ಅಮೀರ ಖುಸ್ರೋ ಸೌಹಾರ್ದ ಸಂಸ್ಕೃತಿಯ ಪ್ರತೀಕ: ಡಾ. ವಿಕ್ರಮ ವಿಸಾಜಿ ಅಭಿಮತ.

ಅಮೀರ ಖುಸ್ರೋ ಸೌಹಾರ್ದ ಸಂಸ್ಕೃತಿಯ ಪ್ರತೀಕ: ಡಾ. ವಿಕ್ರಮ ವಿಸಾಜಿ ಅಭಿಮತ.
ಅಮೀರ ಖುಸ್ರೋ ಸೌಹಾರ್ದ ಸಂಸ್ಕೃತಿಯ ಪ್ರತೀಕ: ಡಾ. ವಿಕ್ರಮ ವಿಸಾಜಿ ಅಭಿಮತ.

ಅಮೀರ ಖುಸ್ರೋ ಸೌಹಾರ್ದ ಸಂಸ್ಕೃತಿಯ ಪ್ರತೀಕ: ಡಾ. ವಿಕ್ರಮ ವಿಸಾಜಿ ಅಭಿಮತ.

ಕಲಬುರಗಿ- ಅಕ್ಟೋಬರ್‌ ೨೯: ಇಂದು ಗುಲಬರ್ಗಾ ವಿಶ್ವವಿದ್ಯಾಲಯು, ಕಲಬುರಗಿಯ ಕನ್ನಡ ವಿಭಾಗದಲ್ಲಿ ಭಾಷಾ ಅಧ್ಯಯನ ವಿಭಾಗಗಳ ವತಿಯಿಂದ ಶ್ರೀ ಬೋಡೆ ರಿಯಾಜ್‌ ಅಹ್ಮದ್‌ ತಿಮ್ಮಾಪುರಿ ಅವರ ಅಮೀರ ಖುಸ್ರೋ ಕಾವ್ಯಲೋಕ ಅನುವಾದಿಕ ಕೃತಿಯ ಬಿಡುಗಡೆ ಸಮಾರಂಭ ಹಾಗೂ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.

ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಕಲಾನಿಕಾಯದ ಡೀನರಾದ ಪ್ರೊ. ಅಬ್ದುಲ್ ರಬ್ ಉಸ್ತಾದ್, ಅವರು ಅಮೀರ ಖುಸ್ರೋ ಕಾವ್ಯಲೋಕ ಕನ್ನಡಕ್ಕೆ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬೋಡೆಯವರು ಈಗಾಗಲೇ ಮನಲಗನ್ ಮಸನವಿ ಎಂಬ ಚಾರಿತ್ರಿಕ ಗ್ರಂಥವನ್ನು, ಇಂದ್ರಸಭಾ ಎಂಬ ನಾಟಕವನ್ನು ಕನ್ನಡಕ್ಕೆ ಅನುವಾದಗೊಳಿಸಿದ್ದಾರೆ. ಈಗ ಅವರು ಅಮೀರ ಖುಸ್ರೋನನ್ನು ಕರೆದುಕೊಂಡು ಬಂದಿರುವುದು ನಮ್ಮ ಹೆಮ್ಮೆಯಾಗಿದೆ. ಖುಸ್ರೋನ ಕಾವ್ಯಲೋಕವನ್ನು ಅನುವಾದಗೊಳಿಸಿ, ವರ್ತಮಾನದ ಕನ್ನಡ ಸಾಹಿತ್ಯಲೋಕ ಮತ್ತೆ ಅಮೀರ ಖುಸ್ರೋನ ಕಡೆಗೆ ನೋಡುವಂತೆ ಮಾಡಿದ್ದಾರೆ. ಇದಕ್ಕೆ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವೆ. ಇದು ನಮ್ಮ ಓದಿನ ಹಸಿವನ್ನು ಹೆಚ್ಚಿಸಿದೆ ಎಂದರು. ಯಾವುದೋ ಒಂದು ಭಾಷೆಯ ಕಾವ್ಯವನ್ನು ಇನ್ನೊಂದು ಭಾಷೆಗೆ ಅನುವಾದಿಸುವುದು, ಚಾರಿತ್ರಿಕ ಗ್ರಂಥವನ್ನು ಅನುವಾದಿಸುವಷ್ಟು ಸುಲಭಸಾಧ್ಯವಲ್ಲ. ಇಲ್ಲಿ ಮೂಲ ಲೇಖಕನ ಕಾವ್ಯದ ಭಾವಗಳಿಗೆ ಧಕ್ಕೆಬಾರದ ರೀತಿಯಲ್ಲಿ ಕಾವ್ಯವನ್ನು ಅನುವಾದಿಸಿಬೇಕಾಗುತ್ತದೆ. ಉರ್ದು ಭಾಷೆಯಲ್ಲಿ ಮೊದಲ ಗಜಲ್ ರಚಿಸಿದವರು ಅಮೀರ ಖುಸ್ರೋ ಎಂದರು. ಆ ಪದ್ಯವನ್ನೂ ಸಹ ಬೋಡೆಯವರು ಇಲ್ಲಿ ಅನುವಾದಿಸಿದ್ದಾರೆ. 

ಅಮೀರ ಖುಸ್ರೋ ಪಾರ್ಸಿ ಅಲ್ಲದೇ ಅನ್ಯ ಭಾಷೆಗಳಲ್ಲೂ ಗಜಲ್ ಕಾವ್ಯ ರಚಿಸಿಬಹುದೆಂದು ತೋರಿಸಿಕೊಟ್ಟ ಮೊದಲ ಜಾಗತಿಕ ಕವಿಮಾಗಿದ್ದರು ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಪಾರ್ಸಿ ಭಾಷೆಯನ್ನು ಓದುವುದು, ಅರ್ಥೈಸಿಕೊಳ್ಳುವುದೇ ಕಷ್ಟದ ಕೆಲಸವಾಗಿರುವಾಗ ಅದನ್ನು ಕನ್ನಡದಂತಹ ದ್ರಾವಿಡ ಭಾಷೆಗೆ ಅನುವಾದಿಸುವುದು ಇನ್ನಷ್ಟು ಕಠಿಣವಾದ ಕೆಲಸವೆನಿಸುತ್ತದೆ. ಬೋಡೆಯವರು ಅದನ್ನು ಈ ಅನುವಾದದ ಮೂಲಕ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.

ಪುಸ್ತಕವನ್ನು ಪರಿಚಯಗೊಳಿಸುತ್ತ ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರಾದ ಪ್ರೊ‌. ವಿಕ್ರಮ ವಿಸಾಜಿಯವರು, ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಈ ಕಟ್ಟಡ ಅನೇಕ ಭಾಷೆಗಳನ್ನು ಕೇಳಲು ವೈಯಕ್ತಿಕವಾಗಿ ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅವಕಾಶವನ್ನೊದಗಿಸಿದೆ. ಬೋಡೆ ರಿಯಾಜ್ ಅವರು ಮೂಲತಃ ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಸಹ ಅವರು ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಇದಕ್ಕೆ ಮೂಲ ಕಾರಣ ಅವರ ಕುಟುಂಬ ಮತ್ತು ತಿಮ್ಮಾಪುರಿ ಗ್ರಾಮದ ಪರಿಸರ. ಅವರ ತಂದೆಯವರು ಕೂಡ ಉರ್ದುವಿನ ದೊಡ್ಡ ಸಾಹಿತಿಯಾಗಿದ್ದರು. ಬೋಡೆಯವರು ರೂಮಿ ಕಾವ್ಯವನ್ನು ಅನುವಾದಿಸಿದ್ದಾರೆ. ಪ್ರಸ್ತುತ ಫಾರೂಖಿಯವರ ಕಾದಂಬರಿಯನ್ನು ಅನುವಾದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಹೇಳಿದರು. 

ಕನ್ನಡ ಸಾಹಿತ್ಯ ಲೋಕ ಈವರೆಗೂ ಉರ್ದು ಪಾರ್ಸಿ ಅರೆಬಿಕ್ ಸಾಹಿತ್ಯ ಲೋಕದ ಅನುಭಾವವನ್ನು ಒಗ್ಗಿಸಿಕೊಳ್ಳುವ ಕೆಲಸವನ್ನು ಆಗುಮಾಡಿಕೊಂಡಿಲ್ಲ. ಇದೊಂದು ವಿಷಾದದ ಸಂಗತಿ. ಈಗ ಆ ಕೊರತೆಯನ್ನು ನೀಗಿಸುವ ಕೆಲಸವನ್ನು ಬೋಡೆಯವರು ಈ ಅನುವಾದದ ಮೂಲಕ ನಿರ್ವಹಿಸಿದ್ದಾರೆ. ಅವರ ಈ ಹಿಂದಿನ ಅನುವಾದಗಳು ಕೂಡ ಇದೇ ಅನುಭವವನ್ನು ನಮಗೆ ಒದಗಿಸುತ್ತವೆ ಎಂದರು. ಖುಸ್ರೋವಿನ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ಬೋಡೆಯವರು ಮಾಡಿದ್ದಾರೆ. ಯಾವುದೇ ಕಾವ್ಯದ ಮೂಲವನ್ನೇ ಕೇಂದ್ರವಾಗಿಸಿಕೊಂಡು ಅಥವಾ ಅದಕ್ಕೆ ಹೆಚ್ಚು ಹತ್ತಿರವಾದ ಭಾವದಲ್ಲಿ ಅನುವಾದ ಮಾಡುವುದನ್ನು ನಾವು ಕೈಬಿಡಬೇಕು. ಬೇರೆ ಯಾವುದೇ ಭಾಷೆಯ ಕಾವ್ಯ, ಕಾದಂಬರಿಗಳ ಅನುವಾದ, ಕನ್ನಡದ ಯಾವ ಅನುಭವ ಲೋಕಕ್ಕೆ ಒಗ್ಗಿಕೊಳ್ಳುತ್ತದೆ ಎಂಬ ಅರಿವು ಅನುವಾದಕನಿಗಿರಬೇಕು. ಏಕೆಂದರೆ ಮೂಲ ಕಾವ್ಯದ ಜನಜೀವನ ಮತ್ತು ಅನುಭೂತಿಗಳು ಅನುವಾದಿತ ಭಾಷೆಯ ಜನಜೀವನ ಅನುಭೂತಿಗಳಿಗೆ ಬಹಳ ಅಂತರವಿರುತ್ತದೆ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಗರ ಪರಿಸರದವರಾದ ಬೋಡೆಯವರಿಗೆ ಈ ಅರಿವು ಸಹಜವಾಗಿಯೇ ದಕ್ಕಿದೆ. ನಮ್ಮಲ್ಲಿ ಗಂಗಾ ಜಮುನಾ ದೆಹಜೀಬ್ ಎಂಬ ಒಂದು ಮಾತಿದೆ‌. ಈ ಅನುವಾದ ಕಾರ್ಯದ ಮೂಲಕ ಬೋಡೆಯವರು ಆ ಸಂಸ್ಕೃತಿಗೆ ಭೀಮೆಯನ್ನು ಎರಕ ಹೋಯ್ದಿದ್ದಾರೆ ಎಂದರು.

ಅಮೀರ ಖುಸ್ರೋ ಬಗ್ಗೆ ಕನ್ನಡದಲ್ಲಿ ಬಂದ ಅತಿದೊಡ್ಡ ಪುಸ್ತಕ ಇದು. ನಮಗಿಂತ ಎಷ್ಟೋ ಶತಮಾನಗಳ ಕಾಲ ಹಳೆಯ ಕವಿಯನ್ನು ನಾವು ಕನ್ನಡದಲ್ಲಿ ಓದಲು ಕಲಬುರಗಿಯ ಬೋಡೆ ರಿಯಾಜ್ ಅಹ್ಮದ್ ಅವರು ಅನುವಾದಿಸುವವರೆಗೂ ಕಾಯಬೇಕಾಯಿತು. ಅಮೀರ ಖುಸ್ರೋ ಹಿಂದಿಯ ಬಹುತೇಕ ಉಪಭಾಷೆಗಳನ್ನು ಬಳಸಿ ತನ್ನ ಕಾವ್ಯಲೋಕವನ್ನು ಕಟ್ಟಿಕೊಂಡಿದ್ದಾನೆ. ಅಮೀರ ಖುಸ್ರೋನ ಕೌಟುಂಬಿಕ ಪರಿಸರ ಅವನಿಗೆ ಪಾರ್ಸಿ ಉರ್ದು ಹಿಂದಿ ಬ್ರಜ್ ಹೀಗೆ ಅನೇಕ ಭಾಷೆಗಳ ಸಂಪರ್ಕವನ್ನು ಒದಗಿಸಿತ್ತು. ಹಾಗಾಗಿ ಆತ ಜನಮಾನಸದ ಕವಿಯಾಗಿ ರೂಪುಗೊಂಡ. ಆದ್ದರಿಂದ ಅವನನ್ನು ಜನ ಪ್ರೀತಿಯಿಂದ 'ತೂತಿಯೇ ಹಿಂದ್' (ಹಿಂದೂಸ್ತಾನದ ಕೋಗಿಲೆ) ಎಂದು ಕರೆದರು. ಅಮೀರ ಖುಸ್ರೋ ಪ್ರೇಮದ ಬಗ್ಗೆ ಮಾಡಿರುವ ನಿರೂಪಣೆಗಳು ನಮ್ಮ ಅರಿವಿಗೆ ನಿಲುಕದ ಸಂಗತಿಗಳಾಗಿವೆ ಎಂದರು. ನಮ್ಮ ಕಲ್ಪನೆಗೆ ಮೀರಿದ ಉಪಮೆಗಳನ್ನು ಬಳಸಿಕೊಂಡು ಪ್ರೀತಿ ಪ್ರೇಮದ ಕುರಿತು ಅವರು ಕಾವ್ಯಗಳನ್ನು ರಚಿಸಿದ್ದಾರೆ. ಅವರ ಗುರು ನಿಜಮಾದ್ದೀನ್ ಔಲಿಯಾನ ಮೇಲೆ ಅಪಾರವಾದ ಗಾಢವಾದ ಸ್ನೇಹ ಒಡನಾಟ ಹೊಂದಿದ್ದ ಅಮೀರ್ ಖುಸ್ರೋ, ಆತ ತೀರಿಕೊಂಡ ಆರು ತಿಂಗಳಲ್ಲಿ ತಾನು ತೀರಿಕೊಂಡ. ಭಾರತೀಯ ಸಂಗೀತಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟ ವೈಬ್ರೆಂಟ್ ವ್ಯಕ್ತಿತ್ವ ಅಮೀರ್ ಖುಸ್ರೋವಿನದು ಎಂದರು.

ಸೂಫಿಗಳ ಮೇಲೆ ಸಂಶೋಧನೆಯನ್ನು ಕೈಗೊಂಡ ಡಾ. ಪರ್ವೀನ್ ಸುಲ್ತಾನಾ ಅವರು ಮಾತನಾಡುತ್ತಾ, ಅನುವಾದಿತ ಕವಿ ಬೋಡೆ ರಿಯಾಜ್ ಅಹ್ಮದ್ ಅವರ ವ್ಯಕ್ತಿತ್ವದ ಪರಿಚಯವನ್ನು ಹಾಗೂ ಸಾಹಿತ್ಯ ಲೋಕದಲ್ಲಿನ ಅವರ ಏಳಿಗೆಯ ಕುರಿತು ಮಾಹಿತಿಯನ್ನು ನೀಡಿದರು. ಈ ಲೋಕಕ್ಕೆ ಸೂಫಿಗಳ ಬಹಳ ದೊಡ್ಡ ಕೊಡುಗೆ ಎಂದರೆ ಸೌಹಾರ್ದತೆ. ಅದು ಈ ಹೊತ್ತಿನ ಜರೂರು ಎನಿಸಿದೆ ಎಂದರು.

ಅನುವಾದಿತರಾದ ಶ್ರೀ ಬೋಡೆ ರಿಯಾಜ್ ಅಹ್ಮದ್ ಅವರು ಮಾತನಾಡುತ್ತಾ, ನಮಗೆ ಆಂಗ್ಲ ಭಾಷೆಯೊಂದಿಗೆ ಬಹುತೇಕ ಯುರೋಪಿಯನ್ ಸಾಹಿತ್ಯ ಕನ್ನಡದಲ್ಲಿ ಓದಲು ಸಿಗುತ್ತದೆ. ಆದರೆ ನಮ್ಮವರೇ ಆದ ಬಂದೇನವಾಝ್ ರ ಸಾಹಿತ್ಯದ ಬಗ್ಗೆಯಾಗಲಿ, ಅವರ ಕೃತಿಗಳ ಬಗ್ಗೆಯಾಗಲಿ ನಮಗೆ ಪರಿಚಯವಿಲ್ಲವೆಂದು ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಆ ಕೊರತೆಯ ನಿವಾರಣೆಗಾಗಿ ನಾನು ಈ ಅನುವಾದವನ್ನು ಕೈಗೆತ್ತಿಕೊಂಡೆ ಎಂದ ಅವರು, ತಮ್ಮ ಬೆನ್ನ ಹಿಂದಿನ ಸಾಂಸ್ಕೃತಿಕ ಒತ್ತಡದ ಅನುಭವಗಳನ್ನು ಹಂಚಿಕೊಂಡರು. ಈ ಕಾವ್ಯದಲ್ಲಿ, ಸೂಫಿ ಗುಣವೇ ಅಧಿಕವಾಗಿರುವುದರಿಂದ ನಾನು ಛಂದಸ್ಸಿಗೆ ಹೆಚ್ಚು ಒತ್ತು ಕೊಡದೇ ಕಾವ್ಯದ ಲಾಕ್ಷಣಿಕ ಅಂಶಗಳಿಗೆ ಹೆಚ್ಚು ಹತ್ತಿರದಲ್ಲಿರುವಂತೆ ಈ ಕಾವ್ಯವನ್ನು ಅನುವಾದಿಸಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಚ್. ಟಿ. ಪೋತೆ ಯವರು ಮಾತನಾಡುತ್ತಾ, ಇಂತಹ ಕಾರ್ಯಕ್ರಮದ ಆಯೋಜನೆಗೆ ವಿಭಾಗಕ್ಕೆ ಅವಕಾಶಕೊಟ್ಟ ಅನುವಾದಕರಾದಿಯಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಕಲ್ಯಾಣ ಕರ್ನಾಟಕದಲ್ಲಿ ವಚನ ಸೂಫಿ ತತ್ವಪದಗಳ ಕುರಿತು ಎಂ. ಎಂ‌. ಕಲ್ಬುರ್ಗಿಯವರ ಮಾದರಿಯಲ್ಲಿ ಕೆಲಸ ಮಾಡಿಸುವ ಮನಸ್ಸುಗಳ ಕೊರತೆ ಇದೆ. ಬೋಡೆ ಯವರು ಅದನ್ನು ಸ್ವಲ್ಪ ಪ್ರಮಾಣದಲ್ಲಿ ನೀಗಿಸುವ ಕೆಲಸವನ್ನು ಅನುವಾದದ ಮೂಲಕ ಮಾಡುತ್ತಿದ್ದಾರೆ ಎಂದರು. ಅನುಭಾವಿಕ ಸಾಹಿತ್ಯ ಮತ್ತು ಭಾಷೆಗಳಿಗೂ ಶಿವದಾರ ಮತ್ತು ಜನಿವಾರ ಹಾಕಿದವರು ನಾವು. ಭಾರತಕ್ಕೆ ಬರುವ ಯಾವುದೇ ವಾದಗಳಿಗೂ ಈ ತಾಪತ್ರಯ ತಪ್ಪಿದ್ದಲ್ಲ ಎಂದರು. ನಮ್ಮಲ್ಲಿ ಪ್ರೀತಿ ಇದೆ, ಆದರೆ ಅದನ್ನು ಹಂಚುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಖುಸ್ರೋ ಸಾಹು ಮಹಾರಾಜ ಅಂಬೇಡ್ಕರ್ ಅಂಥವರ ಅಗತ್ಯ ವರ್ತಮಾನದ ಸಮಾಜಕ್ಕಿದೆ. ನಮ್ಮ ಸಮಾಜದಲ್ಲಿ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದೊಡ್ಡ ದೊಡ್ಡ ಕಂದಕಗಳನ್ನು ಸೃಷ್ಟಿಸುತ್ತಿರುವ ಮನಸ್ಸುಗಳನ್ನು ಅರಿಯುವ ಕೆಲಸ ಆಗಬೇಕಿದೆ ಎಂದರು. ಪರಸ್ಪರ ಅರಿವನ್ನು ಹಂಚುವ ಕೆಲಸವನ್ನು ನಾವು ಮಾಡಬೇಕಿದೆ.

ಡಾ. ಪ್ರಕಾಶ ಸಂಗಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶಿವಶರಣಪ್ಪ ಕೊಡ್ಲಿ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಅಪ್ಪಾರಾವ ಅಕ್ಕೋಣಿ, ಪಿ. ನಂದಪ್ಪ, ಡಿ. ನಡಾಫ್, ಡಾ. ಸೂರ್ಯಕಾಂತ ಸುಜ್ಯಾತ್, ಡಾ.‌ ಹನುಮಂತ ಮೇಲಕೇರಿ, ಕನ್ನಡ ವಿಭಾಗದ ಉಪನ್ಯಾಸಕ ವೃಂದದವರು ಭಾಗವಹಿಸಿದ್ದರು.