ಬಿಜೆಪಿ ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ : ಹಾಲಕಾಯಿ

ಬಿಜೆಪಿ ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ : ಹಾಲಕಾಯಿ
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಗಳನ್ನು ಗಮನಿಸಿದಾಗ, ನಿಜಕ್ಕೂ ಬಹಳ ಹಾಸ್ಯಾಸ್ಪದ ಅಂತ ಅನಿಸುತ್ತದೆ. ಮದ್ದೂರು ಚಲೋ, ಧರ್ಮಸ್ಥಳ ಚಲೋ- ವಿಚಾರದಲ್ಲೆಲ್ಲ ಹಿಂದುಳಿದವರನ್ನು, ದಲಿತರನ್ನು ಪ್ರೇರೇಪಿಸಿ ಬಿಜೆಪಿ ಹೋರಾಟ ಮಾಡುತ್ತಿದೆ ಎನ್ನುವ ಹೇಳಿಕೆ ನೀಡಿದ್ದಾರೆ. ಎಂದು ಎಂದು ಭಾರತೀಯ ಜನತಾ ಪಕ್ಷ ಕರ್ನಾಟಕ ರಾಜ್ಯ ವಕ್ತಾರರಾದ ಡಾ. ಸುಧಾ ಆರ್. ಹಾಲಕಾಯಿ ಹೇಳಿದರು.
ಆದರೆ ನಿಮಗೆ ತಿಳಿದಿರಲಿ. ಬಿಜೆಪಿ ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಮುಖ್ಯಪ್ರವಾಹದಲ್ಲಿ ಅವರನ್ನು ಸೇರಿಸಿಕೊಂಡು ಮುನ್ನಡೆಯುವ ಕೆಲಸ ಮಾಡುತ್ತಿದೆ. ಆದರೆ ದಲಿತರ ಹೆಸರಲ್ಲಿ ಬಲಿತವರಾಗಿರುವ ಮಲ್ಲಿಕಾರ್ಜುನ ಖರ್ಗೆ ಕುಟುಂಬವು ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು- ಕೈಗಾರಿಕೆ ಸ್ಥಾಪನೆ ಮಾಡಲು ಒದಗಿಸಲಾಗುವ ನಿವೇಶನಗಳನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಕೊಂಡಿರುವುದು ಇವರ ಸಾಧನೆ.
ದಲಿತರಿಗೆ ನಿಜವಾಗಿ ಅನ್ಯಾಯ ಮಾಡುತ್ತಿರುವವರು ಈ ಬಲಿತ ದಲಿತ ಸಮಾಜದವರು. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರು ಹೇಳುತ್ತಾರೆ- ಗುಜರಾತಿಗಳು ಇಡೀ ಭಾರತವನ್ನು ಹಾಳು ಮಾಡುತ್ತಿದ್ದಾರೆ ಎಂದು. ದಲಿತ ನಾಯಕರಾಗಿ ಹಿರಿಯರಾದ ಖರ್ಗೆಯವರು ತಮ್ಮ ಮನಸ್ಸಿನೊಳಗೆ ಯಾವ ಹಂತದ ಅಸ್ಪೃಶ್ಯತೆಯನ್ನು ಆಚರಣೆ ಮಾಡುತ್ತಿದ್ದಾರೆ ಎಂಬುದನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ.
ಹಿರಿಯರಾದವರು ಈ ರೀತಿ ಜಾತಿ, ಭಾಷೆ, ರಾಜ್ಯದ ಹೆಸರಿನಲ್ಲಿ ತಾರತಮ್ಯ ಭಾವದ ರಾಜಕೀಯ ಮಾಡುತ್ತಾರೆ ಎಂದರೆ, ಅದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.
ಮೊನ್ನೆಯಂತೂ ಅವರು ಒಬ್ಬ ರೈತನ ಜತೆ ಮಾತನಾಡಿರುವ ಮಾತು ವಿಷಾದನೀಯ. ಇಷ್ಟು ಸುದೀರ್ಘ ರಾಜಕೀಯ ಜೀವನ ಮಾಡಿರುವಂತಹ ಖರ್ಗೆಯವರ ಬಾಯಿಯಲ್ಲಿ ಈ ಮಟ್ಟದ ಕೀಳು ಮಾತುಗಳು. ರೈತರ ಪರ, ದಲಿತರ ಪರ ನಿಲ್ಲುತ್ತಾರೆ ಎಂಬ ಭಾವನೆಯಿಂದ ಪದೇ ಪದೇ ಜನತೆ ಅವರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಖರ್ಗೆ ಕುಟುಂಬದ ರಾಜಕಾರಣವೆಲ್ಲ ನಕಲಿ ಎನ್ನುವುದು ಈಗ ಜನತೆಗೆ ಅರಿವಾಗುತ್ತಿದೆ.
ರೈತರ ಬಗ್ಗೆ, ದಲಿತರ ಬಗ್ಗೆ, ಕಲ್ಯಾಣ ಕರ್ನಾಟಕದ ಬಗ್ಗೆ ಅವರು ಏನೆಲ್ಲ ಹೇಳಿಕೊಂಡು ಬಂದಿದ್ದರೋ ಅವೆಲ್ಲ ಕೇವಲ ಪ್ರಚಾರದ ತಂತ್ರವಲ್ಲದೆ ಬೇರೇನೂ ಅಲ್ಲ ಎಂಬುದು ಸಾಬೀತಾಗಿದೆ. ಇವರು ಸಾರ್ವಜನಿಕರಿಗೆ ಮಂಕುಬೂದಿ ಎರಚುವುದು ಬಿಟ್ಟರೆ ಬೇರೇನೂ ಇಲ್ಲ.
ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ, ಒಂದು ಕುಟುಂಬದ ಗುಲಾಮಗಿರಿ ಮಾಡುತ್ತ, ಗುಲಾಮತನದ ಪರಮಾವಧಿಯನ್ನು ಮಾಡುತ್ತ, ಬೇರೆ ಎಲ್ಲವನ್ನೂ ದೂಷಿಸುತ್ತ ಭಂಡ ಬಾಳು ನಡೆಸುವುದೇ ಇವರ ಬಂಡವಾಳ.
ದೇಶದ ವಿಭಜನೆಯನ್ನು ಮಾಡಿದ್ದೇ ಕಾಂಗ್ರೆಸ್. ಆದರೆ ಗುಜರಾತಿಗಳಿಂದ ದೇಶದ ವಿಭಜನೆ ಆಗಿದೆ ಎನ್ನುವ ಅಪಹಾಸ್ಯದ ಮಾತನ್ನು ಆಡುತ್ತಿರುವುದು ಅಕ್ಷಮ್ಯ ಅಪರಾಧ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ.
ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ, ಹಿರಿಯರಾಗಿ ಕಲ್ಯಾಣ ಕರ್ನಾಟಕದ ವಿಕಾಸದ ಹೆಸರಿನಲ್ಲಿ ರಾಜಕಾರಣ ಮಾಡುವವರಾಗಿ ತಾವು ಮತ್ತು ತಮ್ಮ ಮಗ ಮತ್ತಷ್ಟು ಕ್ರಿಯಾಶೀಲರಾದರೆ ಈ ಭಾಗಕ್ಕೆ ಉತ್ತಮ ಎಂದು ಈ ಮೂಲಕ ಹೇಳಬಯಸುತ್ತೇವೆ.
ಇವೆಲ್ಲದರ ಮಧ್ಯೆ ಕೂಡ ಕಲ್ಯಾಣ ಕರ್ನಾಟಕದಲ್ಲಿ ಕಳೆದ 27 ತಿಂಗಳುಗಳಲ್ಲಿ 1272 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು, ಸುಮಾರು 5 ಸಾವಿರ ಮಹಿಳೆಯರ ನಾಪತ್ತೆ ಪ್ರಕರಣಗಳು ನಡೆದಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಮಹಿಳಾ ಆಯೋಗ ತನ್ನ ಕರ್ತವ್ಯವನ್ನು ನಿರ್ವಹಿಸದೆ, ಉಸ್ತುವಾರಿ ಮಂತ್ರಿಗಳು ತಮ್ಮ ಕರ್ತವ್ಯ ನಿಭಾಯಿಸದೆ, ಧಮ್ಸ್ಥಳ ವಿಚಾರದಲ್ಲಿ ಬಹಳ ಆಸಕ್ತಿ ತೋರಿಸುವ ಮಹಿಳಾ ಆಯೋಗಕ್ಕೆ, ಸ್ವತಃ ಕಲಬುರಗಿಯನ್ನು ಪ್ರತಿನಿಧಿಸುತ್ತಿರುವ ಮಹಿಳಾ ಆಯೋಗದ ಅಧ್ಯಕ್ಷೆ, ಹಾಗೂ ಉಸ್ತುವಾರಿ ಮಂತ್ರಿಗಳು ಯಾವುದೇ ದಿಟ್ಟ ಕ್ರಮವನ್ನು ತೆಗೆದುಕೊಳ್ಳದೆ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಇದು ಇವರ ಆಡಳಿತಕ್ಕೆ ಒಂದು ಕೈಗನ್ನಡಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.