ಬಸವಕಲ್ಯಾಣದಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ

ಬಸವಕಲ್ಯಾಣದಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ
ಬಸವಕಲ್ಯಾಣ: ಅ.27,ನಗರದಾದ್ಯಂತ ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿದ್ದು, ಈ ಬಾರಿ 25ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ತಯಾರಿ ನಡೆದಿದೆ. ಮೂರ್ತಿಗಳ ಖರೀದಿ, ಪೂಜಾ ಸಾಮಗ್ರಿಗಳು ಮತ್ತು ಅಲಂಕಾರ ವಸ್ತುಗಳ ಮಾರಾಟ ಜೋರಾಗಿ ಸಾಗುತ್ತಿದೆ.
ಬಸವೇಶ್ವರ ವೃತ್ತದಲ್ಲಿ ರಾಜ್ ಮಹಲ್ ಮಾದರಿಯ ಆಕರ್ಷಕ ಮಂಟಪ ನಿರ್ಮಿಸಲಾಗುತ್ತಿದೆ. ವೃತ್ತದ ಉತ್ತರ ಭಾಗದಲ್ಲಿ ಎತ್ತರ ಪೀಠವನ್ನು ಸಿದ್ಧಪಡಿಸಿ, ಥರ್ಮಕೋಲ್‌ನಲ್ಲಿ ರಾಜ್ ಮಹಲ್ ವಿನ್ಯಾಸ ನೀಡಲಾಗಿದೆ. ಕಳೆದ ಬಾರಿ ಕೋಟೆ ಮಾದರಿಯ ಮಂಟಪ ಗಮನ ಸೆಳೆದಿದ್ದರೆ, ಈ ಬಾರಿ ಅದಕ್ಕಿಂತಲೂ ವಿಭಿನ್ನವಾಗಿ ವಿದ್ಯುತ್ ದೀಪಾಲಂಕಾರ ಸಹಿತ ಭವ್ಯ ರೂಪ ನೀಡಲು ಮಂಡಳಿಯವರು ವಾರದಿಂದ ಶ್ರಮಿಸುತ್ತಿದ್ದಾರೆ.
ಗೋಲ್ಚವಡಿ ವೀರ ಸಾವರ್ಕರ್ ಗಣೇಶ್ ಮಂಡಳಿ ಸೇರಿದಂತೆ ಹಲವು ಸಂಘಟನೆಗಳು ಭಾನುವಾರ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಗಳನ್ನು ಭೈರವವಾಗಿ ಸ್ವಾಗತಿಸಿವೆ. ಮಹಾತ್ಮ ಗಾಂಧಿ ವೃತ್ತ, ಪಟೇಲ್ ಚೌಕ್, ಭವಾನಿ ಮಂದಿರ, ಶಿವಾಜಿ ನಗರ, ಹರಳಯ್ಯ ಚೌಕ್, ಶೀತ ಕಾಲೋನಿ, ಹನುಮಾನ್ ದೇವಸ್ಥಾನ, ರೇಣಾಗಲ್ಲಿ, ಧರ್ಮ ಪ್ರಕಾಶ್ ಗಲ್ಲಿ, ಬನಶಂಕರಿ ಗಲ್ಲಿ, ಜೈ ಶಂಕರ್ ಕಾಲೋನಿ, ಗೋಸಾಯಿ ಗಲ್ಲಿ, ರಾಜ ಪುತಗಲ್ಲಿ, ಬಿರಾದರ್ ಕಾಲೋನಿ, ಹಿರೇಮಠ ಕಾಲೋನಿ, ತಿಪುರಂತ್ ದೇಶಪಾಂಡೆ ಗಲ್ಲಿ, ಕುಂಬಾರ ಬಾಳಿ, ವಿದ್ಯಾಶ್ರೀ ಕಾಲೋನಿ ಮತ್ತಿತರ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಜೋರಾಗಿ ನಡೆಯುತ್ತಿದೆ.
ಹೊರ ರಾಜ್ಯಗಳಿಂದ ಡಿಜೆಗಳನ್ನು ತರಲು ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದು, ಮೇಳವಾಧ್ಯಗಳ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಹಿನ್ನೆಲೆ ನಗರದ ಠಾಣೆ ಮಟ್ಟದಲ್ಲಿ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ಸಭೆ ನಡೆಸಿ, ಮಂಡಳಿ ಪದಾಧಿಕಾರಿಗಳಿಗೆ "ಹಬ್ಬ ಸಂಭ್ರಮದಿಂದ, ಶಾಂತಿಯುತವಾಗಿ ನಡೆಯಬೇಕು; ಅನಾವಶ್ಯಕ ಗದ್ದಲಕ್ಕೆ ಅವಕಾಶ ಕೊಡಬಾರದು" ಎಂದು ಸೂಚಿಸಲಾಗಿದೆ.
ವರದಿ -ಧನರಾಜ ಡಿ ರಾಜೋಳೆ