ಶಿಕ್ಷಕರು ಅಭಿವೃದ್ಧಿಯ ರುವಾರಿಗಳು: ಶಾಸಕ ಪ್ರಭು ಚವ್ಹಾಣ*

ಶಿಕ್ಷಕರು ಅಭಿವೃದ್ಧಿಯ ರುವಾರಿಗಳು: ಶಾಸಕ ಪ್ರಭು ಚವ್ಹಾಣ*

ಔರಾದ್‌ನಲ್ಲಿ ಶಿಕ್ಷಕರ ದಿನಾಚರಣೆ* *ಸುಮಾರು 3 ಸಾವಿರ ಶಿಕ್ಷಕರ ಸನ್ಮಾನ*

*ಶಿಕ್ಷಕರು ಅಭಿವೃದ್ಧಿಯ ರುವಾರಿಗಳು: ಶಾಸಕ ಪ್ರಭು ಚವ್ಹಾಣ*

ಶಿಕ್ಷಕರಿಗೆ ದೇಶದಲ್ಲಿ ಬಹುದೊಡ್ಡ ಸ್ಥಾನಮಾನ ನೀಡಲಾಗಿದೆ. ಮಕ್ಕಳಿಗೆ ವಿದ್ಯೆ, ಬುದ್ದಿ ಕಲಿಸಿ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರು ಅಭಿವೃದ್ಧಿಯ ರುವಾರಿಗಳು ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು. 

ಶಾಲಾ ಶಿಕ್ಷಣ ಇಲಾಖೆಯಿಂದ ಸೆ.13ರಂದು ಔರಾದ(ಬಿ) ಪಟ್ಟಣದ ಡಾ.ಗುರುಪಾದಪ್ಪ ಕಲ್ಯಾಣ ಮಂಟಪದಲ್ಲಿ ನಡೆದ 2025-26ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಔರಾದ(ಬಿ) ವಿಧಾನಸಭಾ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಇದರಲ್ಲಿ ಶಿಕ್ಷಕರ ಪಾತ್ರವೂ ಹೆಚ್ಚಿದೆ. ಕ್ಷೇತ್ರದಲ್ಲಿ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರ ಸಾಕಷ್ಟು ಸುಧಾರಿಸಿದೆ. ಫಲಿತಾಂಶ ಸುಧಾರಣೆಯಲ್ಲಿ ಇನ್ನಷ್ಟು ಪ್ರಯತ್ನ ಹಾಕಬೇಕು. ಮುಂಬರುವ ದಿನಗಳಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಫಲಿತಾಂಶದಲ್ಲಿ ನಂ.1 ಮಾಡಬೇಕೆಂಬ ಅಭಿಲಾಶೆಯಿದೆ. ಶಿಕ್ಷಕರು ಇದಕ್ಕೆ ಸಹಕರಿಸಬೇಕು. ಶೇ.100ರಷ್ಟು ಫಲಿತಾಂಶ ಕೊಡುವುದಾಗಿ ಪ್ರಮಾಣ ಮಾಡಬೇಕೆಂದು ಶಾಸಕರು ತಿಳಿಸಿದರು. 

ಶಿಕ್ಷಕರ ಮೇಲೆ ನನಗೆ ಅತ್ಯಂತ ಗೌರವವಿದೆ. ಅದಕ್ಕೆಂದೇ 2009ರಿಂದ ನಿರಂತರ ಸನ್ಮಾನಿಸುತ್ತಾ ಬರುತ್ತಿದ್ದು, ಯಾವುದೇ ಅಡ್ಡಿ ಆತಂಕಗಳು ಬಂದರೂ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕೆಲಸ ನಿಲ್ಲಿಸುವುದಿಲ್ಲ. ಜೀವಮಾನ ಇರುವವರೆಗೆ ಈ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತೇನೆ. ನಾನು ಮಣ್ಣಿನ ಮಗನಾಗಿದ್ದು, ಅಡ್ಡಿಗಳು ಬಂದಷ್ಟು ಗಟ್ಟಿಯಾಗುತ್ತೇನೆ. ಮುಂದಿನ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಮತ್ತಷ್ಟು ಅದ್ದೂರಿಯಾಗಿ ಮಾಡಿ ಶಿಕ್ಷಕರನ್ನು ಗೌರವಿಸುತ್ತೇನೆ ಎಂದರು. 

ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಕರ ಮೇಲೆ ಭರವಸೆಯಿಟ್ಟು ಶಾಲೆಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಗೆ ಧಕ್ಕೆಯಾಗದ ರೀತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು. ಪಠ್ಯ ಚಟುವಟಿಕೆಯ ಜೊತೆಗೆ ಉತ್ತಮ ಸಂಸ್ಕಾರ, ದೇಶಭಕ್ತಿ, ಸೇವಾಭಾವನೆ ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. 

ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫೂಲೆ ಅವರ ಕೊಡುಗೆ ಸಾಕಷ್ಟಿದೆ. ಶಿಕ್ಷಕರು ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು

ಈ ಬಾರಿ ಅತಿ ಹೆಚ್ಚು ಮಳೆಯಾಗಿದ್ದು, ರೈತರ ಬಹಳಷ್ಟು ಬೆಳೆ ಹಾನಿಯಾಗಿದೆ. ಅವರಿಗೆ ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದು, ರೈತರ ಕೈ ಬಲಪಡಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನಿರಂತರ ಕೆಲಸ ಮಾಡುತ್ತೇನೆ. ಔರಾದ(ಬಿ) ತಾಲ್ಲೂಕಿನ ಸಮಗ್ರ ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಮುಂದುವರೆದಿದ್ದು, ಇದಕ್ಕೆ ಶಿಕ್ಷಕರ ಸಹಕಾರ ಅವಶ್ಯಕ ಎಂದು ತಿಳಿಸಿದರು. 

ಠಾಣಾಕುಶನೂರ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮಿ, ಭಾಲ್ಕಿ ಹಿರೇಮಠದ ಪೂಜ್ಯ ಮಹಾಲಿಂಗ ಸ್ವಾಮಿ, ಹೆಡಗಾಪೂರ ಮಠದ ಪೂಜ್ಯ ಕೇದಾರನಾಥ ಶಿವಾಚಾರ್ಯರು, ಗುಡಪಳ್ಳಿ ಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. 

ಔರಾದ(ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗುರು ಪ್ರಸಾದ, ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಿರಣ ಪಾಟೀಲ, ಹಣಮಂತರಾಯ ಕೌಟಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಪಿ.ಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಯಶವಂತ ಡೊಂಬಾಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಜಿಲ್ಲಾ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಸಂಘದ ಪ್ರಮುಖರಾದ ಪಂಢರಿ ಆಡೆ, ಸುನೀಲ ಕಸ್ತೂರೆ, ವಿಶ್ವನಾಥ ಬಿರಾದಾರ, ಸೂರ್ಯಕಾಂತ ಬಿರಾದಾರ, ಸಂಜೀವ ಮೇತ್ರೆ, ಬಸವರಾಜ ಪಾಟೀಲ, ಇಲಾಖೆಯ ನಯೀಮುದ್ದಿನ್, ಬಲಭೀಮ ಕುಲಕರ್ಣಿ, ಡಾ.ಶಾಲೀವಾನ್ ಉದಗೀರೆ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಶಾಸಕರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ನಿವೃತ್ತ ಶಿಕ್ಷಕರು, ಮರಣ ಹೊಂದಿದ ಶಿಕ್ಷಕರ ಅವಲಂಬಿತರು ಹಾಗೂ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜಗಳ ಸುಮಾರು 3 ಸಾವಿರ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.