ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಿರಲಿ: ಶಾಸಕ ಪ್ರಭು ಚವ್ಹಾಣ

ಕಮಲನಗರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ
ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಿರಲಿ: ಶಾಸಕ ಪ್ರಭು ಚವ್ಹಾಣ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.13ರಂದು ಕಮಲನಗರ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿ ಸಾಕಷ್ಟು ಬೆಳೆ ನಷ್ಟವಾಗಿದೆ. ರೈತರು ಕಂಗಾಲಾಗಿದ್ದಾರೆ. ಹಿಂಗಾರು ಹಂಗಾಮಿನಲ್ಲಾದರೂ ರೈತರಿಗೆ ಲಾಭ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ಹೇಳಿದರು.
ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರಗಳನ್ನು ಸರಿಯಾಗಿ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ರೈತರು ಈಗಲೇ ಹೆಚ್ಚಿನ ಸಂಕಷ್ಟದಲ್ಲಿದ್ದಾರೆ. ಅವರೊಂದಿಗೆ ಸೌಜನ್ಯತೆಯಿಂದ ಮಾತನಾಡಿಸಬೇಕೆಂದು ನಿರ್ದೇಶನ ನೀಡಿದರು.
ಅತೀವೃಷ್ಠಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲೇ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಉದ್ದು, ಹೆಸರು, ಜೋಳ, ಸೋಯಾ, ತೊಗರಿ ಸೇರಿದಂತೆ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ರೈತರಿಗೆ ಬಹಳ ಅನ್ಯಾಯವಾಗಿದೆ ಎಂದು ಹೇಳಿದರು.
ಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ. ಕೃಷಿ, ತೋಟಗಾರಿ ಹಾಗೂ ಕಂದಾಯ ಸಚಿವರು ಭೇಟಿ ನೀಡಿ ರೈತರ ಸಮಸ್ಯೆ ಕೇಳಿಲ್ಲ. ಮುಖ್ಯಮಂತ್ರಿಗಳು ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಮುಂಬರುವ ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿ ಸರ್ಕಾರ ಪ್ರತಿ ಎಕರೆಗೆ ಕನಿಷ್ಟ 25 ಸಾವಿರ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪ ಪ್ರಾಸ್ತಾವಿಕ ಮಾತನಾಡಿ, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರಿಗೆ ವಿತರಿಸಲು ಎಲ್ಲ ರೈತ ಸಂಪರ್ಕ ಕೇಂದ್ರಗಳು ಸಜ್ಜುಗೊಂಡಿವೆ. ಬೇಡಿಕೆ ಬಂದಲ್ಲಿ ಹೆಚ್ಚುವರಿ ಬೀಜ ತರಿಸಿ ಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಆನಂದ ಹಮಲಾಪೂರೆ ಮುಖಂಡರಾದ ಮಲ್ಲಿಕಾರ್ಜುನ ದಾನಾ, ಕಿರಣ ಪಾಟೀಲ, ಬಾಬುರಾವ ತೋರ್ಣಾವಾಡಿ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಬಸವರಾಜ ಪಾಟೀಲ, ರಾಜಕುಮಾರ ಅಲಬಿದೆ ರೈತ ಮುಖಂಡ ಪ್ರದೀಪ ಕುಲಕರ್ಣಿ ಸೇರಿದಂತೆ ಇತರರಿದ್ದರು.