ಶಹಾಬಾದ್‌ನಲ್ಲಿ ದೇವಿ ಉತ್ಸವ ಆರಂಭ

ಶಹಾಬಾದ್‌ನಲ್ಲಿ ದೇವಿ ಉತ್ಸವ ಆರಂಭ
ಶಹಾಬಾದ್‌ನ ಆದಿಶಕ್ತಿ ಜಗನ್ಮಾತೆ ಜಗದಂಬಾ ಉತ್ಸವಕ್ಕೆ ಇದೀಗ 49ನೇ ವರ್ಷದ ಸಂಭ್ರಮ. 1964-1965ರಲ್ಲಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಪ್ರಾರಂಭವಾದ ನವರಾತ್ರಿಯ ಉತ್ಸವದಂದು ನಗರದ ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆಯುತ್ತಾರೆ. ಮಹಾರಾಷ್ಟ್ರದ ತುಳಜಾಪುರ ಮಾದರಿಯಲ್ಲಿ ನಡೆಯುವ ಇಲ್ಲಿನ ನವರಾತ್ರಿ ಉತ್ಸವಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಜನ ಹರಿದು ಬರುವುದು ವಿಶೇಷ.
ನಲವತ್ತೊಂಬತ್ತು ವರ್ಷಗಳ ಹಿಂದೆ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದಬಾಬುರಾವ ಮಹೇಂದ್ರಕರ್ ದಾನ ಮಾಡಿದ ಸ್ಥಳದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಈ ಪುಟ್ಟ ಮಂದಿರ ನಿರ್ಮಾಣವಾಗಿದೆ. ದೇವಿಯ ಭಕ್ತರಾದ ಡಾ.ಅಂಬಾದಾಸ ಜಿಂಗಾಡೆ, ಕೊಂಡಿಭರಾವ ತಾಂದಳೆ, ನಾರಾಯಣ ತೇಲ್ಕರ್, ನರಸಪ್ಪ ಪುಸ, ಹೀರಾಲಾಲ ಹಿಬಾರೆ, ದಿಗಂಬರ ಕಠಾರೆ, ಹಣಮಂತರಾವ ಉತ್ತರಕರ್, ಅಂಥ ಪ್ರಮುಖರ ವಯಕ್ತಿಕ ದಾನದಿಂದ ಒಂಬತ್ತು ದಿನಗಳ ಉತ್ಸವಕ್ಕೆ ನಾಂದಿಯಾಯಿತು. ತುಳಜಾಪುರ ಮಂದಿರದಲ್ಲಿರುವ ದೇವಿಯನ್ನೆ ಹೋಲುವ ಆಕರ್ಷಕ ಮೂರ್ತಿಯನ್ನು ಸ್ಥಾಪಿಸಿಲಾಯಿತು. ನಂತರ ಭಕ್ತರೊಬ್ಬರು ನೀಡಿದ ಉತ್ಸವ ಮೂರ್ತಿ ಒಂಬತ್ತು ದಿನಗಳ ಕಾಲ ನವರಾತ್ರಿಗೆ ಸ್ಥಾಪನೆ ಮಾಡಲಾಗುತ್ತದೆ.
ಪ್ರತಿವರ್ಷ ಉತ್ಸವದಲ್ಲಿ ಘಟಸ್ಥಾಪನೆ, ದೀಪಾಲಂಕಾರ, ದೇವಿ ಅಲಂಕಾರವು ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಸೋಮವಾರದಿಂದ ನಗರದ ದೇವಿ ಜಗದಂಬಾ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ, ಸಂಜೆ ವಿಶೇಷ ಆರತಿ, ದೇವಿ ಅಲಂಕಾರ ಈಗಾಗಲೇ ಪ್ರಾರಂಭವಾಗಿದೆ. ಭಕ್ತರಲ್ಲಿ
ನವರಾತ್ರಿ ಸಂಭ್ರಮ ಮನೆ ಮಾಡಿದೆ. ದೇವಿಯ ಮಹಾಮಂಗಳಾರುತಿಗೆ ಭಕ್ತರು ಪ್ರತಿದಿನ ದರ್ಶನ ಪಡೆಯಲು ಬರುತ್ತಿದ್ದಾರೆ. ಈಗಾಗಲೇ ಜಗದಂಬಾ ಮಂದಿರ ಕಮಿಟಿಯಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಮನೆಗಳಲ್ಲಿ ಘಟಸ್ಥಾಪನೆ : ನವರಾತ್ರಿ ಸಮಯದಲ್ಲಿ ಘಟಸ್ಥಾಪನೆ ಮಾಡುವುದಕ್ಕೆ ಜೋಳ ಬಿತ್ತುವುದರಿಂದ ಅದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಅಂಥ ಮನೆಗಳಲ್ಲಿ ಧನ-ಧಾನ್ಯಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಎಂಬುದು ನಂಬಿಕೆ ಭಕ್ತರಲ್ಲಿದೆ.
ನವರಾತ್ರಿ ನಿಮಿತ್ತ ಬೆಳಗ್ಗೆ ಅಭಿಷೇಕ, ಆರತಿ, ದೇವಿಗೆ ವಿಶೇಷ ಅಲಂಕಾರ, ಸಂಜೆ ಆರತಿಯಲ್ಲಿ ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ರಾತ್ರಿ ವಿವಿಧ ಭಜನ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯುತ್ತದೆ. 9 ದಿನಗಳ ಕಾಲ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಲಿದೆ.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ