"ಸು ಫ್ರಮ್ ಸೋ" ಸಿನಿಮಾಕ್ಕೆ ಮುಗಿಬಿದ್ದ ಕಲಬುರಗಿ ಸಿನಿಪ್ರಿಯರು

"ಸು ಫ್ರಮ್ ಸೋ" ಸಿನಿಮಾಕ್ಕೆ ಮುಗಿಬಿದ್ದ ಕಲ ಬುರಗಿ ಸಿನಿಪ್ರಿಯರು
ಶೆಟ್ಟಿ ಸಿನಿಮಾಸ್ ನ ಸಂಗಪ್ಪ ಜಿ ಶೆಟ್ಟಿ ಹರ್ಷ
ಕಲಬುರಗಿ: ಕನ್ನಡದ ಪ್ರಖ್ಯಾತ ನಟ ಹಾಗೂ ನಿರ್ದೇಶಕರಾದ "ಒಂದು ಮೊಟ್ಟೆಯ ಕಥೆ" ಖ್ಯಾತಿಯ ರಾಜ್ ಬಿ ಶೆಟ್ಟಿ ನಿರ್ಮಾಣದ "ಸು ಫ್ರಮ್ ಸೋ" ಸಿನಿಮಾವು ಮೂರನೇ ವಾರದಲ್ಲೂ ಕಲಬುರಗಿಯ ಸಿನಿಪ್ರಿಯರ ಮನೆಗೆದ್ದು ಟಾಕೀಸ್ ತುಂಬಿ ತುಳುಕುತ್ತಿದೆ ಎಂದು ಶೆಟ್ಟಿ ಸಿನಿಮಾಸ್ ನ ಮಾಲಕರಾದ ಸಂಗಪ್ಪ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು.
"ಸೂ ಫ್ರಮ್ ಸೋ " ಬಿಡುಗಡೆಗೊಂಡು ಮೂರನೇ ವಾರವಾದರೂ ಪ್ರೇಕ್ಷಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುಟುಂಬ ಸಮೇತ ನೋಡಬಹುದಾದ ಕಥಾ ವಸ್ತುವನ್ನು ಒಳಗೊಂಡ ಮನಮೆಚ್ಚಿದ ಸಿನಿಮಾಕ್ಕೆ ಪ್ರೇಕ್ಷಕರ ಭರ್ಜರಿ ಬೆಂಬಲ ದೊರಕಿದೆ. ಪ್ರೇಕ್ಷಕ ಸಿನಿಮಾ ನೋಡುತ್ತಿರುವುದು ಮನರಂಜನೆ ಮತ್ತು ಉತ್ತಮ ಕಂಟೆಂಟ್ ಹಾಗೂ ನಿರೂಪಣೆ ಎಂಬುದನ್ನು ಈ ಸಿನಿಮ ತೋರಿಸಿಕೊಟ್ಟಿದೆ ಅದಕ್ಕಾಗಿ ಜನದಟ್ಟಣೆ ಹೆಚ್ಚಾಗುತ್ತಿರುವುದರಿಂದ ಶೆಟ್ಟಿ ಸಿನಿಮಾಸ್ ನಲ್ಲಿ ದಿನಕ್ಕೆ 10 ಪ್ರದರ್ಶನಗಳನ್ನು ನೀಡಲಾಗುತ್ತಿದೆ ಎಂದು ಸಂಗಪ್ಪ ಶೆಟ್ಟಿ ತಿಳಿಸಿದರು.
ಒಂದು ಸಿನಿಮಾದ ಯಶಸ್ಸು, ಕೇವಲ ಬಜೆಟ್ ಸ್ಟಾರ್ ನಟರು ಅಲ್ಲ ಎಂಬುದನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರು ಸಾಬೀತುಪಡಿಸಿದ್ದಾರೆ. ಈ ಸಿನಿಮಾ ಈ ಮಣ್ಣಿನ ಕಥೆಯನ್ನು ಹೊಂದಿ ಪ್ರೇಕ್ಷಕನ ಹೃದಯಕ್ಕೆ ಮುಟ್ಟುವಂತೆ ಚಿತ್ರಿಸಲಾಗಿದೆ. ಭರ್ಜರಿ ಸೆಟ್ ನಾಲ್ಕು ಫೈಟ್ ಭರ್ಜರಿ ಹೀರೋ ಪಂಚಿಂಗ್ ಡೈಲಾಗ್ ಗಳಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದ ಪ್ರೇಕ್ಷಕ ಇಂದು ಹೊಸ ಬಗೆಯ ಜೀವನಕ್ಕೆ ಹತ್ತಿರವಾದ ಯಾವುದೇ ಮಸಾಲೆಗಳಲ್ಲಿದ ಗಟ್ಟಿ ಕತೆಯನ್ನು ಒಳಗೊಂಡ ಚಿತ್ರ ಕಮರ್ಷಿಯಲ್ ಆಗಿ ಸಕ್ಸಸ್ ಆಗಬಹುದು ಎಂಬುದನ್ನು ರಾಜ್ ಬಿ ಶೆಟ್ಟಿ ತಂಡ ತೋರಿಸಿಕೊಟ್ಟಿರುವುದರಿಂದ ಈ ಸಿನಿಮಾಕ್ಕೆ ಜನಪ್ರಿಯತೆ ಸಿಕ್ಕಿದೆ. ನಾಲ್ಕು ಸಾಲಿನ ಪುಷ್ಪರಾಜ್ ಬೊಳ್ಳಾರ್ ಅದ್ಭುತ ಅಭಿನಯದ "ಬಂದರು ಬಂದರು ಭಾವ ಬಂದರು"ಹಾಡಂತೂ ಆ ಬಾಲ ವೃದ್ಧರಾದಿಯಾಗಿ ಎಲ್ಲರ ಬಾಯಲ್ಲಿ ಗುನುಗುಣಿಸುತ್ತಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ . ಜೆ.ಪಿ ತೂಮಿನಾಡು ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಸಂಪೂರ್ಣ ಹೊಸಬರನ್ನು ಹಾಕಲಾಗಿದೆ. ಚಿತ್ರದಲ್ಲಿ ಶನಿಲ್ ಗೌತಮ್ ,ಜೆ ಪಿ ತೂಮಿನಾಡು , ರಾಜ್ ಬಿ ಶೆಟ್ಟಿ, ಪುಷ್ಪರಾಜ್
ಬೊಳ್ಳಾರ್, ಪ್ರಕಾಶ್ ತೂಮಿನಾಡು, ಸಂಧ್ಯಾ ಅರಕೆರೆ ಪೂರ್ಣಿಮಾ ಸುರೇಶ್ ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಯತೀಶ್ ಬೈಕಂಪಾಡಿ ಇವರ ಮನಮುಟ್ಟುವ ಅಭಿನಯದಿಂದ ಚಿತ್ರ ರಸಿಕರನ್ನು ಮುಟ್ಟಿದೆ. ಸಿನಿಮಾವು ಆರಂಭದಿಂದ ಕೊನೆಯವರೆಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ.ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಗುರೂಜಿಯಾಗಿ ನೀಡಿದ ಮನೋಜ್ಞ ಅಭಿನಯವು ಚಿತ್ರದ ಗೆಲುವಿನ ಪ್ರಮುಖ ಅಂಶ. ಕನ್ನಡ ಸಿನಿಮಾಕ್ಕೆ ಪ್ರೇಕ್ಷಕರಿಲ್ಲ ಮತ್ತು ಸಿನಿಮಾ ಮಂದಿರಗಳಿಗೆ ಹೆಜ್ಜೆ ಹಾಕುತ್ತಿಲ್ಲ ಎಂಬ ಅಪವಾದವನ್ನು ಈ ಸಿನಿಮಾ ದೂರ ಮಾಡಿದೆ. ಕಾಂತಾರದ ನಂತರ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದ ಚಿತ್ರ ಇದಾಗಿದೆ ಎಂದು ಸಂಗಪ್ಪ ಶೆಟ್ಟಿ ಖುಷಿಯನ್ನು ವ್ಯಕ್ತಪಡಿಸಿದರು. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವ ಯುವ ಕಲಾ ಪ್ರತಿಭೆಗಳು ಇವತ್ತು ಪ್ರೇಕ್ಷಕನ ಮನದಂಗಿತವನ್ನು ಅರಿತು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವುದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಕಂಟೆಂಟ್ ಸಿನಿಮಾಗಳ ಕಾಲ ಎಂಬುದನ್ನು ಮತ್ತೊಮ್ಮೆ ಪ್ರೇಕ್ಷಕ ಸಾಬೀತುಪಡಿಸಿರುವುದು "ಸು ಫ್ರಮ್ ಸೋ"ಚಿತ್ರದ ಮೂಲಕ. ಕಲಬುರಗಿಯಲ್ಲಿ ಪ್ರೇಕ್ಷಕರು ಹೆಚ್ಚಿನ ಒಲವು ಸಿನಿಮಾಕ್ಕೆ ವ್ಯಕ್ತಪಡಿಸಿರುವುದರಿಂದ ಬೆಳಗ್ಗೆ 10:30 ಮಧ್ಯಾಹ್ನ 12.00,1:30, 3.00, 4.15, 6.00,7. 30,9.00 ಹಾಗೂ 10.15ಕ್ಕೆ ಪ್ರದರ್ಶನ ನೀಡಲಾಗುತ್ತಿದ್ದು ಇದು ದಾಖಲೆಯಾಗಿದೆ. ಒಂದು ಉತ್ತಮ ಗುಣಮಟ್ಟದ ಚಿತ್ರವನ್ನು ಗೆಲ್ಲಿಸುವುದು ಪ್ರೇಕ್ಷಕ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಿನಿಮಾ ನೀಡುವ ಸಂದೇಶಕ್ಕಿಂತಲೂ ಸಿನಿಮಾ ರಂಗಕ್ಕೆ ಪ್ರೇಕ್ಷಕ ನೀಡಿದ ಮಹತ್ವದ ಸಂದೇಶ ಇದಾಗಿದೆ ಎಂದು ಸಂಗಪ್ಪ ಶೆಟ್ಟಿ ವಿಶ್ಲೇಷಿಸಿದ್ದಾರೆ.