ದೀಪಾವಳಿ ಹಬ್ಬದಂದು ಜ್ಞಾನ ದೀವಿಗೆ ಹಚ್ಚೋಣ ಪರಿಸರ ಸಂರಕ್ಷಣೆ ಸಂಕಲ್ಪ ಮಾಡೋಣ

ದೀಪಾವಳಿ ಹಬ್ಬದಂದು ಜ್ಞಾನ ದೀವಿಗೆ ಹಚ್ಚೋಣ ಪರಿಸರ ಸಂರಕ್ಷಣೆ ಸಂಕಲ್ಪ ಮಾಡೋಣ

ದೀಪಾವಳಿ ಹಬ್ಬದಂದು ಜ್ಞಾನ ದೀವಿಗೆ ಹಚ್ಚೋಣ ಪರಿಸರ ಸಂರಕ್ಷಣೆ ಸಂಕಲ್ಪ ಮಾಡೋಣ

ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ ಹೊಸ ಭರವಸೆಗಳನ್ನು ಹೊತ್ತು ಬರುವ ದೀಪಗಳ ಹಬ್ಬ ದೀಪಾವಳಿಯು ಜನರಿಗೆ ಹಾಗೂ ಪರಿಸರಕ್ಕೆ ಒಳಿತು ಮಾಡಲಿ ಎಂಬುದು ಸಾರ್ವಜನಿಕರ ಅಪೇಕ್ಷೆ. 

ಐದು ದಿನಗಳ ಕಾಲ ಆಚರಿಸುವ ಈ ದೀಪಾವಳಿ ಹಬ್ಬವು ಭಾರತೀಯ ಧಾರ್ಮಿಕತೆಯಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಹಬ್ಬವನ್ನು ಕೇವಲ ಹಿಂದುಗಳಷ್ಟೇ ಆಚರಿಸದೆ, ಜೈನ ಮತ್ತು ಸಿಖ್ ಧರ್ಮೀಯರು ಸಹ ಇದನ್ನು ತುಂಬಾ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

ಹಿಂದೂ ಧಾರ್ಮಿಕತೆ ಪ್ರಕಾರ ಶ್ರೀರಾಮಚಂದ್ರನು 14 ವರ್ಷಗಳ ವನವಾಸದ ನಂತರ ರಾವಣನನ್ನು ಸಂಹರಿಸಿ ಸೀತೆ ಮತ್ತು ಲಕ್ಷ್ಮಣ ರೊಂದಿಗೆ ಅಯೋಧ್ಯೆಯೆಡೆಗೆ ಬಂದ ದಿನವನ್ನು ದೀಪಗಳು ಹಚ್ಚಿ ಇಡೀ ನಗರವನ್ನು ದೀಪ ಮಯಗೊಳಿಸಿ ಸ್ವಾಗತಿಸಿದ ದಿನವನ್ನು ದೀಪಾವಳಿ ಎಂದು ಕರೆದು ಅಂದಿನಿಂದ ಇದನ್ನು ಆಚರಿಸುತ್ತಾ ಬಂದಿರುವುದು ಒಂದು ಪ್ರತೀತಿ. ಸಿಖ್ ಧರ್ಮೀಯರು ಗುರು ಗೋವಿಂದ್ ಸಿಂಗ್ ಅವರು ಮೊಘಲ್ ದೊರೆಯ ವಶದಿಂದ ಬಿಡುಗಡೆಗೊಂಡು ಬಂದ ಪ್ರಯುಕ್ತ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಜೈನ ಧರ್ಮೀಯರು ತಮ್ಮ 24ನೆಯ ತೀರ್ಥಂಕರ ಮಹಾವೀರರ ಜನ್ಮದಿನದಂದು ಈ ಹಬ್ಬವನ್ನು ಆಚರಿಸುವ ಪರಿಪಾಠ ರೂಡಿಸಿಕೊಂಡಿದ್ದಾರೆ.

ಈಗ ನಮ್ಮ ದೇಶದಲ್ಲಿ ಜನ್ಮ ತಾಳಿದ ಧರ್ಮಗಳು ದೀಪಾವಳಿ ಹಬ್ಬವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಚರಣೆ ಮಾಡಿ ಸಂತಸ ಪಡುತ್ತಾರೆ. 

ನಾವು ಪರಿಸರಕ್ಕೆ ಹಾಗೂ ಮಕ್ಕಳಿಗೆ ಹಾನಿಕಾರಕವಾಗಿರುವಂತಹ ಪಟಾಕಿಗಳ ಕುರಿತು ಮಾತನಾಡುವುದಾದರೆ, ಈ ಹಿಂದೆ ಪಟಾಕಿ ಒಂದು ಉತ್ತಮ ಮತ್ತು ಮನಸ್ಸಿಗೆ ಆಹ್ಲಾದಕರ ಆಚರಣೆಯಾಗಿತ್ತು. 

ವಿವಿಧ ಬಗೆಯ ಪಟಾಕಿಗಳು ಬೆಳಕಿನ ಚಿತ್ತಾರ ಮೂಡಿಸುವ ಚಿತ್ರಗಳು ಬಾನಂಗಳದಲ್ಲಿ ಮೂಡಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತಿದ್ದವು. 

ಮಕ್ಕಳು ಸಂತೋಷದಿಂದ ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಿದ್ದರು. ಆ ವೇಳೆಯಲ್ಲಿ ಯಾರಿಂದಲೂ ಯಾವುದೇ ರೀತಿಯ ತಕರಾರು ಇರುತ್ತಿರಲಿಲ್ಲ.

ಆದರೀಗ ಮಿತಿಮೀರಿದ ಜನಸಂಖ್ಯೆಯ ಕಾರಣದಿಂದ ಮನುಷ್ಯನ ಅವಶ್ಯಕತೆಗಾಗಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ ಆಗ ತೊಡಗಿತು ಆವಾಗ ಪರಿಸರದ ಮೇಲೆ ಮಾರಕವಾಗಬಲ್ಲ ಘಟನಾವಳಿಗಳು ನಡೆಯತೊಡಗಿದವು. 

 ಅದು ಎಷ್ಟರಮಟ್ಟಿಗೆ ಜನ ಜೀವನದ ಮೇಲೆ ಪ್ರಭಾವ ಬೀರತೊಡಗಿತೆಂದರೆ ವಾಯು ಮಾಲಿನ್ಯದಿಂದ ದೇಶದ ರಾಜಧಾನಿ ನವದೆಹಲಿ ಸೇರಿ ಹಲವು ನಗರ ಪ್ರದೇಶಗಳಿಗೆ ಅಪಾಯ ತಂದೊಡ್ಡುವ ಹಂತಕ್ಕೆ ತಲುಪಿ ವಾಸಿಸಲು ಯೋಗ್ಯವಲ್ಲದ ನಗರಗಳಾಗಿ ಪರಿವರ್ತಿತವಾದವು.

ಶಬ್ದ ಮಾಲಿನ್ಯ ವಾಯುಮಾಲಿನ್ಯ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಪಟಾಕಿಗಳಿಂದ ಹೊರಸೂಸುವ 

ಕಣಗಳು ಉಸಿರಾಟದ ಸಮಸ್ಯೆಗೆ ನಾಂದಿ ಹಾಡತೊಡಗಿತು. 

ಈ ಸಮಯದಲ್ಲಿ ಮನುಷ್ಯನ ಆರೋಗ್ಯ ಮತ್ತು ಅಸ್ತಿತ್ವದ ಹಿತದೃಷ್ಠಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸ ಬಹುದಾದ ಪ್ರಯತ್ನ ಮಾಡಬೇಕಾಗಿದೆ. 

ಮುಖ್ಯವಾಗಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ದೀಪಾವಳಿ ಹಬ್ಬದ ಪ್ರಮುಖ ಸಂಪ್ರದಾಯ.

ಆ ವೇಳೆಯಲ್ಲಿ ಅತಿಹೆಚ್ಚು ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ಕೇವಲ ಈ ಹಬ್ಬದಲ್ಲಿ ಮಾತ್ರವಲ್ಲ ಅದರ ಸಂಪೂರ್ಣ ಉತ್ಪಾದನೆಯನ್ನೇ ನಿಷೇಧಿಸಬೇಕು ಎನ್ನುವುದು ಪರಿಸರವಾದಿಗಳ ಒತ್ತಾಸೆಯಾಗಿದೆ. ಆದರೆ ಇದಕ್ಕೆ ಧಾರ್ಮಿಕ ಬಣ್ಣ ನೀಡುವುದು ಯಾವ ಕಾರಣಕ್ಕೂ ಸಹನೀಯವಲ್ಲ. ಮನುಷ್ಯನ ಶ್ವಾಸಕೋಶ, ಶಾಶ್ವತ ಕಿವುಡುತನ ಮತ್ತು ಕಣ್ಣುಗಳನ್ನು ಹಾಳುಮಾಡುವ ಪಟಾಕಿಯನ್ನು ರಾಷ್ಟ್ರವ್ಯಾಪಿ ನಿಷೇಧಿಸಬೇಕು. 

ಪರಿಸರಕ್ಕೆ ಪೂರಕವಾದ ಮಣ್ಣಿನ ಹಣತೆಯ ದೀಪ ಬೆಳಗುವುದಕ್ಕೆ ಹೆಚ್ಚು ಪ್ರಚಾರ ಮತ್ತು ಪ್ರೋತ್ಸಾಹ ನೀಡಬೇಕು. ಎಲ್ಲರೂ ಹಸಿರು ಪಟಾಕಿಗಳನ್ನು ಹೆಚ್ಚೆಚ್ಚು ಬಳಸುವಂತಹ ಜಾಗೃತಿ ಮೂಡಿಸುವ ಕೆಲಸ ಆಗಬೇಕು.

 ಮನುಕುಲದ ಒಳಿತಿಗಾಗಿ ಕಡಿಮೆ ಅಪಾಯಕಾರಿಯಾದ ಪಟಾಕಿಗಳನ್ನು ಬಳಸುವ ಅವಶ್ಯಕತೆ ಇದೆ. ಈಗಾಗಲೇ ಕೈಗಾರಿಕೆಗಳಿಂದ ಹೊರಸೂಸುವ ಕಾರ್ಬನ್ ಡೈಯಾಕ್ಸೈಡ್ ಸೇರಿದಂತೆ ಅನೇಕ ರಾಸಾಯನಿಕಗಳು ಓಝೋನ್ ಪದರಿಗೆ ಹಾನಿಮಾಡಿವೆ.ಇದರಿಂದ ಮನುಷ್ಯ ಮತ್ತು ಪ್ರಾಣಿಗಳು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ.

ಹಸಿರು ಮನೆ ಪರಿಣಾಮದ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಸಾಕಷ್ಟು ಶ್ರಮ ಹಾಕುತ್ತಿದ್ದರು ಯಾವುದೋ ಉಪಯೋಗಕ್ಕೆ ಬಾರದಂತಾಗಿದೆ. 

ನಿಸರ್ಗವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆ ಇರುವುದರಿಂದ ಪ್ರತಿಯೊಬ್ಬರೂ ಕೂಡ ಪರಿಸರದ ಬಗ್ಗೆ ಮತ್ತು ನೀರು ಬಳಕೆ ಬಗ್ಗೆ ಕೂಡ ಸಾಕಷ್ಟು ತಿಳುವಳಿಕೆಯನ್ನು ಮೂಡಿಸುವಂತಹ ಕಾರ್ಯಗಳು ಇನ್ನಷ್ಟು ಹೆಚ್ಚಾಗಬೇಕಾಗಿದೆ. 

ದೇಶದಲ್ಲಿ ಬಾಲಕಾರ್ಮಿಕರನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ ಉದ್ಯಮ ಎಂದರೆ ಸಿಡಿಮದ್ದುಗಳನ್ನು ತಯಾರಿಸುವ ಘಟಕಗಳಾಗಿವೆ. 

ಇದರಿಂದ ಮಕ್ಕಳ ಆರೋಗ್ಯದ ಸ್ಥಿತಿಗತಿ ಹದಗೆಟ್ಟು ಅಮಕೋಲು ಶಾಶ್ವತವಾಗಿ ಅಂಗವಿಕಲರಾಗುವ ಅಥವಾ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಲಕ್ಷಣಗಳು ಇಲ್ಲದಿಲ್ಲ. ಆದ್ದರಿಂದ ಶಾಸನಬದ್ಧವಾಗಿ ಈ ಎಲ್ಲವುಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕಾಗಿರುವುದು ಆಳುವ ಸರ್ಕಾರಗಳ ಕರ್ತವ್ಯವಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ ಈ ಪಟಾಕಿಗಳನ್ನು ಸಿಡಿಗುಂಡುಗಳನ್ನು ಸುಡುವುದೆಂದರೆ ಅದು ಹಣವನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದಂತಾಗುತ್ತದೆ 

ದೇಶದಾದ್ಯಂತ ಪಟಾಕಿ ಸಿದಿಸುವುದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ನೀರ ಮೇಲೆ ಹೋಮ ಮಾಡಿದಂತಾಗುತ್ತಿದೆ.

ಈ ಪಟಾಕಿ ಉದ್ಯಮವು ಕೆಲವೇ ಜನರಿಗೆ ಉದ್ಯೋಗ ನೀಡಿದೆ ಮತ್ತು ಅವರ ಆರ್ಥಿಕ ಚೈತನ್ಯಕ್ಕೆ

ದಾರಿ ಮಾಡಿಕೊಟ್ಟಿದೆ. ಆದರೆ ಇದರಿಂದ ಅನೇಕ ಜನರಿಗೆ ತೊಂದರೆಯಾಗಿ ಸಾಕಷ್ಟು ಸಂಕಟಗಳಿಗೆ ಎಡೆಯಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.

ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಹಲವು ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿದು ಗಾಯಗೊಂಡವರಿಗಾಗಿ ವಿಶೇಷ ಘಟಕಗಳನ್ನು ತೆಗೆಯಲಾಗುತ್ತಿದೆ ಎಂದರೆ ಈ ಪಟಾಕಿಗಳ ಹಾವಳಿಯ ತೀವ್ರತೆಯನ್ನು ಎಲ್ಲರೂ ಅರಿಯಬೇಕಾಗಿದೆ.

ಈ ಪಟಾಕಿಗಳನ್ನು ಸಲ್ಲಿಸುವಾಗ ಮಕ್ಕಳೊಂದಿಗೆ ತಂದೆ ತಾಯಿಗಳು ಇದ್ದು ಪರಿಸರಕ್ಕೆ ಅನುಗುಣವಾಗಿರುವಂತಹ ಮತ್ತು ಮಕ್ಕಳಿಗೆ ಅಪಾಯವನ್ನು ತರದಂತಹ ಪಟಾಕಿಗಳನ್ನು ಹಚ್ಚಬೇಕಾಗಿದೆ.

ಮಾನವೀಯತೆ ದೃಷ್ಟಿಯಿಂದ ಪಟಾಕಿಗಳ ಅವಲಂಬಿತರಿಗೆ ಪರ್ಯಾಯ ಉದ್ಯೋಗವನ್ನು ನೀಡಿ ಅವರಿಗೆ ಜೀವನೋಪಾಯಕ್ಕೆ ದಾರಿ ಮಾಡಿ ಕೊಡಬೇಕಾಗಿರುವುದು ಇಂದಿನ ತುರ್ತು. ಜನರು ಸಾವನ್ನಪ್ಪಿದಾಗ ಪರಿಹಾರ ನೀಡುವ ಪರಿಪಾಠ ನಿಲ್ಲಿಸಬೇಕಾಗಿದೆ.

 ಕೆಲವು ಧಾರ್ಮಿಕ ಆಚರಣೆಗಳು ಪರಿಸರ ನಾಶಕ್ಕೆ ಎಡೆಮಾಡಿ ಕೊಡುವುದಾದರೆ ಮುಲಾಜಿಲ್ಲದೆ ಅದನ್ನು ಸರ್ಕಾರ ನಿಷೇಧಿಸಬೇಕು.

ಪರಿಸರ ಸಂರಕ್ಷಣೆಯ ವಿಷಯದಲ್ಲಿ ಧರ್ಮಗಳ ರಕ್ಷಣೆಗಿಂತ ಪರಿಸರ ಸಂರಕ್ಷಣೆ ಬಹುಮುಖ್ಯವಾಗಿದೆ.

ಪರಿಸರ ಉಳಿದರೆ ನಾವು ಉಳಿದೆವು, ಧರ್ಮಗಳು ಉಳಿಯುವವು. ಒಂದು ವೇಳೆ ಪರಿಸರವಿಲ್ಲದಿದ್ದರೆ ನಾವು ಉಳಿಯುವುದಿಲ್ಲ, ಧರ್ಮಗಳು ಉಳಿಯುವುದಿಲ್ಲ. 

ಪರಿಸರದಿಂದ ಮನುಷ್ಯ, ಮನುಷ್ಯನಿಂದ ಧರ್ಮಗಳು ಉಳಿಯಲಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂಬ ಅಭಿಲಾಷೆ ಎಲ್ಲರದಾಗಲಿ.

-ಪ್ರೊ ಯಶವಂತರಾಯ ಅಷ್ಠಗಿ 

ಉಪ-ಸಂಪಾದಕರು, 

ಕಲ್ಯಾಣ ಕಹಳೆ ಪತ್ರಿಕೆ, ಕಲಬುರಗಿ