ಕರ್ನಾಟಕದ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಎಲೆಕ್ಟ್ರಾನಿಕ್, ಐಟಿ ಬಿಟಿ 2024 - 2029 ಜಿಸಿಸಿ ನೀತಿ: ಪ್ರಿಯಾಂಕ್ ಖರ್ಗೆ
ಕರ್ನಾಟಕದ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಎಲೆಕ್ಟ್ರಾನಿಕ್, ಐಟಿ ಬಿಟಿ 2024 - 2029 ಜಿಸಿಸಿ ನೀತಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯದ ಉದ್ಯಮ ವಲಯಕ್ಕೆ ಹೆಚ್ಚಿನ ಚೈತನ್ಯ ತುಂಬುವ ಹಾಗೂ ಉದ್ಯೋಗ ಸೃಷ್ಟಿಗೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ವಲಯದ 2024 - 2029 ಜಾಗತಿಕ ಸಾಮರ್ಥ್ಯ ಕೇಂದ್ರ - ಜಿಸಿಸಿ ನೀತಿಯನ್ನು (ಗ್ಲೋಬಲ್ ಕೆಪೆಬಿಲಿಟಿ ಸೆಂಟರ್) ಬಿಡುಗಡೆ ಮಾಡಲಾಗಿದೆ ಎಂದು ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2029ರ ವೇಳೆಗೆ ಕರ್ನಾಟಕದಲ್ಲಿ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆರಂಭಿಸುವ ಗುರಿಯಿದ್ದು, 3.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಮತ್ತು ಆರ್ಥಿಕ ಉತ್ಪಾದನೆಯಲ್ಲಿ 50 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕವು 2030ರ ವೇಳೆಗೆ ವಿಶ್ವದ ಅಗ್ರ ಫೋರ್ಬ್ಸ್ 2000 ಉದ್ಯಮಗಳಲ್ಲಿ ಶೇ 15 ಕ್ಕಿಂತ ಹೆಚ್ಚು (330) ಉದ್ಯಮಗಳಿಗೆ ನೆಲೆ ನೀಡುವ ಗುರಿಯನ್ನು ಹೊಂದಿರುವ ದೇಶದ ಮೊದಲ ಜಿಸಿಸಿ ನೀತಿಯನ್ನು ಘೋಷಿಸಿದ್ದಾರೆ.
ಇದು ವಿವಿಧ ವಲಯಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ.
ಜಿಸಿಸಿ ಗಳಲ್ಲಿ 5.70 ಲಕ್ಷ ವೃತ್ತಿಪರರು ಉದ್ಯೋಗದಲ್ಲಿದ್ದಾರೆ ಮತ್ತು ಭಾರತದಲ್ಲಿ ನಮ್ಮ ಬೆಂಗಳೂರು ಶೇ.39 ಮಾರುಕಟ್ಟೆ ಪಾಲನ್ನು ಹೊಂದಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಎರಡು ಪಟ್ಟು ಹೆಚ್ಚು ಪ್ರತಿಭಾನ್ವಿತರನ್ನು ಹೊಂದಿರುವ 570 ಜಿಸಿಸಿ ಗಳನ್ನು ಹೊಂದಿದೆ.
ನುರಿತ ವೃತ್ತಿಪರರು, ಸುಧಾರಿತ ತಾಂತ್ರಿಕ ಮೂಲಸೌಕರ್ಯ ಮತ್ತು ಉತ್ತಮ ವ್ಯಾಪಾರ ವ್ಯವಸ್ಥೆಯೊಂದಿಗೆ ಜಿಸಿಸಿ ಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಸಿಸಿ ನೀತಿಯ ಪ್ರಮುಖ ಅಂಶಗಳನ್ನು ಈ ಎಲ್ಲವೂ ಒಳಗೊಂಡಿವೆ
ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಮೂರು ಹೊಸ ಟೆಕ್ ಪಾರ್ಕ್‌ಗಳೊಂದಿಗೆ ಜಾಗತಿಕ ನಾವೀನ್ಯತೆಯ ಜಿಲ್ಲೆಗಳ ಸ್ಥಾಪನೆ. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ 100 ಕೋಟಿ ರೂಪಾಯಿ ಆವಿಷ್ಕಾರ ನಿಧಿ. "ಇನ್ನೋವೇಶನ್ ಬಿಯಾಂಡ್ ಬೆಂಗಳೂರು" ಪ್ಯಾಕೇಜ್ ನೇಮಕಾತಿಗೆ ನೆರವು, ಇತರೆ ಬೆಂಬಲ ಮತ್ತು ಪ್ರೋತ್ಸಾಹಕಗಳ ವಿಸ್ತರಣೆ.
ಅನುಮೋದನೆಗಳು ಮತ್ತು ಸರ್ಕಾರದ ಸಮನ್ವಯವನ್ನು ಸುವ್ಯವಸ್ಥಿತಗೊಳಿಸಲಲು ಜಿಸಿಸಿ ಗಳಿಗೆ ಏಕ ಸಂಪರ್ಕದ (SPOC) ರಚನೆ ಮಾಡಲಾಗುವುದು.
ಬೆಂಗಳೂರು ಕ್ಲಸ್ಟರ್ ಆಚೆಗೆ ನ್ಯಾನೋ ಜಿಸಿಸಿ ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಳಿಗೆ ಬೆಂಬಲ. ಒಂದು ಲಕ್ಷ ಇಂಟರ್ನ್‌ಶಿಪ್‌ಗಳ ಸುಗಮಗೊಳಿಸುವಿಕೆಗೆ ಕ್ರಮ ಕೈಗೊಳ್ಳಲಾಗುವುದು.
ಕೃತಕ ಬುದ್ಧಿಮತ್ತೆ (AI) ಗಾಗಿ ಉತ್ಕೃಷ್ಟತಾ ಕೇಂದ್ರ ಮತ್ತು AI ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲು AI ಕೌಶಲ್ಯ ಮಂಡಳಿ ಪ್ರಾರಂಭಿಸಲಾಗುವುದು.
ನಮ್ಮ ಸರ್ಕಾರವು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಹೊಸ ಹೊಸ ಅವಕಾಶಗಳನ್ನು ಕಲ್ಪಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರ ಮುಂದುವರೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.