."ನೆನಪುಗಳೆ ಅಮರ" — ಜಿ.ಬಿ. ವಿಸಾಜಿ ಪ್ರಥಮ ಪುಣ್ಯಸ್ಮರಣೆ

."ನೆನಪುಗಳೆ ಅಮರ" — ಜಿ.ಬಿ. ವಿಸಾಜಿ ಪ್ರಥಮ ಪುಣ್ಯಸ್ಮರಣೆ
‘ನೆನಪುಗಳೆ ಅಮರ’ ಕಾರ್ಯಕ್ರಮ
ಭಾಲ್ಕಿ: ಹಿರಿಯ ಸಾಹಿತಿ ಜಿ.ಬಿ. ವಿಸಾಜಿ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ‘ನೆನಪುಗಳೆ ಅಮರ’ ಕಾರ್ಯಕ್ರಮವನ್ನು ಶಬನಮ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಅಲ್ಲಮ ಪ್ರಭು ಬಿ.ಎಡ್. ಶಿಕ್ಷಣ ಮಹಾವಿದ್ಯಾಲಯ ಭಾಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೋಹನ್ ರೆಡ್ಡಿ ಅವರು, "ಜಿ.ಬಿ. ವಿಸಾಜಿ ಈ ಭಾಗದ ಹಿರಿಯ ಸಾಹಿತಿ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಶ್ರೀಮಠದ ಧಾರ್ಮಿಕ, ಶೈಕ್ಷಣಿಕ, ಸಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿದ್ದರು. ‘ಕಾಯಕ ಪರಿಣಾಮಿ’ ಪುಸ್ತಕವು ಅವರ ಶ್ರದ್ಧೆಯ ಸಾಕ್ಷಿ. ಅವರ ಸರಳ ಹಾಗೂ ಸಜ್ಜನಿಕೆಯಿಂದ ಕೂಡಿದ ಜೀವನವೇ ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿ" ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಸಾಹಿತಿ ಗಣಪತಿ ಭೂರೆ ಅವರು, "ವಿಸಾಜಿ ಅವರ ಪ್ರೇರಣೆಯಿಂದ ನಾನು 15 ಕೃತಿಗಳನ್ನು ರಚಿಸಲು ಸಾಧ್ಯವಾಯಿತು. ಕನ್ನಡಕ್ಕಾಗಿ ಅವರು ಮಾಡಿದ ಸೇವೆ ಅಪಾರ. ಈ ಭಾಗದ ‘ಕನ್ನಡದ ಭೀಷ್ಮ’ ಎಂದೇ ಅವರನ್ನು ಕರೆಯಬಹುದು" ಎಂದರು.
ಆಶಯ ನುಡಿ ನೀಡಿದ ಡಾ. ಮಕ್ತುಂಬಿ ಅವರು, "ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಹೆಚ್ಚಾಗಬೇಕು. ನನ್ನ ಸಾಹಿತ್ಯ ಪ್ರವಾಸಕ್ಕೆ ವಿಸಾಜಿ ಅವರೇ ಪ್ರೇರಣೆ. ಗುರುವನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ" ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪಾಂಡುರಂಗ ಕುಂಬಾರ ಅವರು, "ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ಕನ್ನಡಕ್ಕಾಗಿ ದುಡಿದು ಮಠ ಕಟ್ಟಿದರು. ಅದನ್ನು ಶ್ರೀ ಬಸವಲಿಂಗ ಪಟ್ಟದೇವರು ಮುಂದುವರಿಸಿದರು. ಆ ಪೈಪೋಟಿಯಿಂದಲೇ ವಿಸಾಜಿಯಂತಹ ಸಾಹಿತಿಗಳು ಬೆಳೆದರು. ವಿದ್ಯಾರ್ಥಿಗಳು ಪಾಠದ ಜೊತೆಗೆ ಸಾಹಿತ್ಯವೂ ಓದಬೇಕು" ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ರಾಜೇಂದ್ರ ವರವಟ್ಟೆ ನಿರೂಪಿಸಿದರು. ಉಪಪ್ರಾಚಾರ್ಯ ಮಾಣಿಕರಾವ ಪಾಂಚಾಳರು ಸ್ವಾಗತಿಸಿ, ಅರ್ಚನಾ ಧನ್ಯವಾದ ಸಲ್ಲಿಸಿದರು.