ನಾರಾಯಣ ಗುರು ಈಡಿಗ ನಿಗಮ ಶೀಘ್ರದಲ್ಲೇ ಕಾರ್ಯಾರಂಭ: ವಿನಯ್ ಕುಮಾರ್ ಸೊರಕೆ

ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ನೇತೃತ್ವದ ಈಡಿಗ ಬಿಲ್ಲವ ನಿಯೋಗಕ್ಕೆ ಭರವಸೆ
ನಾರಾಯಣ ಗುರು ಈಡಿಗ ನಿಗಮ ಶೀಘ್ರದಲ್ಲೇ ಕಾರ್ಯಾರಂಭ: ವಿನಯ್ ಕುಮಾರ್ ಸೊರಕೆ
ಕಲಬುರಗಿ: ರಾಜ್ಯದಲ್ಲಿರುವ ಪ್ರಮುಖ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಕಲ್ಯಾಣಕ್ಕಾಗಿ ಘೋಷಣೆ ಮಾಡಿದ ನಾರಾಯಣ ಗುರು ಈಡಿಗ ನಿಗಮ ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಕಲಬುರಗಿಗೆ ಪಕ್ಷದ ಕಾರ್ಯ ಅನಿಮಿತ್ತ ಸೆಪ್ಟೆಂಬರ್ 18ರಂದು ಆಗಮಿಸಿದ ಅವರನ್ನು ಬ್ರಹ್ಮಶ್ರೀ ನಾರಾಯಣ ಗುರು 171ನೇ ಜಯಂತಿ ಉತ್ಸವದ ಜಿಲ್ಲಾಧ್ಯಕ್ಷರಾದ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಅವರ ನೇತೃತ್ವದಲ್ಲಿ ಭೇಟಿಯಾದ ಈಡಿಗ, ಬಿಲ್ಲವ ನಿಯೋಗಕ್ಕೆ ಭರವಸೆ ನೀಡಿ ಮಾತನಾಡಿದ ಅವರು ಇತ್ತೀಚೆಗಷ್ಟೇ ನಡೆದ ನಾರಾಯಣಗುರು ಜಯಂತಿ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈಡಿಗ ನಿಗಮ ಸ್ಥಾಪನೆಗಾಗಿ ಈಗಾಗಲೇ ದೇವರಾಜ್ ಅರಸು ನಿಗಮದಲ್ಲಿ 10 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಜೊತೆಗೆ ನಿಗಮವನ್ನು ಕಂಪನಿ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಅದು ಮುಗಿದ ನಂತರ ನಿಗಮದ ಅಧ್ಯಕ್ಷರು ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಜೊತೆಗೆ ಸಮಾಜದವರಿಗೆ ಒಂದು ವೈದ್ಯಕೀಯ ಕಾಲೇಜನ್ನು ನೀಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೀಡಿದ ಭರವಸೆ ಶೀಘ್ರದಲ್ಲಿ ಕೈಗೂಡಲಿದೆ ಎಂದು ಸೊರಕೆ ಹೇಳಿದರು.
ನಿಗಮ ಸ್ಥಾಪನೆಯ ಮುಖ್ಯ ಗುರಿ ರಾಜ್ಯದಲ್ಲಿರುವ ಈಡಿಗ ಸೇರಿದಂತೆ 26 ಪಂಗಡಗಳ ಸಮಗ್ರ ಕಲ್ಯಾಣದ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಕೇವಲ ಹತ್ತು ಕೋಟಿ ಅಲ್ಲದೆ ಇನ್ನಷ್ಟು ಆರ್ಥಿಕ ನೆರವು ನೀಡಲು ಕೂಡ ಒತ್ತಾಯಿಸಲಾಗುವುದು. ಇದಕ್ಕಾಗಿ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಲಾಗುದು .ಇದರ ಬಗ್ಗೆ ಪ್ರಗತಿಯನ್ನು ತಿಳಿಸುವುದಾಗಿ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿಯವರಿಗೆ ಭರವಸೆ ನೀಡಿದರು.
ಈಗಾಗಲೇ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಸಮಾಜದ ಕಲ್ಯಾಣದ ದೃಷ್ಟಿಯಿಂದ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನ ಪರಿಷತ್ ಅಧಿವೇಶನದಲ್ಲಿ ಎತ್ತಿದ ಪ್ರಶ್ನೆಗಳಿಗೆ ಹಿಂದುಳಿದ ಖಾತೆಯ ಸಚಿವರಾದ ಶಿವರಾಜ್ ತಂಗಡಗಿಯವರು ಉತ್ತರ ನೀಡಿ ದೇವರಾಜ ಅರಸು ನಿಗಮದಲ್ಲಿ 10 ಕೋಟಿ ರೂಪಾಯಿ ಮೀಸಲಿರಿಸುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಕೂಡ ಆಶ್ವಾಸನೆ ನೀಡಿದ್ದಾರೆಂದು ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿಯವರು ವಿನಯ್ ಕುಮಾರ್ ಸೊರಕೆಯವರಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಹೆಸರಿನಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ತೆರೆಯಲು ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರಬೇಕು ಹಾಗೂ ಸಮುದಾಯದ ಮಕ್ಕಳಿಗಾಗಿ ಶಿಕ್ಷಣ ಪಡೆಯಲು ಇನ್ನಷ್ಟು ಸಂಸ್ಥೆಗಳನ್ನು ಆರಂಭಿಸಲು ಸರಕಾರದಿಂದ ಹೆಚ್ಚಿನ ನೆರವು ಸಿಗಬೇಕು ಎಂದು ಈಡಿಗ ಸಮುದಾಯದ ಮುಖಂಡರಾದ ವೆಂಕಟೇಶ್ ಕಡೇಚೂರ್ ಸೊರಕೆಯವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈಡಿಗ ಸಮುದಾಯದ ಮುಖಂಡರಾದ ರಾಜೇಶ್ ಡಿ .ಗುತ್ತೇದಾರ್, ಬಿಲ್ಲವ ಸಂಘದ ಮುಖಂಡರಾದ ಪ್ರವೀಣ್ ಜತ್ತನ್, ಡಾ. ಸದಾನಂದ ಪೆರ್ಲ, ಸಂತೋಷ್ ಪೂಜಾರಿ, ಜೀವನ್ ಕುಮಾರ್ ಜತ್ತನ್ ಮಿಲಿತ್ ಹೆಗಡೆ ಜೊತೆಗಿದ್ದರು. ಸಂದರ್ಭದಲ್ಲಿ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಭೀಮಣ್ಣ ಮೇಟಿ, ಕಲಬುರ್ಗಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ವೀರ ನಾಯಕ್, ಯುವ ಮುಖಂಡರಾದ ಅಶ್ವಿನಿ ಸಂಕ ಮತ್ತಿತರರು ಜೊತೆಗಿದ್ದರು.