾರ್, ವಿಭಾಗಿಯ ಸಂಚಾಲಕರಾದ ಸುರೇಶ್ ಗುತ್ತೇದಾರ್ ಬೆಡಸೂರ್, ಪ್ರಭಾಕರ ತಾನಾಜಿ , ಈಳಿಗೇರ್, ಆನಂದ ತೆಲಂಗ ಮಂಜುನಾಥ ಹಾನಗಲ್, ರಾಜ್ಯ ಸರ್ಕಾರಿ ಈಡಿಗರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ್ ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರು, ಹನುಮಯ್ಯ ಆಲೂರು ಮತ್ತಿತರ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ರಹ್ಮ ಶ್ರೀ ನಾರಾಯಣ ಗುರು ಹಾಗೂ ಜೆ.ಪಿ ನಾರಾಯಣಸ್ವಾಮಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಸಹನಾ ಪ್ರಾರ್ಥನಾ ಗೀತೆ ಹಾಡಿದರು. ರೂಪಾ ಅಬಕಾರಿ ಧನ್ಯವಾದವಿತ್ತರು. ವೆಂಕಟೇಶ ಮಾಸ್ತರ್ ಈಳಿಗೇರ್ ಕಾರ್ಯಕ್ರಮ ನಿರೂಪಿಸಿದರು.
