ಜಾನಪದ ಝೇಂಕಾರದಿಂದ ಕೈದಿಗಳ ಮನ ಪರಿವರ್ತನೆಗೆ ಪ್ರೇರಣೆ-ಪ್ರಭಾಕರ್ ಜೋಶಿ

ಜಾನಪದ ಝೇಂಕಾರದಿಂದ ಕೈದಿಗಳ ಮನ ಪರಿವರ್ತನೆಗೆ ಪ್ರೇರಣೆ-ಪ್ರಭಾಕರ್ ಜೋಶಿ
ಕಲಬುರಗಿ: ಅ.೧೬-ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಕಲಬುರ್ಗಿ ಹಾಗೂ ಕಲಬುರ್ಗಿ ಕೇಂದ್ರ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ಇಂದು ಕಲಬುರಗಿ ನಗರದ ಕೇಂದ್ರ ಕಾರಾಗೃಹ ಒಳ ಆವರಣದಲ್ಲಿ “ಜಾನಪದ ಝೇಂಕಾರ” ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಪ್ರಭಾಕರ್ ಜೋಶಿ ಅವರು, “ಸಮಯದ ಒತ್ತಡದಲ್ಲಿ ತಪ್ಪುಗಳು ಆಗಬಹುದು, ಆದರೆ ಅದನ್ನು ಸರಿಪಡಿಸಿಕೊಳ್ಳಲು ಮನಸ್ಸು ಬೇಕು. ಕಾರಾಗೃಹದಿಂದ ಬಿಡುಗಡೆಗೊಂಡ ನಂತರ ಒಳ್ಳೆಯ ಮಾನವರಾಗಿ ಬಾಳುವುದೇ ನಿಜವಾದ ಯಶಸ್ಸು” ಎಂದು ಹೇಳಿದರು.
ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕಿ ಡಾ. ಅನೀತಾ ಆರ್ ಅವರು ಮಾತನಾಡಿ, “ಮೊದಲು ನೀನು ಬದಲಾಗು — ಆಗ ಸಮಾಜ ಬದಲಾಗುತ್ತದೆ. ಕೈದಿಗಳು ಕೆಟ್ಟ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡರೆ ತಮ್ಮ ಜೀವನ ಸಾರ್ಥಕವಾಗುತ್ತದೆ. ಇಂಥಾ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಪರಿವರ್ತನೆಗೆ ಸಹಕಾರಿ” ಎಂದು ಹೇಳಿದರು .ಮುಂದುವರೆದು “ನಾನು ಕಲಬುರ್ಗಿ ಕೇಂದ್ರ ಕಾರಾಗೃಹದ ಅಧಿಕಾರಿಯಾಗಿ ಒಂದು ವರ್ಷ ಪೂರೈಸಿದ್ದು ನನಗೆ ತೃಪ್ತಿ ತಂದಿದೆ” ಎಂದು ಭಾವ ವ್ಯಕ್ತಪಡಿಸಿದರು.
ಕಜಾಪ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ ಮಾತನಾಡಿ “ಜಾನಪದ ಪರಂಪರೆ ಜನರ ಜೀವನದ ಭಾಗವಾಗಿದೆ. ಅದನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು” ಕೇಂದ್ರ ಕಾರಾಗೃಹ ಕೊಪ್ಪಳದಲ್ಲಿ ಇಂತಹ ಕಾರ್ಯಕ್ರಮಗಳು ನಡೆದರೆ ಕೈದಿಗಳಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯಎಂದು ಅಭಿಪ್ರಾಯಪಟ್ಟರು.
ಕಸಾಪ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ಮಾತನಾಡಿ “ಏನಾದರೂ ಆಗು — ಆದರೆ ಮೊದಲು ಮಾನವನಾಗು” ಎಂಬ ಸಂದೇಶ ನೀಡಿದರು.
ಮುಕ್ತ ವಿಶ್ವವಿದ್ಯಾಲಯ ನಿರ್ದೇಶಕ ಸಂಗಮೇಶ ಹೀರೇಮಠ ಅವರು “ಕೈದಿಗಳು ಉನ್ನತ ಶಿಕ್ಷಣ ಪಡೆಯಲು ಬಯಸಿದರೆ ಅದಕ್ಕಾಗಿ ಅವಕಾಶವಿದೆ. ಅದರ ಸದುಪಯೋಗ ಪಡೆದುಕೊಳ್ಳಿ” ಎಂದು ಪ್ರೇರೇಪಿಸಿದರು.
ಜೂನಿಯರ್ ಕಿಶೋರ್ ಎಂದೇ ಖ್ಯಾತರಾದ ರಮೇಶ್ ಜ್ಯೋತಿ ಅವರ ಮನಮೋಹಕ ಗೀತ ಗಾಯನ ಕಾರ್ಯಕ್ರಮದ ಆಕರ್ಷಣೆಯಾಗಿದೆ.
ಸಿ.ಎಸ್. ಮಾಲಿ ಪಾಟೀಲ ಹಾಗೂ ನಾರಾಯಣ ಜೋಶಿ ಅವರ ಛಾಯಾಚಿತ್ರ ಕಲಾ ಪ್ರದರ್ಶನವೂ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ,ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಅಧಿಕಾರಿಗಳಾದ ಚನ್ನಪ್ಪ ಯಾಟಗಲ್ ಹಾಗೂ ಇತರ ಸಿಬ್ಬಂದಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಭೀಮಾಶಂಕರ್ ಡಾಂಗೆ ಅವರು ಸ್ವಾಗತಿಸಿದರು, ಶಿಕ್ಷಕ ನಾಗರಾಜ್ ಮೂಲಗೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಮಾದೇವಿ ಮಾಲಿ ಪಾಟೀಲ, ಸೋಮಶೇಖರ ನಂದಿಧ್ವಜ ,ಭಾನು ಕುಮಾರ್, ಹನುಮಂತ ರಾಯ, ಸುನಂದ, ಸಾಗರ್ ಪಾಟೀಲ, ಶ್ರೀಮಂತ ಪಾಟೀಲ, ಪುಂಡಲಿಂಗ ಹಾಗೂ ಶ್ಯಾಮ್ ಬಿದ್ರಿ ಸೇರಿದಂತೆ ಕಾರಾಗೃಹ ಸಿಬ್ಬಂದಿ ಉಪಸ್ಥಿತರಿದ್ದರು.