ಭ್ರಷ್ಟಾಚಾರ: ಪ್ರಜಾಪ್ರಭುತ್ವಕ್ಕೆ ಮಾರಕವಾದ ಕಹಿ ಸತ್ಯ

ಭ್ರಷ್ಟಾಚಾರ: ಪ್ರಜಾಪ್ರಭುತ್ವಕ್ಕೆ ಮಾರಕವಾದ ಕಹಿ ಸತ್ಯ
ಭಾರತವು 150 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಈ ಮಹಾನ್ ದೇಶದ ಅಭಿವೃದ್ಧಿಯ ಮಾರ್ಗದಲ್ಲಿ ಭ್ರಷ್ಟಾಚಾರವೇ ಅತಿದೊಡ್ಡ ಅಡೆತಡೆ ಆಗಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಜ್ಯ, ಕೇಂದ್ರ ಮಟ್ಟದ ಆಡಳಿತದವರೆಗೂ ಭ್ರಷ್ಟಾಚಾರದ ಬೇರು ಬಿಟ್ಟಿರುವುದು ಕಂಡು ಬರುತ್ತದೆ.
ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಲಂಚ ಬೇಡುವ ಸ್ಥಿತಿ ಉಂಟಾಗಿದೆ. ಸರ್ಕಾರಿ ಸಂಸ್ಥೆಗಳು ವ್ಯಾಪಾರೀಕರಣ ಮತ್ತು ಖಾಸಗೀಕರಣದ ದಿಕ್ಕಿನಲ್ಲಿ ಸಾಗುತ್ತಿದ್ದು, ಸಾಮಾನ್ಯ ಜನರು ಹಕ್ಕುಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಉದ್ಯೋಗವಿಲ್ಲದ ಯುವಕರು ದಾರಿ ತಪ್ಪಿ ಅನೈತಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕೆಲವರು ರಾಜಕಾರಣಿಗಳ ಬಲೆಗೆ ಬಿದ್ದು ಧರ್ಮದ, ಜಾತಿಯ ಹೆಸರಿನಲ್ಲಿ ದುರುಪಯೋಗಕ್ಕೊಳಗಾಗುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಸರಿಯಾದ ಉದ್ಯೋಗಾವಕಾಶಗಳು, ಸ್ವಯಂ ಉದ್ಯೋಗದ ಪ್ರೋತ್ಸಾಹ ಮತ್ತು ಕೌಶಲ್ಯಾಭಿವೃದ್ಧಿ ನೀಡಿದಲ್ಲಿ ದೇಶದ ಭವಿಷ್ಯ ಕಂಗೊಳಿಸಬಹುದು.
ಮತದಾನದ ಸಮಯದಲ್ಲಿ ಹಣ, ಮದ್ಯ, ಸಣ್ಣ ಲಾಭಗಳಿಗೆ ಮತ ಮಾರಾಟ ಮಾಡುವ ಪ್ರವೃತ್ತಿ ನಿಲ್ಲದಿದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯಕ್ಕೀಡಾಗುತ್ತದೆ. ಇಂದಿನ ಜನಪ್ರತಿನಿಧಿಗಳ ಮಕ್ಕಳೇ ಮುಂದಿನ ನಾಯಕತ್ವ ಹಿಡಿಯುವ ರಾಜಮನೆತನದ ರಾಜಕಾರಣ ಮುಂದುವರಿದರೆ, ಇದು ದೇಶಕ್ಕೆ ಶಾಪವಾಗಬಹುದು. ಈಗಾಗಲೇ ಅನೇಕ ಜನಪ್ರತಿನಿಧಿಗಳ ಮೇಲೆ ಗಂಭೀರ ಕೇಸುಗಳು ದಾಖಲಾಗಿವೆ. ಅಂಥವರೇ ದೇಶವನ್ನು ಆಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಅಕ್ರಮ ಹಣವು ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳ ಹತ್ತಿರವೇ ಇರುವುದಾಗಿ ಬಹಿರಂಗವಾಗಿದೆ. ಇಂತಹ ಸ್ಥಿತಿಯಲ್ಲಿ ಸಾಮಾನ್ಯ ಜನರು ಸುಮ್ಮನೆ ಕುಳಿತರೆ, ಪ್ರಜಾಪ್ರಭುತ್ವವೇ ಕುಸಿಯುವ ಅಪಾಯವಿದೆ. ಆದ್ದರಿಂದ ಯುವಕರು, ಯುವತಿಯರು ಬುದ್ಧಿವಂತಿಕೆಯಿಂದ, ಜವಾಬ್ದಾರಿಯಿಂದ ಅನ್ಯಾಯ, ಅತ್ಯಾಚಾರ ಮತ್ತು ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ನಿಲ್ಲಬೇಕು.
ನಾನು ಗಮನಿಸಿದಂತೆ ಕೆಎಸ್ಆರ್ ಪಕ್ಷವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಪಕ್ಷಗಳು ಹಾಗೂ ಜನಸಂಘಟನೆಗಳು ಪ್ರೋತ್ಸಾಹ ಪಡೆದರೆ ದೇಶದಲ್ಲಿ ಭ್ರಷ್ಟಾಚಾರ ತಗ್ಗಲು ಸಹಕಾರಿಯಾಗುತ್ತದೆ ಎಂಬುದು ನನ್ನ ನಂಬಿಕೆ.
✍️ ಶರಣಗೌಡ ಪಾಟೀಲ ಪಾಳಾ
-