ಮುತ್ತಗಾ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ರಿಜ್ ಕಮ್ ಬ್ಯಾರೇಜ್ ಮುಳುಗಡೆ – ರೈತರ ಬೇಸರ, ಜನಜೀವನ ಅಸ್ತವ್ಯಸ್ತ

ಮುತ್ತಗಾ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ರಿಜ್ ಕಮ್ ಬ್ಯಾರೇಜ್ ಮುಳುಗಡೆ – ರೈತರ ಬೇಸರ, ಜನಜೀವನ ಅಸ್ತವ್ಯಸ್ತ

ಶಹಾಬಾದ ತಾಲೂಕು: ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಶಹಾಬಾದ ತಾಲ್ಲೂಕಿನ ಮುತ್ತಗಾ ಗ್ರಾಮದ ಬಳಿ ಇರುವ ಬ್ರಿಜ್ ಕಮ್ ಬ್ಯಾರೇಜ್ ಮುಳುಗಡೆ ಆಗಿದ್ದು, ಜನರು ಭಾರೀ ತೊಂದರೆಗೆ ಒಳಗಾಗಿದ್ದಾರೆ. ಮುತ್ತಗಾ–ಭಂಕೂರ ನಡುವಿನ ಎರಡೂ ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಮುತ್ತಗಾ ಗ್ರಾಮದಿಂದ ಶಹಾಬಾದ ಪಟ್ಟಣ ಹಾಗೂ ಕದ್ದರಗಿ–ಬಾಗೋಡಿ–ಯರಗಲ್ಲ–ಚಿತ್ತಾಪುರ ಕಡೆ ಹೋಗುವ ಜನರಿಗೆ ಸಂಚಾರದ ಭಾರೀ ಅಡಚಣೆ ಉಂಟಾಗಿದೆ.

ಮಳೆನೀರಿನಿಂದ ರಸ್ತೆ ಪಕ್ಕದ ಜಮೀನಿನಗಳು ಕೂಡ ಮುಳುಗಡೆಗೊಂಡಿದ್ದು, ಕಬ್ಬು, ತೊಗರಿ ಮತ್ತು ಹತ್ತಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ರೈತರು ಸಂಕಟಕ್ಕೆ ಸಿಲುಕಿದ್ದಾರೆ. ಮುತ್ತಗಾ ಗ್ರಾಮದಲ್ಲಿ ಮನೆಗಳ ಮುಂದೆ ಹಾಗೂ ಸುತ್ತಮುತ್ತ ನೀರು ನುಗ್ಗಿ ಜನರು ತಮ್ಮ ಮನೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದು, ನೀರು ತುಂಬುವ ಭಯದಿಂದ ಆತಂಕಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರ ಗಂಜಿ ಕೇಂದ್ರಗಳನ್ನು ಆರಂಭಿಸಿ, ಜನರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಮುತ್ತಗಾ ಹಾಗೂ ಭಂಕೂರ ಗ್ರಾಮದ ರೈತರು ಆಗ್ರಹಿಸಿದ್ದಾರೆ. ಮುಳುಗಡೆ ಪೀಡಿತ ರೈತರಿಗೆ ತುರ್ತು ಪರಿಹಾರ ನೀಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

ಚಿತ್ತಾಪುರ ತಾಲೂಕಿನ ಬಿಜೆಪಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಮಹೇಂದ್ರ ಆರ್ ಅವರು ಸರ್ಕಾರ ತಕ್ಷಣವೇ ಎಚ್ಚರಿಕೆ ತೆಗೆದುಕೊಳ್ಳಿ, ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.