ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನ ಅಧ್ಯಕ್ಷರಾಗಿ ಶಿವರಂಜನ ಸತ್ಯಂಪೇಟೆ ಆಯ್ಕೆ

ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನ
ಅಧ್ಯಕ್ಷರಾಗಿ ಶಿವರಂಜನ ಸತ್ಯಂಪೇಟೆ ಆಯ್ಕೆ
ಕಲಬುರಗಿ: ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆಯ ೧೫ನೇ ವರ್ಷದ ಸಂಭ್ರಮ ಪ್ರಯುಕ್ತ ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನವನ್ನು ಸೆ.೨೦ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕೆಯ ಸಂಪಾದಕ ಶರಣಬಸಪ್ಪ ಸೂಗೂರು ಹೇಳಿದರು.
ಪತ್ರಕರ್ತ, ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಸಮ್ಮೇಳನಾಧ್ಯಕ್ಷರಾಗಿದ್ದು, ಶಾಸಕ ಬಸವರಾಜ ಮತ್ತಿಮಡು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ. ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕಡಗಂಚಿ ಮಠದ ಪಂಪಾಪತಿ ದೇವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ ಸಮ್ಮೇಳನ ಉದ್ಘಾಟಿಸಲಿದ್ದು, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆಶಯ ನುಡಿ ಗಳನ್ನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಮಧ್ಯಾಹ್ನ ೩ಕ್ಕೆ ಪತ್ರಕರ್ತ ಬಿ.ವಿ.ಚಕ್ರವರ್ತಿ ನೇತೃತ್ವದ ಗೋಷ್ಠಿಯಲ್ಲಿ ಪತ್ರಕರ್ತ ಪ್ರಭಾಕರ ಜೋಶಿ ಆಶಯನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸುವರು. ಜತೆಗೆ ಕವಿಗೋಷ್ಠಿ ನಡೆಯಲಿದೆ. ಸಂಜೆ ೪ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ವರಜ್ಯೋತಿ ಬಂತೇಜಿ, ಜಯದೇವಿ ಗಾಯಕವಾಡ, ಮಾವಳ್ಳಿ ಶಂಕರ ಪಾಲ್ಗೊಳ್ಳುವರು. ಪತ್ರಕರ್ತರ ಸನ್ಮಾನ ಕೂಡ ನಡೆಯಲಿದೆ ಎಂದರು.
ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ ಪತ್ರಕರ್ತರ ಕಣ್ಣಿನ ಉಚಿತ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ ನಡೆಯಲಿದೆ ಎಂದು ತಿಳಿಸಿದರು. ಸಂಜೀವಕುಮಾರ ಸಂಗನ್, ಮಲ್ಲಿಕಾರ್ಜುನ ಸಂಗೊಳಗಿ ಇದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ:
ಕಳೆದ ೨೫ ವರ್ಷಗಳಿಂದ ಪತ್ರಿಕಾ ವ್ಯವಸಹಾಯ ಮಾಡುತ್ತಿರುವ ಶಿವರಂಜನ ಸತ್ಯಂಪೇಟೆಯವರು, ಕನ್ನಡ ಎಂ.ಎ., ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರ ಕುರಿತು ಎಂ.ಫಿಲ್ ಪದವಿ ಪಡೆದಿರುವ ಇವರು ಒಂದು ಮುಂಜಾವು, ಎಲೆಮರೆಯ ಸಿಹಿ, ವಚನ ಹೃದಯ, ಮುಖಾಮಖಿ, ಮತ್ತೆ ಕಲ್ಯಾಣ ಹಾಗೆಂದರೇನು? ಸೇರಿದಂತೆ ೧೬ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಉಷಾಕಿರಣ, ಪ್ರಜಾವಾಣಿ, ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ, ದಿ ಡೈಲಿ ನ್ಯೂಸ್ ಪತ್ರಿಕೆಯ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಜಾಪ್ರಗತಿ ಪತ್ರಿಕೆಯ ಕಲಬುರಗಿ ಜಿಲ್ಲೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ ಶಿವರಂಜನ್ ಸತ್ಯಂಪೆಟ್