ರಂಗಸಂತ ಎಲ್.ಬಿ.ಕೆ. ಆಲ್ದಾಳ ಟ್ರಸ್ಟ್‌ ಅಸ್ತಿತ್ವಕ್ಕೆ

ರಂಗಸಂತ ಎಲ್.ಬಿ.ಕೆ. ಆಲ್ದಾಳ ಟ್ರಸ್ಟ್‌ ಅಸ್ತಿತ್ವಕ್ಕೆ

ರಂಗಸಂತ ಎಲ್.ಬಿ.ಕೆ. ಆಲ್ದಾಳ ಟ್ರಸ್ಟ್‌ ಅಸ್ತಿತ್ವಕ್ಕೆ

ಕಲಬುರಗಿ : ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಕವಿಗಳ ಟ್ರಸ್ಟ್ ,ಹಿರಿಯ ರಂಗ ಕಲಾವಿದ ಸೇಡಂನ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟ್ ಉಪಾಧ್ಯಕ್ಷ ಎಲ್.ಬಿ.ಶೇಕ್ ಮಾಸ್ಟರ್ ತಿಳಿಸಿದರು.

ಜು.7 ರಂದು ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ ಧ್ಯೇಯೋದ್ದೇಶಗಳನ್ನು ಅವರು ವಿವರಿಸಿದರು.

ಆಲ್ದಾಳ ಕವಿಗಳ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಮೂಲಕ ಎಲ್.ಬಿ.ಕೆ.ಆಲ್ದಾಳ ಅವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಸ್ಮರಣೀಯವಾಗಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು, ಆಲ್ದಾಳ ರಚಿಸಿದ ಸಮಗ್ರ ನಾಟಕಗಳ ಸಂಪುಟ ಹೊರತರುವುದು, ಆಲ್ದಾಳ ಸ್ಮರಣಾರ್ಥ ಗ್ರಾಮೀಣ ರಂಗಭೂಮಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವುದು. ವೃತ್ತಿ ರಂಗಭೂಮಿ ಶೈಲಿಯ ಗ್ರಾಮೀಣ ನಾಟಕಗಳ ಕುರಿತು ವಿಚಾರ ಸಂಕಿರಣ ನಡೆಸುವುದು ಮೊದಲಾದ ಚಟುವಟಿಕೆಗಳನ್ನು ಮಾಡುವ ಉದ್ದೇಶದಿಂದ ಎಲ್.ಬಿ.ಕೆ.ಆಲ್ದಾಳ ಟ್ರಸ್ಟ್‌ ರಚಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿ, ಮುಂಬರುವ ದಿನಗಳಲ್ಲಿ ಟ್ರಸ್ಟ್ ಉದ್ಘಾಟನೆ, ಆಲ್ದಾಳ ರಚಿಸಿದ ನಾಟಕದ ಬಿಡುಗಡೆ, ಆಲ್ದಾಳ ರಚಿಸಿದ ನಾಟಕದ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದರು.

ಸಭೆಗೆ ಮುಖ್ಯ ಆಹ್ವಾನಿತರಾಗಿದ್ದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಬಸವರಾಜ ಹೂಗಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಶ್ರಮಿಸಿದ ಯಾವುದೇ ರಂಗ ಸಾಧಕರ ಗೌರವಾರ್ಥ ಟ್ರಸ್ಟ್ ಅಥವಾ ಪ್ರತಿಷ್ಠಾನ ಇರಲಿಲ್ಲ. ಇದೇ ಮೊದಲ ಬಾರಿಗೆ ಟ್ರಸ್ಟ್ ಅಸ್ತಿತ್ವಕ್ಕೆ ತಂದಿದ್ದು ಒಳ್ಳೆಯ ಬೆಳವಣಿಗೆ. ಕ್ರಮೇಣ ಸರ್ಕಾರದಿಂದಲೇ ಟ್ರಸ್ಟ್ ರಚಿಸಲು ಮನವಿ ನೀಡಿದರೆ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿ, ಟ್ರಸ್ಟ್ ಪದಾಧಿಕಾರಿಗಳಿಗೆ ಸನ್ಮಾನಿಸಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಂಕರ ಜಿ. ಹಿಪ್ಪರಗಿ ಸ್ವಾಗತಿಸಿದರು.

ಕೋಶಾಧ್ಯಕ್ಷ ಸೂರ್ಯಕಾಂತ ಹಂಗನಳ್ಳಿ, ಸಹಕಾರ್ಯದರ್ಶಿ ಬಿ.ಎಚ್.ನಿರಗುಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸುಜಾತಾ ಜಂಗಮಶೆಟ್ಟಿ, ಜೇವರ್ಗಿ ರಾಜಣ್ಣ, ಶ್ರೀಧರ ಹೆಗಡೆ, ಸೋಮಶೇಖರ ಪಾಟೀಲ್, ಚಂದ್ರಶೇಖರ ಕರ್ಜಗಿ, ಪ್ರಭಾಕರ ಜೋಶಿ, ರವಿ ಹಿರೇಮಠ, ಶರೀಫ್ ಆಲ್ದಾಳ, ಶಿವರಾಜ ಪಾಟೀಲ ಉಪಸ್ಥಿತರಿದ್ದರು.