ಧರ್ಮಪ್ರಕಾಶ್ ಗಲ್ಲಿಯಲ್ಲಿ ಹೈಮಸ್ಟ್ ಲೈಟ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಮನವಿ
ಧರ್ಮಪ್ರಕಾಶ್ ಗಲ್ಲಿಯಲ್ಲಿ ಹೈಮಸ್ಟ್ ಲೈಟ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಮನವಿ
ಬಸವಕಲ್ಯಾಣ: ವಾರ್ಡ್ ನಂ. 11ರ ವ್ಯಾಪ್ತಿಯ ಧರ್ಮಪ್ರಕಾಶ್ ಗಲ್ಲಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಹೈಮಸ್ಟ್ ಲೈಟ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಧರ್ಮಪ್ರಕಾಶ್ ಗಲ್ಲಿಯ ಧನರಾಜ ಡಿ. ರಾಜೋಳೆ ಅವರ ಮನೆ ಸಮೀಪದ ಮರಿಯಮ್ಮ ದೇವಸ್ಥಾನದ ಪಕ್ಕದಲ್ಲಿ ಹಾಗೂ ಡಾ. ಜಿಯಾಯೊದ್ದೀನ್ ನೀಲಂಗೆಕರ ಅವರ ಮನೆಯ ಪಕ್ಕದ ಮೂರು ರಸ್ತೆಗಳಲ್ಲಿ ಸಮರ್ಪಕ ಬೆಳಕು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ರಾತ್ರಿ ವೇಳೆ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿದೆ. ಪ್ರಸ್ತುತ ಇರುವ ವಿದ್ಯುತ್ ಕಂಬಗಳ ಸಣ್ಣ ಬಲ್ಬುಗಳು ಸಮರ್ಪಕ ಬೆಳಕು ನೀಡುತ್ತಿಲ್ಲ. ಅಲ್ಲದೆ ರಸ್ತೆಗಳಲ್ಲಿ ತೆಗ್ಗು-ಗುಂಡಿಗಳು ಹೆಚ್ಚಾಗಿರುವುದರಿಂದ ಕತ್ತಲೆಯಲ್ಲಿ ನಡೆಯುವವರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಉಂಟಾಗುತ್ತಿದೆ.
ರಾತ್ರಿ ವೇಳೆಯಲ್ಲಿ ಅಲೆದಾಡುವ ನಾಯಿಗಳ ಸಮಸ್ಯೆಯೂ ಹೆಚ್ಚಿದ್ದು, ಸಾರ್ವಜನಿಕರು ಹಾಗೂ ಮಕ್ಕಳಿಗೆ ಕಚ್ಚುವ ಘಟನೆಗಳು ನಡೆಯುತ್ತಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಧರ್ಮಪ್ರಕಾಶ್ ಗಲ್ಲಿಯ ಮರಿಯಮ್ಮ ದೇವಸ್ಥಾನದ ಪಕ್ಕ ಹಾಗೂ ಸಂಪರ್ಕಿಸುವ ಮೂರು ರಸ್ತೆಗಳಲ್ಲಿ ತಕ್ಷಣವೇ ಹೈಮಸ್ಟ್ ಲೈಟ್ ಅಳವಡಿಸಲು ಮನವಿ ಮಾಡಲಾಗಿದೆ.
ಅದೇ ರೀತಿ ವಾರ್ಡ್‌ನ ಅಂಬಾಭವಾನಿ ದೇವಾಲಯ, ಆರ್ಯ ಸಮಾಜ ನಾಗಪ್ಪ ಕಟ್ಟೆ ಹಾಗೂ ಬಂದೇನವಾಜ್ ದರ್ಗಾ ಪ್ರದೇಶಗಳಲ್ಲಿ ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಒತ್ತಾಯಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
