ಜಾನುವಾರು ತಳಿ ಸಂವರ್ಧನಾ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಜಾನುವಾರು ತಳಿ ಸಂವರ್ಧನಾ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಜಾನುವಾರು ತಳಿ ಸಂವರ್ಧನಾ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ

ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರು ಕಪ್ಪುಪಟ್ಟಿಗೆ

ಹೆಡಗಾಪೂರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕಾಮಗಾರಿಯ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ನವೆಂಬರ್ 20ರಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಿರ್ಮಾಣ ಹಂತದಲ್ಲಿರುವ ರೈತರ ತರಬೇತಿ ಕೇಂದ್ರ, ಜಾನುವಾರು ತಳಿಗಳ ಸಂವರ್ಧನಾ ಕೇಂದ್ರ, ಕೋಳಿ ಸಂವರ್ಧನಾ ಕೇಂದ್ರ ಸೇರಿದಂತೆ ವಿವಿಧ ಕಟ್ಟಡಗಳನ್ನು ವೀಕ್ಷಿಸಿ, ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ. ಕಡಿಮೆ ದರ್ಜೆಯ ಸಿಮೆಂಟ್ ಬಳಕೆ ಮಾಡುತ್ತಿದ್ದಾರೆ. ಕೆಲಸ ಸಂಪೂರ್ಣ ಕಳಪೆಯಾಗುತ್ತಿದೆ ಎಂದು ಸ್ಥಳೀಯರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಹಾಗಾಗಿ ನಾನು ಖುದ್ದಾಗಿ ಭೇಟಿ ನೀಡಿದ್ದೇನೆ. ಇದೇ ರೀತಿ ಮುಂದುವರೆದರೆ ಸರಿಯಲ್ಲ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೀದರ ಜಿಲ್ಲೆಯ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವ ರೈತರು ವೈಜ್ಞಾನಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುವಂತಾಗಬೇಕು. ನಮ್ಮ ಭಾಗದ ರೈತರು ಕೂಡ ಉದ್ಯಮಿಗಳ ರೀತಿಯಲ್ಲಿ ಬದಲಾಗಬೇಕು ಎಂಬ ಕನಸಿದೆ. ಈ ದಿಶೆಯಲ್ಲಿ ನಾನು ಪಶು ಸಂಗೋಪನೆ ಸಚಿವನಾಗಿದ್ದಾಗ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಬಾರಿಗೆ 34.49 ಕೋಟಿ ವೆಚ್ಚದ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರವನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದೇನೆ.

ಇದು ನನ್ನ ಕನಸಿನ ಯೋಜನೆಯಾಗಿದೆ. ಜೊತೆಗೆ ರೈತರಿಗೆ ಅನುಕೂಲಕರವಾದ ಕಾಮಗಾರಿ ಇದಾಗಿರುವುದರಿಂದ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಆಸ್ಪದ ನೀಡುವುದಿಲ್ಲ. ಉತ್ತಮ ಗುಣಮಟ್ಟದ ಸಿಮೆಂಟ್ ಹಾಗೂ ಮತ್ತಿತರೆ ಉಪಕರಣಗಳನ್ನು ಬಳಸಬೇಕು. ಕ್ಯೂರಿಂಗ್ ಸರಿಯಾಗಿ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸ ವಹಿಸಿ ಕಛೇರಿಯಲ್ಲಿ ಕುಳಿತುಕೊಂಡರೆ ನಡೆಯುವುದಿಲ್ಲ. ಅನುಷ್ಠಾನ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳದಲ್ಲಿದ್ದು ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಕೂಡ ಆಗಾಗ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆಲಸದ ಮೇಲೆ ನಿಗಾ ವಹಿಸಬೇಕು. ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕುಮಾರ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶ್ರೀಮಂತ ಪಾಟೀಲ, ಶಿವಾಜಿರಾವ ಕಾಳೆ, ಸಚಿನ ರಾಠೋಡ್, ಕೇರಬಾ ಪವಾರ, ಶಿವರಾಜ ಅಲ್ಮಾಜೆ, ರಾಜಕುಮಾರ ಸೋರಾಳೆ, ಶಿವಲಿಂಗ ಚಿಟ್ಟಾ, ಶಿವಕುಮಾರ ಪಾಂಚಾಳ, ನಾಗಶೆಟ್ಟಿ ಗಾದಗೆ, ಅನೀಲ ಮುಸ್ತಾಪೂರ, ಮನೋಹರ ಬೋಗಾರ, ಹಣಮಂತ ಯರನಳ್ಳೆ, ಬಸವರಾಜ ಗಂಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.