ಬಸವಕಲ್ಯಾಣದಲ್ಲಿ ಅ. 10 ರಿಂದ ಮೂರು ದಿನ ಕಲ್ಯಾಣ ಪರ್ವ.

ಬಸವಕಲ್ಯಾಣದಲ್ಲಿ ಅ. 10 ರಿಂದ ಮೂರು ದಿನ ಕಲ್ಯಾಣ ಪರ್ವ.
ಚಿಟಗಪ್ಪಾ : ಅಕ್ಟೋಬರ್ ತಿಂಗಳ 10,11,12 ರಂದು ಬಸವಕಲ್ಯಾಣದ ಬಸವ ಧರ್ಮ ಪೀಠದ ಆವರಣದಲ್ಲಿ 24ನೇ ಕಲ್ಯಾಣ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ತಿಳಿಸಿದರು.
ಪಟ್ಟಣದ ರಾಷ್ಟ್ರೀಯ ಬಸವ ದಳದ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಇಪ್ಪತ್ತು ಮೂರು ವರ್ಷಗಳಿಂದ ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷ ಸಹ ಅರ್ಥಪೂರ್ಣವಾಗಿ ಅಷ್ಟೆ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಕರ್ನಾಟಕ
, ಮಹಾರಾಷ್ಟ್ರ,ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ಹಲವು ರಾಜ್ಯ ಹಾಗೂ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಬಸವ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊರಗಿನಿಂದ ಬರುವ ಭಕ್ತರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಇರುತ್ತದೆ. ಆದ್ದರಿಂದ ಈ ಅರ್ಥಪೂರ್ಣ ಹಾಗೂ ಭಕ್ತಿಭಾವದಿಂದ ಕೂಡಿರುವ 24ನೇ ಕಲ್ಯಾಣ ಪರ್ವದಲ್ಲಿ ಬಸವಾನುಯಾಯಿಗಳು, ಬಸವಭಕ್ತರು, ಬಸವ ನಿಷ್ಠರು, ಬಸವ ತತ್ವ ಪ್ರಚಾರಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ವಿನಂತಿಸಿಕೊಂಡರು.
ಬಸವ ತತ್ವ ಪ್ರಚಾರಕಿ ಶರಣೆ ಇಂದುಮತಿ ಪಾರಂಪಳ್ಳಿ ಮಾತನಾಡಿ ಕೂಡಲ ಸಂಗಮ ಬಸವ ಧರ್ಮದ ಪೀಠಾಧ್ಯಕ್ಷೆ ಪೂಜ್ಯ ಗಂಗಾ ಮಾತಾಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗುವ 24ನೇ ಕಲ್ಯಾಣ ಪರ್ವ ಸಮಾವೇಶ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿದೆ.ವರ್ಷಕ್ಕೊಮ್ಮೆ ನಡೆಯುವ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಜಾತಿ, ಮತ ಪಂಥಗಳ ಭೇದವಿಲ್ಲದೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಚಂದ್ರಶೇಖರ ತಂಗಾ ಮಾತನಾಡಿ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಗ, ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಶರಣರ ಸ್ಮರಣೆ, ಧರ್ಮಚಿಂತನೆ, ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ , ಪೀಠಾರೋಹಣ, ಪಥ ಸಂಚಲನ, ಪ್ರಶಸ್ತಿ ಪ್ರದಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಲಿವೆ ಎಂದು ಹೇಳಿದರು.
ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷ ರಾಜಶೇಖರ ದೇವಣಿ ಮಾತನಾಡಿ ಮೂರು ದಿನಗಳ ಕಾಲ ನಡೆಯುವ ಈ ಒಂದು ಐತಿಹಾಸಿಕ ಉತ್ಸವದಲ್ಲಿ ಸರ್ವರೂ ಪಾಲ್ಗೊಂಡು ಬಸವ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು, ಬಸವಾನುಯಾಯಿಗಳು, ಗಣ್ಯರು ಉಪಸ್ಥಿತರಿದ್ದರು.