ಸಮೀಕ್ಷೆ ಶಿಕ್ಷಕನಿಗೆ ಕಾಲು ಮುರಿತ ಪರಿಹಾರಕ್ಕಾಗಿ ಸರ್ಕಾರಕ್ಕೆ ನೌಕರರ ಸಂಘ ಒತ್ತಾಯ

ಸಮೀಕ್ಷೆ ಶಿಕ್ಷಕನಿಗೆ ಕಾಲು ಮುರಿತ ಪರಿಹಾರಕ್ಕಾಗಿ ಸರ್ಕಾರಕ್ಕೆ ನೌಕರರ ಸಂಘ ಒತ್ತಾಯ
ಸಮೀಕ್ಷೆ ಕಾರ್ಯದಲ್ಲಿ ಅಪಘಾತಕ್ಕೀಡಾದ ಸಿಬ್ಬಂದಿಗೆ ಪರಿಹಾರ ಒದಗಿಸಲು ಸರ್ಕಾರಿ ನೌಕರರ ಸಂಘದ ಮನವಿ
ಕಲಬುರಗಿ: ಜಿಲ್ಲೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಸಿಬ್ಬಂದಿಗಳಿಗೆ ಸರ್ಕಾರದ ವತಿಯಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಶಾಖೆ ಮನವಿ ಸಲ್ಲಿಸಿದೆ.
ಜಿಲ್ಲಾ ಅಧ್ಯಕ್ಷ ಬಸವರಾಜ ಬಳೂಂಡಗಿ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಅಪಘಾತಕ್ಕೀಡಾದ ಸಿಬ್ಬಂದಿಗಳಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಬೇಕು ಹಾಗೂ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು, ಅಪಘಾತಕ್ಕೀಡಾದ ಸಿಬ್ಬಂದಿಗಳ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ತರಿಸಿಕೊಂಡು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಚಿಕಿತ್ಸೆ ವೆಚ್ಚ ಒದಗಿಸುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ, ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಅನಾವಶ್ಯಕ ತೊಂದರೆ ನೀಡದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ, ರಾಜ್ಯಪರಿಷತ್ ಸದಸ್ಯ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷ ಎಂ.ಬಿ. ಪಾಟೀಲ, ಸಂಜೀವ ಬಗಲಿ, ಸಂಗಣ್ಣ ಜಾಬಾ, ಸಂತೋಷ ಗಂಗೂ, ಶಶಿಕಾಂತ್ ಹೋಳ್ಕರ್, ಗುರುಶರಣ, ಮಹೇಶ್ ಬಸರಕೋಡ, ರಾಜಶೇಖರ ಕುರಿಕೋಟಾ ಸೇರಿದಂತೆ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಮೀಲ್ ಇಮ್ರಾನ್, ಮಲ್ಲಿಕಾರ್ಜುನ, ಮುರಳಿಧರ ತೊಣಪೆ, ರಾಜೇಶ್ ನೀಲಹಳ್ಳಿ, ಸತೀಶ್ ಜಾಮಗೊಂಡ, ವಿಜಯಕುಮಾರ್ ಪಾಟೀಲ, ಚನ್ನಬಸಪ್ಪ ಬಿರಾದಾರ್, ಸೂರ್ಯಕಾಂತ್, ಪರಮೇಶ್ವರ ದೇಸಾಯಿ, ದೇವೇಂದ್ರಪ್ಪ ಗಣಮುಖಿ ಹಾಗೂ ಇತರರು ಉಪಸ್ಥಿತರಿದ್ದರು.