ಕಲ್ಯಾಣ ಕರ್ನಾಟಕದ ಇತಿಹಾಸ ನಿರ್ಲಕ್ಷ – ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಕರ್ನಾಟಕ ಯುವಜನ ಒಕ್ಕೂಟ (KYF), ಕಲಬುರಗಿ ಕೇಂದ್ರ ಸಮಿತಿ, ಆಕ್ರೋಶ

ಕಲ್ಯಾಣ ಕರ್ನಾಟಕದ ಇತಿಹಾಸ ನಿರ್ಲಕ್ಷ – ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಕರ್ನಾಟಕ ಯುವಜನ ಒಕ್ಕೂಟ (KYF), ಕಲಬುರಗಿ ಕೇಂದ್ರ ಸಮಿತಿ, ಆಕ್ರೋಶ
ಕಲಬುರಗಿ: ಸೆಪ್ಟೆಂಬರ್ 1948 ರಲ್ಲಿ ಹೈದರಾಬಾದ್ ನಿಜಾಂ ಸರ್ಕಾರ, ಭಾರತ ಒಕ್ಕೂಟದಲ್ಲಿ ವಿಲೀನವಾದ ನೈಜ ಇತಿಹಾಸವನ್ನು ಸರಿಯಾಗಿ ದಾಖಲಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕರ್ನಾಟಕ ಯುವಜನ ಒಕ್ಕೂಟ (KYF) ರಾಜ್ಯ ಸಂಚಾಲಕ, ನ್ಯಾಯವಾದಿ ಜೆನವೇರಿ ವಿನೋದ್ ಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ ಮೂರು ದಶಕದಿಂದ ಇಲ್ಲಿಯವರೆಗೆ ಸಂಸದರು, ಶಾಸಕರು, ಮಂತ್ರಿಗಳು ಈ ವಿಷಯದಲ್ಲಿ ಮೌನ ವಹಿಸಿರುವುದು ಕಲ್ಯಾಣ ಕರ್ನಾಟಕ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಈ ಭಾಗದ ಇತಿಹಾಸವನ್ನು ಸರಿಪಡಿಸಲು ರಾಜ್ಯ ಸರ್ಕಾರವೂ ನಿರ್ಲಕ್ಷ್ಯ ತೋರಿದೆ” ಎಂದು ಅವರು ಆರೋಪಿಸಿದರು.
ವಿಶೇಷ, ಮರು ಸ್ವಾತಂತ್ರ್ಯೋತ್ಸವ ದಿನ ನಿಗದಿ ಪಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಪತ್ರ ಬಂದು ಒಂದು ದಶಕ ಕಳೆದರೂ, ಕೇವಲ ಕಲಬುರಗಿ ಜಿಲ್ಲಾಧಿಕಾರಿಯೊಬ್ಬರೇ ಉತ್ತರ ನೀಡಿದ್ದಾರೆ. ವಿಭಾಗದ ಉಳಿದ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಇನ್ನೂ ಸ್ಪಂದಿಸಿಲ್ಲ. ಎರಡು ಬಾರಿ ಸರ್ಕಾರದಿಂದ (ನೆನಪೋಲೆ) ಜ್ಞಾಪನ ಪತ್ರ ಬಂದರೂ ವರದಿ ಸಲ್ಲಿಸಲು ನಿರ್ಲಕ್ಷ್ಯ ತೋರಿರುವುದನ್ನು ಅವರು ತೀವ್ರ ವಾಗಿ ಖಂಡಿಸಿದರು.
“ಒಬ್ಬ ನ್ಯಾಯವಾದಿ ಅರ್ಜಿದಾರನಾಗಿದ್ದರು ಕೂಡಾ ದೃಢೀಕರಣ ದಾಖಲೆಗಳ ನಕಲು ಪ್ರತಿಗಾಗಿ 25 ದಿನ ಅಲೆದಾಡಿದ್ದು ಖೇದದ ಸಂಗತಿ ಯಾಗಿದೆ ಎಂದು ಹೇಳುವ ಮೂಲಕ ಜಿಲ್ಲಾಡಳಿತದ ನೌಕರರ ನಿಷ್ಕ್ರಿಯ ಕಾರ್ಯವೈಖರಿ ಹೊರಬಂದಿದೆ” ಎಂದು ಜೆನವೇರಿ ವಿನೋದ್ ಕುಮಾರ ಬೇಸರ ವ್ಯಕ್ತಪಡಿಸಿದರು.
KYF ಜಿಲ್ಲಾ ಅಧ್ಯಕ್ಷ ಅನಂತ ಗುಡಿ ಮಾತನಾಡಿ, “ಮನವಿ ಸಲ್ಲಿಸುತ್ತ ದಶಕವಾದರೂ, ಸರ್ಕಾರ ಮತ್ತು ಪ್ರಾದೇಶಿಕ ಆಡಳಿತವು ಸ್ಪಂದಿಸದಿರುವುದು ಕಲ್ಯಾಣ ಕರ್ನಾಟಕದ ಅನ್ಯಾಯಕ್ಕೆ ತಾಜಾ ಉದಾಹರಣೆ ಯಲ್ಲದೆ, ಈ ಭಾಗದ ಸಂಸದರು, ಜನಪ್ರತಿನಿಧಿಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ” ಎಂದು ಆರೋಪಿಸಿದರು.