ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ – ಸಮಿತಿಯಿಂದ ಸರಕಾರಕ್ಕೆ ಸ್ವಾಗತ
                                ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ – ಸಮಿತಿಯಿಂದ ಸರಕಾರಕ್ಕೆ ಸ್ವಾಗತ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಹಾಗೂ ಸಂವಿಧಾನದ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಂಪುಟದಲ್ಲಿ ಅನುಮೋದನೆ ನೀಡಿದ್ದು, ಇದರಿಂದ ಕಲ್ಯಾಣ ಕರ್ನಾಟಕ ಜನಮಾನಸದಲ್ಲಿ ಸಂತಸ ವ್ಯಕ್ತವಾಗಿದೆ.
ದೀರ್ಘಕಾಲದಿಂದಲೇ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಸರಕಾರದ ಈ ಧೋರಣೆಗೆ ಸ್ವಾಗತ ಸಲ್ಲಿಸಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಸಮಿತಿಯು ಅಭಿನಂದನೆಗಳನ್ನು ತಿಳಿಸಿದೆ.
ಇದೇ ಸಂದರ್ಭದಲ್ಲಿ ಈ ಬೇಡಿಕೆಯನ್ನು ನೆರವೇರಿಸಲು ವಿಶೇಷ ಇಚ್ಛಾಶಕ್ತಿ ತೋರಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ 371(ಜೆ) ಕಲಂ ಸಂಪುಟ ಉಪಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆ, ಜೊತೆಗೆ ಕಲ್ಯಾಣ ಕರ್ನಾಟಕದ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪೂರ, ರಹೀಂಖಾನ್, ಭೋಜರಾಜ್ ಸೇರಿದಂತೆ ಸಂಪುಟದ ಎಲ್ಲ ಸಚಿವರ ಸಹಕಾರಕ್ಕೆ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸಿದೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿಯವರು, ಸಮಿತಿಯ ತಜ್ಞರು ಮತ್ತು ಮುಖಂಡರಾದ ಪ್ರೊ. ಆರ್.ಕೆ. ಹುಡಗಿ, ಪ್ರೊ. ಬಸವರಾಜ ಕುಮನೂರ, ಡಾ. ಗಾಂಧೀಜಿ ಮೋಳಕೆರೆ, ಡಾ. ಶರಣಪ್ಪ ಸೈದಾಪೂರ, ಡಾ. ಬಸವರಾಜ ಗುಲಶೆಟ್ಟಿ, ಡಾ. ಮಾಜಿದ್ ದಾಗಿ, ಮನೀಷ್ ಜಾಜು, ರೌಫ್ ಖಾದ್ರಿ, ಡಾ. ಗುರುಬಸಪ್ಪ ಟಿ., ಡಾ. ಶರಣಪ್ಪ ಹತ್ತಿ, ಲಿಂಗರಾಜ ಸಿರಗಾಪೂರ, ಕೈಲಾಸನಾಥ ದೀಕ್ಷಿತ, ಅಸ್ಲಂ ಚೌಂಗೆ, ಜ್ಞಾನಮಿತ್ರ, ವಿಶ್ವನಾಥ ಪಾಟೀಲ್, ಸಂಧ್ಯಾರಾಜ್, ಎಂ.ಬಿ. ನಿಂಗಪ್ಪ, ರಾಜು ಜೈನ್** ಹಾಗೂ ಇತರ ಪ್ರಮುಖರು ಸಂಯುಕ್ತವಾಗಿ ಪ್ರಕಟಣೆ ನೀಡಿ, ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಪ್ರತ್ಯೇಕ ಸಚಿವಾಲಯದ ಸೃಜನೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯೊಳಗಿನ ಸಮಗ್ರ ಮತ್ತು ಸಮಾರೋಪಾದಿ ಅಭಿವೃದ್ಧಿಗೆ ದಾರಿ ತೆರೆಯಲಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
