ಮಳೆರಾಯನ ಆರ್ಭಟಕ್ಕೆ ಚಿಂಚೋಳಿ ತಲಣ: ಶಾಸಕ ಡಾ. ಅವಿನಾಶ ಜಾಧವ ಭೇಟಿ, ಪರಿಶೀಲನೆ
ಮಳೆರಾಯನ ಆರ್ಭಟಕ್ಕೆ ಚಿಂಚೋಳಿ ತಲಣ: ಶಾಸಕ ಡಾ. ಅವಿನಾಶ ಜಾಧವ ಭೇಟಿ, ಪರಿಶೀಲನೆ
ಜೆಟ್ಟೂರ ಗ್ರಾಮಕ್ಕೆ ನುಗ್ಗಿದ ನೀರು, ಗಂಜಿ ಕೇಂದ್ರ ಸ್ಥಾಪನೆ | ತಾಜಲಾಪೂರ, ಕರ್ಚಖೇಡ, ಗಾರಂಪಳ್ಳಿ ಸೇತ್ತುವೆಗಳು ಸಂಪೂರ್ಣ ಮುಳುಗಡೆ, ಸಂಪರ್ಕ ಕಡಿತ
ಚಿಂಚೋಳಿ :ಶುಕ್ರವಾರ ರಾತ್ರಿ ನಾಗರಾಳ ಡ್ಯಾಮನಿಂದ 4100 ಕ್ಯೂಸೆಕ್ ಶನಿವಾರ ಮಧ್ಯಾಹ್ನ 5000 ಕ್ಯೂಸೆಕ್ ನೀರು ಮತ್ತು ಚಂದ್ರಂಪಳ್ಳಿ ಜಲಾಶಯದಿಂದ ಶುಕ್ರವಾರ ರಾತ್ರಿ 5500 ಕ್ಯೂಸೆಕ್ ಶನಿವಾರ ಬೆಳಿಗ್ಗೆ 6 ಗಂಟೆಗೆ 4 ಗೆಟ್ ಗಳ ಮುಖಾಂತರ 5500 ಕ್ಯೂಸೆಕ್ ನೀರು ನದಿಗಳಿಗೆ ಹರಿದು ಬಿಡಲಾಗಿದೆ ಎಂದು ನಾಗರಾಳ ಡ್ಯಾಂನ ಎಇಇ ಅಮೃತ ಪವಾರ ಹಾಗೂ ಚಂದ್ರಂಪಳ್ಳಿ ಡ್ಯಾಂನ ಸಹಾಯಕ ಇಂಜಿನಿಯರ ರಾಹುಲ್ ತಿಳಿಸಿದರು.
ಸಂಪೂರ್ಣ ಜಲಾವೃತಗೊಂಡ ಸೇತುವೆಗಳು :
ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಬಿರುಸಿನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ತಾಜಲಾಪೂರ, ಕೃಷ್ಟಾಪೂರ ಮಿರಿಯಾಣ, ಕರ್ಚಖೇಡ, ಗಾರಂಪಳ್ಳಿ ಗ್ರಾಮಗಳ ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿತ್ತು.
ಗ್ರಾಮಕ್ಕೆ ನುಗ್ಗಿದ ನೀರು, ಗಂಜಿ ಕೇಂದ್ರ ಸ್ಥಾಪನೆ :
ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ಜಲರಾಯನ ಆರ್ಭಟ ಮುಂದುವರೆಸಿದರ ಹಿನ್ನಲೆಯಲ್ಲಿ ಸೇಡಂ ಮತಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಜೆಟ್ಟೂರ ಗ್ರಾಮಕ್ಕೆ ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ಕೊಚ್ಚಿಕೊಂಡು ಹೋದ ಪರಿಣಾಮ ಚಿಂಚೋಳಿ ತಾಲೂಕ ಆಡಳಿತ ಅಧಿಕಾರಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಬಿಸಿಕೆಟ್, ಹಾಲು ಮತ್ತು ಊಟದ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಪಟ್ಟಣಕ್ಕೆ ಸುತ್ತೂವರೆದ ಜಲರಾಯ :
ಕಳೆದ ಮೂರು ದಿನಗಳಿಂದ ಬೆನ್ನುಟ್ಟುತ್ತಿರುವ ಮಳೆರಾಯನ ಆರ್ಭಟಕ್ಕೆ ಚಿಂಚೋಳಿ ಪಟ್ಟಣ ತಲಣಗೊಂಡಿದೆ. ಪಟ್ಟಣದ ಒಳಗೆ ನೀರು ನುಗ್ಗಿಕೊಂಡಿದ್ದರಿಂದ ಚಂದಾಪೂರದ ಪಟೇಲ್ ಕಾಲೋನಿಯ ಅರೆಬೀಕ್ ಶಾಲೆಗೆ ನೀರು ಹೊಕ್ಕು ಜಲಾವೃತಗೊಳಿಸಿತ್ತು. ಹುನುಮಾನ ಮಂದಿರ ನೀರಿನಿಂದ ಸುತ್ತುವರೆದುಕೊಂಡು ಮುಖ್ಯ ಸಂಪರ್ಕ ಕಡಿತಗೊಂಡಿದರಿಂದ ಪೂಜಾರಿ ಗುಡಿಗೆ ಪ್ರವೇಶಿಸದೇ ಶನಿವಾರ ದರ್ಶನಕ್ಕೆ ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅಪರಿಸ್ಥಿತಿ ಅವಲೋಕಿಸಲು ಶನಿವಾರ ಶಾಸಕ ಡಾ. ಅವಿನಾಶ ಜಾಧವ ಅವರು ಪುರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲೇ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ ಕ್ರಮಕ್ಕೆ ಸೂಚಿಸಿದರು. ತಾಲೂಕಿನ ರೈತರ ತೊಗರಿ ಮತ್ತು ಕಬ್ಬಿನ ತೊಟಕ್ಕೆ ನೀರು ನುಗ್ಗಿ ಬೆಳೆಗೆ ಸಂಕಷ್ಟವೊಡ್ಡಿದೆ.