ಕಲಬುರ್ಗಿಯಲ್ಲಿ ಭಾರಿ ಮಳೆ : ಕಣ್ಣಿರಲ್ಲಿ ರೈತ ಸಮೂಹ

ಕಲಬುರ್ಗಿಯಲ್ಲಿ ಭಾರಿ ಮಳೆ : ಕಣ್ಣಿರಲ್ಲಿ ರೈತ ಸಮೂಹ
ಕಲಬುರಗಿ: ಜಿಲ್ಲೆ ಹಾಗೂ ಸುತ್ತಮುತ್ತಲಿನಲ್ಲಿ ಪ್ರದೇಶದಗಳಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ತೊಗರಿ ಕಣಜದ ರೈತರು ಅಕ್ಷರಶಃ ಕಂಗಾಲಾಗಿದ್ದು, ಕಣ್ಣಿರು ಕೋಡಿಯಲ್ಲಿ ಕೈ ತೊಳೆಯುವಂತಾಗಿದೆ.
ಮುಂಗಾರು ಬಿತ್ತನೆಯ ವಾಣಿಜ್ಯ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬೀನ್ , ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಭಾರಿ ಮಳೆಗೆ ನಾಶವಾಗುತ್ತಿವೆ.
ತೊಗರಿಯ ನಾಡಾದ ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆಯಂತೆ 418 ಮೀ.ಮೀ. ಮಳೆಯಾಗಬೇಕಿತ್ತು. ಆದರೆ, ಶೇಕಡಾ 51 ಪ್ರತಿಶತ ಹೆಚ್ಚಿನ ಮಳೆ ಅಂದರೆ 632 ಮಿ.ಮೀ.ನಷ್ಟು ಮಳೆಯಾಗಿದೆ. ಜಿಲ್ಲೆಯ ರೈತರು ಬೆಳೆದ ಬೆಳೆ ತೊಗರಿ, ಹೆಸರು, ಉದ್ದು, ಎಳ್ಳು ಸೋಯಾಬೀನ್ ಸೂರ್ಯಕಾಂತಿ ಬೆಳೆಗಳು ಮಳೆಗೆ ಸಂಪೂರ್ಣ ನಾಶವಾಗಿವೆ.
ವರುಣನ ಆರ್ಭಟಕ್ಕೆ ರೈತ ಸಮೂಹ ದಿಕ್ಕು ತೋಚದೇ ಕುಳಿತಿದೆ.
1.26 ಲಕ್ಷ ಕ್ಯೂಸೆಕ್ ಭೀಮೆಗೆ: ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಹಲವು ದಿನಗಳಿಂದ ವಿಪರೀತ ಮಳೆಯಾಗುತ್ತಿರುವದರಿಂದ ಉಜನಿ ಜಲಾಶಯದಿಂದ ಬುಧವಾರ ಸುಮಾರು 1.26,600 ಲಕ್ಷ ಕ್ಯೂಸೆಕ್ ನೀರು ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಮೂಲಕ ಭೀಮೆಗೆ ಬಿಡುಗಡೆ ಮಾಡಿದೆ. ಇದರಿಂದ ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮತ್ತಷ್ಟು ನೀರು ಬಿಡುವ ಸಂಭವವಿದೆ ಎಂದು ಉಜನಿ ಆಣೆಕಟ್ಟು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್.ಮುನ್ನೋಳ್ಳಿ ತಿಳಿಸಿದ್ದು ಆ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.
90 ಕ್ಕೂ ಹೆಚ್ಚು ಮನೆಗಳಿಗೆ ಹಾನಿ:
ಅಫಜಲಪುರ 60 ಮನೆಗಳಿಗೆ ಹಾನಿ, ಆಳಂದ 29 ಮನೆ ಗೋಡೆ ಕುಸಿತಗೊಂಡಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತೊಗರಿ, ಹೆಸರು, ಉದ್ದು ನೀರು ಪಾಲಾಗಿದ್ದು, ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿಂಚೋಳಿ, ಆಳಂದ, ಚಿತ್ತಾಪುರ, ಕಾಳಗಿ, ಸೇಡಂ ಸೇರಿದಂತೆ ವಿವಿಧೆಡೆ ವಾಣಿಜ್ಯ ಬೆಳೆಗಳು ನೀರು ಪಾಲಾಗಿವೆ. ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಿರಂತರ ಮಳೆಯಿಂದ 60 ಮನೆಗಳಿಗೆ ಹಾನಿಯಾಗಿದ್ದು,ಆಳಂದ ತಾಲೂಕಿನ ಜಂಬಗಿ, ಜಿಡಗಾ, ಭೂಸನೂರ ಸೇರಿದಂತೆ 21 ಮನೆಗಳಿಗೆ ನೀರು ನುಗ್ಗಿ, ಕೆಲವೆಡೆ 29 ಮನೆಗಳ ಗೋಡೆ ಭಾಗಶಃ ಕುಸಿದಿವೆ.
ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಬೆಳೆಗಳ ಸಮೀಕ್ಷೆ ಮಾಡಿಸಿ ಆದಷ್ಟು ಬೇಗ ರೈತರಿಗೆ ಪರಿಹಾರ ಒದಗಿಸುವಂತೆ ಅನೇಕ ರೈತ ಪರ ಸಂಘಟನೆಗಳು ಆಗ್ರಹಿಸಿವೆ