ಮೆರೆಮಿಂಡಯ್ಯ ಶರಣ

ಬೋಧೆಯ ಹೇಳಿ ಉಂಬವಂಗೆ
ಆಗುಚೇಗೆಯ ಮಾತೇಕೆ ?
ಅವ ಮಾತ ಕಲಿತ ಮಾತುಗನಂತೆ,
ಆಟವ ಕಲಿತ ಕೋಲಾಟಿಕನಂತೆ.
ಛೀ ಅದೇತರ ಅರಿವು ? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ
*ಮೆರೆಮಿಂಡಯ್ಯ
*ವಚನ ಅನುಸಂಧಾನ*
ಶರಣರು; ಈ ಕಾಯ(ಶರೀರ) ಮತ್ತು ಕಾಯಕ ಇವುಗಳಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿದ್ದಾರೆ. ಇವು ಒಂದಕ್ಕೊಂದು ಪೂರಕವಾದ ತತ್ವಗಳಾಗಿವೆ
ಕಾಯವಿಲ್ಲದೆ ಕಾಯಕವಿಲ್ಲ. ಕಾಯಕವಿಲ್ಲದಂಥ ಕಾಯವಿಲ್ಲ. ಹಾಗಾಗಿ ಇವುಗಳನ್ನು ಸರಿಯಾಗಿ ತಿಳಿದು ಅರ್ಥೈಸಿಕೊಂಡು ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿ ನೋಡ ಬೇಕಾಗುತ್ತದೆ. ಕಾಯ(ಶರೀರ)ದ ಬಗ್ಗೆ ಹಾಗೂ ಕಾಯಕದ ಬಗ್ಗೆ ಶರಣರು ತಮ್ಮ ವಚನಗಳಲ್ಲಿ ಬಹಳಷ್ಟನ್ನು ತಿಳಿಸಿಕೊಟ್ಟಿದ್ದಾರೆ. ಅಲ್ಲದೆ ಅದರ ಸ್ವರೂಪದ ಕುರಿತು ಹಾಗೂ ಕಾರ್ಯ ವಿಧಾನದ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ಹೇಳಿದ್ದಾರೆ. ಕಾಯಕವೇ ಕೈಲಾಸ ಅಥವಾ ಕಾಯವೇ ಕೈಲಾಸ ಎನ್ನುವ ಈ ನುಡಿಗಟ್ಟುಗಳಂತೂ ಕಾಯಕ ಮತ್ತು ಕಾಯದ ಘನತೆಯನ್ನು ಎತ್ತಿ ತೋರಿಸುತ್ತವೆ. ಈ ಶರಣರ ನುಡಿ ಬೆಳಕಿನಲ್ಲಿ ಪ್ರಸ್ತುತ ಈ ಮೇಲಿನ ಮೆರೆಮಿಂಡಯ್ಯ ಶರಣರ ಈ ವಚನ ಅರ್ಥೈಸಿ ಕೊಳ್ಳಲು ಇಲ್ಲಿ ಅನುಸಂಧಾನವನ್ನ ಮಾಡುತ್ತಲೇ ಕಾಣಬಹುದಾದ ಒಳನೋಟಗಳ ನೋಡೋಣ.
#ಬೋಧೆಯ ಹೇಳಿ ಉಂಬವಂಗೆ
ಆಗುಚೇಗೆಯ #ಮಾತೇಕೆ ?
ಇಲ್ಲಿ ದುಡಿಯಲಾರದೆ ಇನ್ನೊಬ್ಬರಿಗೆ ಬೋಧನೆ ಮಾತ್ರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವನಿಗೆ
ಅಡುಗೆ ಮಾಡುವ ಪ್ರಕ್ರಿಯೆಯ ಆಗು ಹೋಗು ತೊಂದರೆ ತಾಪತ್ರಯಗಳ ಗೊಡವೆಯಾದರೂ ಯಾಕೆ ಬೇಕು? ಎಂದು ಕೇಳಿದ್ದಾರೆ ವಚನಕಾರ ಶರಣ ಮೆರೆಮಿಂಡಯ್ಯನರು.ಇದರ ತಾತ್ಪರ್ಯ ವೆಂದರೆ; ಮತ್ತೊಬ್ಬರಿಗೆ ಉಪದೇಶವನ್ನ ಧಾರಾಳ
ಮಾಡಬಹುದು. ಆದರೆ ಉಣ್ಣುವ ಊಟವನ್ನು ತಯಾರಿಸುವಲ್ಲಿ; ಸಾಮಗ್ರಿಗಳನ್ನ ತರುವುದಲ್ಲದೆ ಅದನ್ನು ತಯಾರಿಸುವಲ್ಲಿ ದುಡಿಮೆಯ ಶ್ರಮವು ಮತ್ತು ಪರಿಶ್ರಮವು ಬೇಕಾಗುತ್ತದೆ.ಇದ್ಯಾವುದೂ ಇಲ್ಲದ ಉಪದೇಶ ಹೇಳಿ ಹೊಟ್ಟೆತುಂಬಿಕೊಳ್ಳುವ
ವ್ಯಕ್ತಿಗೆ ಇದರ ಆಗುಹೋಗುಗಳ ಉಸಾಬರಿಯು ಯಾಕೆ!? ಅದನ್ನ ಮಾಡಲು ಅವನಿಗೆ ಯಾವುದೇ ನೈತಿಕತೆ ಇಲ್ಲ ಎನ್ನುವುದೇ ಈ ವಚನದಲ್ಲಿರುವ ಮುಖ್ಯ ಅಭಿಪ್ರಾಯ ಆಗಿದೆ.
*ಅವ ಮಾತ ಕಲಿತ ಮಾತುಗನಂತೆ,*
*ಆಟವ ಕಲಿತ #ಕೋಲಾಟಿಕನಂತೆ.*
ದುಡಿಯಲಾರದವನಿಗೆ ದುಡಿಮೆಯ ಕುರಿತಂತೆ ಮಾತನಾಡುವ ನೈತಿಕ ಹಕ್ಕೂ ಇರುವುದಿಲ್ಲ. ಆತ ಕೇವಲ ಮಾತುಗಳನ್ನು ಕಲಿತು ಮಾತನಾಡುವ ಭಾಷಣವೀರ ಮಾತ್ರ. ಮಾತನಾಡುವುದೊಂದು ಕಲೆ. ಅದೂ ಎಂಥಾ ಕಲೆಯಂದ್ರೆ ಕೋಲಾಟವನ್ನ ಕಲಿತ ಕೋಲಾಟಗಾರನು ಚಟ್ ಪಟ್ ಎನ್ನುವ ಸದ್ದನ್ನು ಮಾಡಿದಂತೆ ಎಂದು ಮೆರೆಮಿಂಡಯ್ಯ ಶರಣರು ಸುಂದರವಾದ ಉಪಮೇಯ ಒಂದರ ಮೂಲಕ ಬರೀ ಮಾತಿನ ಖಾಲಿ ಶಬ್ದದ ನಿಷ್ಫಲತೆ ಯನ್ನು ಇಲ್ಲಿ ಮನ ಮುಟ್ಟುವಂತೆ.
*#ಛೀ ಅದೇತರ ಅರಿವು ? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ #ದೂರ.*
ಹೀಗೆ ಸ್ವತಃ ದುಡಿದು ಉಣ್ಣದೇ ಖಾಲಿ ಕುಳಿತು ಉಣ್ಣುವ ಮತ್ತು ರಿಕಾಮಿ ಓಡಾಡಿಕೊಂಡಿರುವ ಆಸಾಮಿಯು ತಾನು ಇನ್ನೊಬ್ಬರಿಗೆ ಬೋಧೆಯ ಮಾತ್ರ ಮಾಡಿ ಕಾಯವ ದಂಡಿಸಿ ದುಡಿಯದೇ ಉಣ್ಣುವ ಇಂಥವರ ಅರಿವಾದ್ರೂ ಎಂಥಾದ್ದು!? ಎಂದು ಹೇಳುವ ಮೂಲಕ ಇಂಥಾದ್ದು ತಮ್ಮ ಇಷ್ಟಲಿಂಗವಾಗಿರುವ ಐಘಟದೂರ ರಾಮೇಶ್ವರ ಲಿಂಗಕ್ಕಂತೂ ಮೊದಲೇ ದೂರವು! ಎನ್ನುವರು. ಅಂದರೆ ಇಲ್ಲಿ ಉಣ್ಣಲು ಮಾತ್ರ ಬಾಯಿಯನ್ನು ಬಳಕೆ ಮಾಡಿ ಕೊಂಡು ಅನ್ಯರಿಗೆ ಬೋಧೆ ಮಾಡಿ ಬೆವರ ಶ್ರಮವಿಲ್ಲದೆ ಬರೀ ಮಾತಾಡಿ ಉಣ್ಣುವ ಅಣ್ಣಗಳ ಬಣ್ಣವನ್ನು ಮೆರೆಮಿಂಡಯ್ಯ ಶರಣ ಪ್ರಸ್ತುತ ಈ ವಚನದಲ್ಲಿ ಬಯಲು ಮಾಡಿದ್ದಾರೆ.
*#ಸಂಕ್ಷಿಪ್ತ #ಪರಿಚಯ*
ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ.
ತಮಿಳುನಾಡಿನ 63 ಪುರಾತನರಲ್ಲಿ ಒಬ್ಬನಾದ 'ಮೆರೆಮಿಂಡದೇವ' ಬೇರೆ, ಈ ಮೆರೆಮಿಂಡಯ್ಯ ಶರಣ ಬೇರೆ. ಇವರು ಅಪ್ಪ ಬಸವಾದಿ ಶರಣರ ಸಮಕಾಲೀನರು. 'ಐಘಟದೂರ ರಾಮೇಶ್ವರ ಲಿಂಗ' ಎನ್ನುವ ಅಂಕಿತದಲ್ಲಿ ಇವರು ರಚಿಸಿದ 110 ವಚನಗಳು ದೊರೆತಿವೆ. ಅಷ್ಟಾವರಣ, ಲಿಂಗಾಂಗಗಳ ಸಾಮರಸ್ಯ ಮೊದಲಾದ ತಾತ್ವಿಕ ವಿಷಯ ಮತ್ತು ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿತವಾಗಿವೆ. ಇವರು ಅನೇಕ ಶರಣರನ್ನು ಗೌರವದಿಂದ ಸ್ಮರಿಸಿದ್ದಾರೆ. ಯಾವುದೇ ಕಾಯಕವಿರಲಿ ಅದನ್ನ ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನು ಕೊಟ್ಟವರ ಪಶುಪತಿಯ ವಾಸ ಸ್ಥಾನ, ಅದು ಪ್ರತ್ಯಕ್ಷ ಪರ
ಮೇಶ್ವರ ಎಂದು ಇವರು ಕಾಯಕದ ಬಗ್ಗೆ ತುಂಬ ಗೌರವದಿಂದ ಮಾತನಾಡಿರುವರು. ಭಕ್ತನಲ್ಲಿ ಇರ ಬೇಕಾದ ಆರ್ತತೆ ಹಠಮಾರಿತನ ವಚನಗಳಲ್ಲೂ ಹೆಪ್ಪುಗಟ್ಟಿದೆ. ಗುರುವಾಗಿ ದೀಕ್ಷೆಯ ಅನುಗ್ರಹಿಸಿ ಆ ಭಕ್ತರ ಮನೆಯಲ್ಲಿ ಉಣ್ಣದೆ ಅಕ್ಕಿ ತುಪ್ಪಲವ ಪಡೆದು, ಪ್ರತ್ಯೇಕವಾಗಿ ಅಡುಗೆ ಮಾಡಿ ಉಣ್ಣುವ ಗುರುವನ್ನ ತೀವ್ರವಾಗಿ ಟೀಕಿಸಿರುವರು
*ಅಳಗುಂಡಿ ಅಂದಾನಯ್ಯ*