ಬಸವ ತತ್ವ ಬಿತ್ತಿದವರು ಲಿಂಗಾನಂದ ಸ್ವಾಮಿಗಳು: ಬಸವಲಿಂಗ ಪಟ್ಟದ್ದೇವರು.

ಬಸವ ತತ್ವ ಬಿತ್ತಿದವರು ಲಿಂಗಾನಂದ ಸ್ವಾಮಿಗಳು: ಬಸವಲಿಂಗ ಪಟ್ಟದ್ದೇವರು.
ಬಸವಕಲ್ಯಾಣ: ನನ್ನ ಹೃದಯದಲ್ಲಿ ಬಸವ ತತ್ವದ ಬೀಜ ಬಿತ್ತಿದವರೇ ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಎಂದು ಅನುಭವ ಮಂಟಪದ ಅಧ್ಯಕ್ಷರು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಬಸವ ಧರ್ಮ ಪೀಠದ ಆವರಣದಲ್ಲಿ ಹಮ್ಮಿಕೊಂಡ ಪ್ರವಚನ ಪಿತಾಮಹ ಲಿಂ. ಲಿಂಗಾನಂದ ಮಹಾಸ್ವಾಮಿಗಳವರ 95 ನೆಯ ಸ್ಮರಣೋತ್ಸವ, ಪೂಜ್ಯ ಮಹಾಜಗದ್ಗುರು ಡಾ. ಗಂಗಾದೇವಿ ಮಾತಾಜಿಯವರ 67ನೆ ವರ್ದಂತಿ, ಹಾಗೂ ರಾಷ್ಟ್ರೀಯ ಬಸವದಳದ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಬಸವ ಜ್ಯೋತಿ ಪ್ರಜ್ವಲಿಸಿ ಮಾತನಾಡಿದ ಶ್ರೀಗಳು 45 ವರ್ಷ ಕಾಲ ಪ್ರವಚನಗಳ ಮುಖಾಂತರ ಬಸವ ಧರ್ಮ ಮನೆ, ಮನಗಳಿಗೆ ಪ್ರಸಾರ ಮಾಡಿ, "ಬಸವ ತತ್ವ ಜನಮಾನಸದಲ್ಲಿ ಬಿತ್ತಿದವರು ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿಗಳವರು. ಅವರ ಲಿಂಗಾಯತ ಧರ್ಮ ನಿಷ್ಠೆ ಎಂದೆಂದಿಗೂ ಸ್ಮರಣೀಯವಾದದ್ದು.
ಪ್ರವಚನದ ಮುಖಾಂತರ ಬಸವ ಧರ್ಮ ಜಾಗೃತಿ ಮೂಡಿಸಿದವರಲ್ಲಿ ಲಿಂಗಾನಂದ ಸ್ವಾಮಿಗಳು ಪ್ರಮುಖ ಸಂತರಾಗಿ ನಮಗೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದಾರೆ ಎಂದರು.
ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಗುರು ಬಸವೇಶ್ವರ ಮಠ ಹುಲಸೂರು ಶ್ರೀಗಳು ಮಾತನಾಡಿ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕೆಲಸ ಕಾರ್ಯಗಳನ್ನು ಮಾಡಿ ಧರ್ಮವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ ಪೂಜ್ಯ ಗಂಗಾ ಮಾತಾಜಿ ಮಾತನಾಡಿ ಬರುವ ಅಕ್ಟೋಬರ್ ತಿಂಗಳ 10,11,12 (ಈ ಮೂರು ದಿನಗಳ ಕಾಲ) ರಂದು 24ನೆಯ ಕಲ್ಯಾಣ ಪರ್ವ ಉತ್ಸವವು ಅತ್ಯಂತ ಅರ್ಥಪೂರ್ಣವಾಗಿ ಅಷ್ಟೇ ವೈಚಾರಿಕವಾಗಿ ಆಚರಣೆ ಮಾಡೋಣ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ
ಸ್ವಾಗತ ಸಮಿತಿಯ ಗೌರವಾದ್ಯಕ್ಷರಾಗಿ ಬಸವರಾಜ್ ಬುಳ್ಳ , ಕಾರ್ಯಾದ್ಯಕ್ಷರಾಗಿ ಶರಣ ಕಂಟೆಪ್ಪಾ ಗಂದಿಗುಡಿ, ಪ್ರದಾನ ಕಾರ್ಯದರ್ಶಿಯಾಗಿ ಶರಣ ಶಿವರಾಜ್ ನರಶೆಟ್ಟಿಯವರನ್ನು ಆಯ್ಕೆಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಉಪ ಸಮಿತಿಯ ಇತರೆ ಸದಸ್ಯರಾಗಿ ಪ್ರಮುಖರಾದ ಸೋಮಶೇಖರ್ ಪಾಟೀಲ್ ಗಾದಗಿ, ಕುಶಾಲ್ ರಾವ್ ಪಾಟೀಲ್ ಕಾಜಾಪುರೆ, ರಾಜೇಂದ್ರ ಜೊನ್ನೀಕೇರಿ, ರಾಜೇಂದ್ರ ಜೊನ್ನೀಕೇರಿ, ರಾಜೇಂದ್ರ ಗಂದಗೆ, ಆರ್ ಜಿ ಶೆಟಗಾರ್, ಸಂಗಮೇಶ ಎನ್ ಜವಾದಿ,ಅನಿಲ್ ಪಾಟೀಲ್, ಶಂಕ್ರಪ್ಪ ಪಾಟೀಲ್, ವಿಜಯಕುಮಾರ್ ಮೇಳಕುಂದಿ, ಮಹಾದೇವ್ ಬೇಲೂರೆ, ಸಿದ್ರಾಮಪ್ಪ ಲದ್ದೆ, ರವಿ ಪಾಪಡೆ, ರವೀಂದ್ರ ಕೋಳಕೂರ, ಗಣೇಶ್ ಬಿರಾದಾರ್ ಸೇರಿ 42 ಜನ ಶರಣರನ್ನು ಆಯ್ಕೆಮಾಡಿ ಘೋಷಿಸಲಾಯಿತು. ಅಲ್ಲದೆ ಕಲ್ಯಾಣ ಪರ್ವ ಉತ್ಸವದ ಬಿತ್ತಿಪತ್ರ ಬಿಡುಗಡೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಇದೇ ವೇದಿಕೆಯಲ್ಲಿ ಬಸವ ಧರ್ಮ ಪೀಠದ ಹಾಲಿ ಕಾರ್ಯಾದ್ಯಕ್ಷರಾದ ಪೂಜ್ಯ ಶ್ರೀ ಡಾ. ಗಂಗಾದೇವಿ ಮಾತಾಜಿ ರವರ 67ನೇ ಜನ್ಮದಿನ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸುವರ್ಣ ಮಹೋತ್ಸವ ವರ್ದಂತಿಯ ನಿಮಿತ್ತ ಇಬ್ಬರೂ ಪೂಜ್ಯರಿಗೆ ಗೌರವಿಸಿ, ಸನ್ಮಾನಿಸಲಾಯಿತು.
ವರದಿ - ಸಂಗಮೇಶ ಎನ್ ಜವಾದಿ