ಗೋಮಾತೆ ಸಂರಕ್ಷಣೆ ಪುಣ್ಯದ ಕಾರ್ಯ – ಶಿವರಾಜ ಅಂಡಗಿ
ಗೋಮಾತೆ ಸಂರಕ್ಷಣೆ ಪುಣ್ಯದ ಕಾರ್ಯ – ಶಿವರಾಜ ಅಂಡಗಿ
ಕಲಬುರಗಿ: ಗೋಮಾತೆ ಮಾನವರ ಎರಡನೇ ತಾಯಿ. ಒಂದು ಗೋವಿಗೆ ಆಹಾರ ನೀಡಿದರೆ ಮುಕೋಟಿ ದೇವರಿಗೆ ನೈವೇದ್ಯ ನೀಡಿದಷ್ಟು ಫಲ ದೊರಕುತ್ತದೆ. ತಾಯಿ ಹಾಲಿಗಿಂತಲೂ ಹೆಚ್ಚು ಗೋವಿನ ಹಾಲನ್ನು ಕುಡಿದು ಬೆಳೆದ ನಾವೆಲ್ಲರೂ ಗೋವಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಟೇಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.
ಅವರು ಗದ್ದುಗೆ ಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳ ಹುಟ್ಟುಹಬ್ಬದ ಅಂಗವಾಗಿ ಮಕ್ತಂಪೂರ ಮಠದಲ್ಲಿ ಗೋಶಾಲೆ ನಿರ್ಮಾಣ ಮಾಡಿ ಗೋಮಾತೆ ಪೂಜೆಗೆ ಒಂದೆಡೆ ಜನರನ್ನು ಸಂಗ್ರಹಿಸುವಂತಹ ಅದ್ಭುತ ಕಾರ್ಯ ಕೈಗೊಂಡಿರುವ ಪೂಜ್ಯ ಚರಲಿಂಗ ಮಹಾಸ್ವಾಮಿಗಳಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಕವಿ ದ.ರಾ. ಬೇಂದ್ರೆಯವರ ಹುಟ್ಟುಹಬ್ಬವೂ ಆಗಿರುವುದರಿಂದ ಅವರ ಭಾವಚಿತ್ರವನ್ನು ಪೂಜ್ಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿನೋದಕುಮಾರ ಜೇನೆವರಿ, ಕನ್ನಡ ಉಪನ್ಯಾಸಕರಾದ ಡಾ. ನಾನಾಗೌಡ ಪಾಟೀಲ, ನ್ಯಾಯವಾದಿ ಬಸವರಾಜ ಅಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
