ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ
ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ
ಕಲಬುರಗಿ,ಫೆ.6(ಕಲ್ಯಾಣ ಕಹಳೆ ವಾರ್ತೆ) ಜಿಲ್ಲಾಧಿಕಾರಿ ವಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಶುಕ್ರವಾರ ಕಲಬುರಗಿ ನಗರ ಸುತ್ತಾಡಿ ಮಹಾನಗರ ಪಾಲಿಕೆಯಿಂದ ನಗರದಾದ್ಯಂತ ನಡೆಯುತ್ತಿರುವ ರಸ್ತೆ ಸುಧಾರಣೆ, ದುರಸ್ತಿ, ಒಳಚರಂಡಿ ನಿರ್ಮಾಣ, ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು.
ಕಲಬುರಗಿ ಕೇಮದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ಕೆ.ಕೆ.ಆರ್.ಡಿ.ಬಿ.ಯ 2 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಕಲ್ವರ್ಟ್ ಕಾಮಗಾರಿ ಪರಿಶೀಲಿಸಿದ ಡಿ.ಸಿ., ಇದು ಜನಸಂದಣಿ ಹೆಚ್ಚಿರುವ ಪ್ರದೇಶ ಇದಾಗಿರುವುದರಿಂದ ಕೂಡಲೆ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಮತ್ತು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಿದರು.
ನಂತರ ಹಳೇ ಜೇವರ್ಗಿ ರಸ್ತೆಯ ಮೋಹನ ಲಾಡ್ಜ್ ನಿಂದ ರಾಮ ಮಂದಿರ ಸರ್ಕಲ್ ವರೆಗೆ ಎನ್.ಸಿ.ಎ.ಪಿ ಯೋಜನೆಯಡಿ ಸುಮಾರು 1.20 ಕೋಟಿ ರೂ. ವೆಚ್ಚದೊಂದಿಗೆ ಮೂರು ವರ್ಷಗಳ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 87 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಪಾಪ್ ಹೋಲ್ ಫಿಲ್ಲಿಂಗ್ ಮಶೀನ್ ಗಳಿಂದ ನಡೆಯುತ್ತಿರುವ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಹ ಪರಿವೀಕ್ಷಿಸಿದರು.
ಇದಲ್ಲದೆ ನ್ಯಾಷನಲ್ ಗ್ರೀನ್ ಟ್ರಿಬುನಲ್ ಯೋಜನೆಯಡಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಖರ್ಗೆ ಪೆಟ್ರೋಲ್ ಪಂಪ್ ನಿಂದ ಅನ್ನ ಪೂರ್ಣ ಕ್ರಾಸ್ ರಸ್ತೆಯ ಸ್ವದೇಶಿ ಭವನ ವರೆಗೆ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸಹ ಡಿ.ಸಿ ಮತ್ತು ಪಾಲಿಕೆ ಆಯುಕ್ತರು ಜಂಟಿಯಾಗಿ ಪರಿಶೀಲಿಸಿದರು. ಖರ್ಗೆ ಪೆಟ್ರೋಲ್ ಪಂಪ್ ಮತ್ತು ರಾಮ ಮಂದಿರ ಸರ್ಕಲ್ ನಲ್ಲಿನ ಸಂಚಾರಿ ಸಿಗ್ನಲ್‌ಗಳನ್ನು ಒಂದು ವಾರದೊಳಗೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾಧಿಕಾರದ 4 ಸರ್ಕಲ್ ಸೌಂದರ್ಯೀಕರಣ:
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ತಮ್ನ ಅನದಾನದಲ್ಲಿ ನಗರದ ರಾಮ ಮಂದಿರ ಸರ್ಕಲ್, ಅಫಜಲಪೂರ ಸರ್ಕಲ್, ಆಳಂದ ರಸ್ತೆ, ಹುಮನಾಬಾದ ರಸ್ತೆ ಸರ್ಕಲ್‌ಗಳನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಶುಕ್ರವಾರ ರಾಮ ಮಂದಿರ ಸರ್ಕಲ್ ಸ್ಥಳವನ್ನು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಪ್ರಾಧಿಕಾರದ ಪ್ರಭಾರಿ ಆಯುಕ್ತ ಶಿವಕುಮಾರ ಪಾಟೀಲ, ಎ.ಇ.ಇ. ಸುಭಾಷ ನಾಯಕ್ ಸ್ಥಳದಲ್ಲಿದ್ದು, ಯೋಜನೆ ಕುರಿತು ಡಿ.ಸಿ.ಗೆ ಮಾಹಿತಿ ನೀಡಿದರು. ಇದಲ್ಲದೆ ಪಾಲಿಕೆಯಿಂದ ಖರ್ಗೆ ಪೆಟ್ರೋಲ್ ಪಂಪ್ ಸರ್ಕಲ್ ಅಭಿವೃದ್ದಿಪಡಿಸುತ್ತಿರುವುದರಿಂದ ಸದರಿ ಸ್ಥಳವು ಪರಿಶೀಲಿಸಲಾಯಿತು.
ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತ ದತ್ತಾತ್ರೇಯ, ಕಾರ್ಯನಿರ್ವಾಹಕ ಅಭಿಯಂತ ಪುರುಷೋತ್ತಮ, ಕಲಬುರಗಿ ನಗರ ಸಂಚಾರ ವಿಭಾಗದ ಡಿ.ಎಸ್.ಪಿ ಸುಧಾ ಆದಿ, ಸಿ.ಪಿ.ಐ ಶಕೀಲ ಅಂಗಡಿ ಸೇರಿದಂತೆ ಪಾಲಿಕೆ ಮತ್ತು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಡಲ್ಟ್ ಅಧಿಕಾರಿಗಳು ಜೊತೆಯಲ್ಲಿದ್ದರು.
