ಶಿರೂರು ಶ್ರೀ ವೇದವರ್ಧನ ಸ್ವಾಮೀಜಿಯವರಿಂದ ಕರಾವಳಿಗರಿಗೆ ಪರ್ಯಾಯ ಉತ್ಸವಕ್ಕೆ ಆಹ್ವಾನ

ಶಿರೂರು ಶ್ರೀ ವೇದವರ್ಧನ ಸ್ವಾಮೀಜಿಯವರಿಂದ ಕರಾವಳಿಗರಿಗೆ ಪರ್ಯಾಯ ಉತ್ಸವಕ್ಕೆ ಆಹ್ವಾನ
ಕಲಬುರಗಿ : ಪರ್ಯಾಯ ಸಂಚಾರಕ್ಕಾಗಿ ಕಲಬುರಗಿಗೆ ಅ. 15ರಂದು ರಾಮ ಮಂದಿರಕ್ಕೆ ಆಗಮಿಸಿದ ಉಡುಪಿಯ ಶಿರೂರು ಮಠದ ಪೂಜ್ಯ ಶ್ರೀ ವೇದ ವರ್ಧನ ಸ್ವಾಮೀಜಿಯವರಿಗೆ ಡಾ. ಸದಾನಂದ ಪೆರ್ಲ ನೇತೃತ್ವದಲ್ಲಿ ಹಾರ್ದಿಕವಾಗಿ ಸ್ವಾಗತ ನೀಡಲಾಯಿತು ಮತ್ತು ಉಡುಪಿಯಲ್ಲಿ ಮುಂದಿನ ವರ್ಷ ಜರಗುವ ಪರ್ಯಾಯ ಉತ್ಸವಕ್ಕೆ ಶ್ರೀಗಳು ಕರಾವಳಿಯ ಜನತೆಗೆ ಆಹ್ವಾನ ನೀಡಿದರು.
ಕಲಬುರಗಿಯಲ್ಲಿ ಕರಾವಳಿಯ ಪಾದೂರು ರಾಮಕೃಷ್ಣ ತಂತ್ರಿ ಮತ್ತು ಸರಸ್ವತಿ ತಂತ್ರಿಯವರು ಶ್ರೀರಾಮ ಮಂದಿರ ನಿರ್ಮಾಣದಿಂದ ತೊಡಗಿ ದಕ್ಷಿಣ ಕನ್ನಡದವರಿಂದ ಈ ಭಾಗದಲ್ಲಿ ನಡೆಯುವ ಸೇವೆಯ ಬಗ್ಗೆ ಪೂಜ್ಯರಿಗೆ ಡಾ. ಸದಾನಂದ ಪೆರ್ಲ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ವೇದವರ್ಧನ ಸ್ವಾಮೀಜಿಯವರು ಕರಾವಳಿಯ ಜನರ ಸೇವಾ ಕೈಂಕರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಲಬರಗಿ ಜಿಲ್ಲೆಯಲ್ಲಿರುವ ಸಮಸ್ತ ಕರಾವಳಿಯ ಬಂಧುಗಳು ಮುಂದಿನ ವರ್ಷ ಜನವರಿ 18ಕ್ಕೆ ಉಡುಪಿಯಲ್ಲಿ ನಡೆಯಲಿರುವ ಪರ್ಯಾಯೋತ್ಸವದಲ್ಲಿ ಭಾಗವಹಿಸಿ ಶಿರೂರು ಮಠದ ಚೊಚ್ಚಲ ಸರ್ವಜ್ಞ ಪೀಠಾರೋಹಣದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯ ಹಾಗೂ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ಶ್ರೀ ರಾಮ ಮಂದಿರದ ವಕ್ತಾರರಾದ ಕಿಶೋರ್ ದೇಶಪಾಂಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ವ್ಯವಸ್ಥಾಪಕರಾದ ಗಣಪತಿ ಮಳಿಂಜೆ, ದ. ಕ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಿಕ್ಷಕಿ ರೇಣುಕಾ ಶಿರ್ಲಾಲು, ಸುನಿಲ್ ಶೆಟ್ಟಿ, ಪಂಚಮಿ ಹೋಟೆಲ್ ನ ಸಂತೋಷ್ ಪೂಜಾರಿ, ಶ್ರೀಕಾಂತ್ ಉಪಸ್ಥಿತರಿದ್ದರು.