ಶಿವಶರಣೆಯರ ಕುರಿತು ವಿಶೇಷ ಲೇಖನಗಳ ಸಂಕಲನ ಪುಸ್ತಕ ಗಮನ ಸೆಳೆದ ಗೃಹಪ್ರವೇಶ ಆಮಂತ್ರಣ
*ಶಿವಶರಣೆಯರ ಕುರಿತು ವಿಶೇಷ ಲೇಖನಗಳ ಸಂಕಲನ ಪುಸ್ತಕ
ಗಮನ ಸೆಳೆದ ಗೃಹಪ್ರವೇಶ ಆಮಂತ್ರಣ
ಕಮಲಾಪುರ: ಮದುವೆ, ಗೃಹ ಪ್ರವೇಶ, ಸಭೆ, ಸಮಾರಂಭಕ್ಕೆ ನೂರಾರು ರೂಪಾಯಿ ಖರ್ಚುಮಾಡಿ ತಯ್ಯಾರಿಸಿದ ಯಾವುದೇ ಆಮಂತ್ರಣ ಪತ್ರಿಕೆಯು ಆಯಾ ಕಾರ್ಯಕ್ರಮ, ಸಮಾರಂಭ ದಿನದ ವರೆಗೆ ಮಾತ್ರ ಮೌಲ್ಯ ಹೊಂದಿರುತ್ತದೆ. ಮಾರನೆ ದಿನ ಅದು ನಿರುಪಯುಕ್ತವಾಗಿ, ಕಸದ ಬುಟ್ಟಿ ಸೇರುತ್ತದೆ. ಆದರೆ ಇಲ್ಲೊಬ್ಬರು ಪುಸ್ತಕ ರೂಪದಲ್ಲಿ ಆಮಂತ್ರಣ ಪತ್ರಿಕೆ ಪ್ರಕಟಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದ ನಿವಾಸಿ ಸಾಹಿತಿ ಡಾ. ಶರಣಬಸಪ್ಪ ವಡ್ಡಣಕೇರಿ ತಮ್ಮ ಗೃಹ ಪ್ರವೇಶದ ಆಮಂತ್ರಣವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಅವರ ವೈಚಾರಿಕತೆ, ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಲಬುರಗಿಯ ಲಂಗರ ಹನುಮಾನ ದೇವಾಲಯದ ಬಳಿ ಮನೆ ನಿರ್ಮಿಸಿಕೊಂಡಿರುವ ವಡ್ಡಣಕೇರಿ ನ.3 ರಂದು ಗೃಹ ಪ್ರವೇಶ ನಿಶ್ಚಯಿಸಿದ್ದಾರೆ. ಈ ಸಮಾರಂಭಕ್ಕೆ ತಮ್ಮ ನೆಂಟರಿಷ್ಟರು, ಬಂದುಗಳು, ಸ್ನೇಹತರನ್ನು ಆಹ್ವಾನಿಸಲು ಸುಮಾರು 500 ಆಮಂತ್ರಣ ತಯ್ಯಾರಿಸಬೇಕಿತ್ತು. ಪ್ರತಿ ಆಮಂತ್ರಣಕ್ಕೆ ಕನಿಷ್ಠ ಮುವತ್ತರಿಂದ ಗರಿಷ್ಠ ನೂರು ರುಪಾಯಿ ವರೆಗೆ ಖರ್ಚಾಗುವ ಸಾಧ್ಯತೆ ಇತ್ತು. ಕನಿಷ್ಠ ₹35 ರ ಆಮಂತ್ರಣ ಪ್ರಕಟಿಸಿದರು 500 ಪ್ರತಿಗೆ 17 ರಿಂದ 20 ಸಾವಿರ ವೆಚ್ಚವಾಗುತಿತ್ತು. ಇಷ್ಟು ಖರ್ಚು ಮಾಡಿ ಪ್ರಕಟಿಸಿದ ಆಮಂತ್ರಣ ಪತ್ರಿಕೆ ಕೇವಲ ಒಂದು ವಾರದಲ್ಲಿ ನಿರುಪಯುಕ್ತವಾಗಿ ಕಸದ ಬುಟ್ಟಿ ಸೇರುತ್ತದೆ ಎಂಬುದನ್ನು ಮನಗಂಡರು.
ತಮ್ಮ ಆಮಂತ್ರಣ ಪತ್ರಿಕೆ ಸುಧೀರ್ಗ ಸಮಯದ ವರೆಗೆ ಇರಬೇಕು. ಸದಾ ಉಪಯುಕ್ತವಾಗಿರಬೇಕು ಎಂದರೆ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದು ನಿಶ್ಚಯಿಸಿದರು. ‘ಶಿವಶರಣೆಯರು’ ಎಂಬ ಪುಸ್ತಕ ಪ್ರಕಟಿಸದ್ದು ಹಿಂಬದಿ ಪುಟದಲ್ಲಿ ತಮ್ಮ ಗೃಹಪ್ರವೇಶದ ಆಮಂತ್ರಣ ವಿಷಯ ಮುದ್ರಿಸಿದ್ದಾರೆ. ಈ ಪುಸ್ತಕದಲ್ಲಿ ಅಕ್ಕಮಹಾದೇವಿ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಗೊಗ್ಗವೆ, ಕಾಳವ್ವೆ, ಬೊಂತಾದೇವಿ,ಮೋಳಿಗೆ ಮಹಾದೇವಿ, ಗುಡ್ಡಾಪುರ ದಾನಮ್ಮ, ಸತ್ಯಕ್ಕ, ವೀರಮ್ಮ, ಮುಕ್ತಾಯಕ್ಕ,ಲಕ್ಕಮ್ಮ, ಲಿಂಗಮ್ಮ, ದುಗ್ಗಳೆ, ರಾಯಮ್ಮ,ಕಾವಮ್ಮ,ರೇಕಮ್ಮ ಸೇರಿದಂತೆ ಇತರೆ ಶಿವಶರಣೆಯರ ಪರಿಚಯದ ಜೊತೆಗೆ ಅವರ ತಾತ್ವಿಕ ನೆಲೆಗಟ್ಟಿನ ವೈಚಾರಿಕ ಲೇಖನಗಳಿವೆ. ಪ್ರತಿ ಪುಸ್ತಕಕ್ಕೆ 35 ರೂ ಖರ್ಚಾಗಿದ್ದು 500 ಪ್ರಕಟಗೊಳಿಸಿದ್ದಾರೆ. ಸಾಮನ್ಯ ಆಮಂತ್ರಣ ಪತ್ರಿಕೆ ತಯ್ಯಾರಿಕೆಗೆ ತಗಲುವ ವೆಚ್ಚದಲ್ಲೆ ಈ ಪುಸ್ತಕ ರೂಪದ ಆಮಂತ್ರಣಗಳು ಪ್ರಕಟಗೊಂಡಿದ್ದು, ತಮ್ಮ ಗೃಹಪ್ರವೇಶದ ನೆನೆಪು ಜನರಲ್ಲಿ ಸದಾ ಕಾಲ ಉಳಿಯುವಂತಾಗಿದೆ. ಆಮಂತ್ರಣ ಪತ್ರಿಕೆ ವಿತರಿಸುವಾಗಲೂ ಮೆಚ್ಚುಗೆ ವೆಕ್ತವಾಗುತ್ತಿದೆ.
