ಒಳಮೀಸಲಾತಿ ಜಾರಿಗೊಳಿಸಲು ಕಾಲಹರಣ ಮಾಡುತ್ತಿದೆ ಸರಕಾರ : ಆರೋಪ ಆ.1 ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅರೆಬತ್ತಲೆ ಪ್ರತಿಭಟನೆ

ಒಳಮೀಸಲಾತಿ ಜಾರಿಗೊಳಿಸಲು ಕಾಲಹರಣ ಮಾಡುತ್ತಿದೆ ಸರಕಾರ : ಆರೋಪ

ಆ.1 ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅರೆಬತ್ತಲೆ ಪ್ರತಿಭಟನೆ 

ಚಿಂಚೋಳಿ : 30 ವರ್ಷಗಳಿಂದ ಮಾದಿಗರ ಒಳಮೀಸಲಾತಿ ಜಾರಿಗಾಗಿ ನಿರಂತರ ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕದೇ ಇರುವುದು ತುಂಬ ದುಖಃದ ಸಂಗತಿ. ಸುಪ್ರೀಂ ಕೋರ್ಟ ರಾಜ್ಯ ಸರಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಲು ಅಧಿಕಾರ ನೀಡಿದೆ. ಆದರೆ ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ಜಾರಿ ಮಾಡಲು ಕಾಲಹರಣ ಮಾಡುತ್ತಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಗೋಪಾಲರಾವ ಕಟ್ಟಿಮನಿ ಅವರು ಆರೋಪಿಸಿದ್ದಾರೆ. 

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಸರ್ವೋಚ್ಚನ್ಯಾಯಲಯವು ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿದೆ. ಆದರೆ ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ಜಾರಿ ಮಾಡಲು ಹಿಂದೆಟ್ಟು ಹಾಕುತ್ತಿದೆ. ಒಳಮೀಸಲಾತಿಗಾಗಿ ನಾಗಮೋಹನದಾಸ ಸಮಿತಿ ರಚಿಸಲಾಗಿದರೂ ಜಾರಿಗೆ ಕ್ರಮವಹಿಸುತ್ತಿಲ್ಲ. ಹಾಗಾಗಿ ಮೀಸಲಾತಿಗೆ ದಶಕಗಳ ನಿರಂತರ ಹೋರಾಟ ಮಾಡುತ್ತಿದ್ದು, ಸುಪ್ರೀಂ ಕೋರ್ಟ ನೀಡಿದ ತೀರ್ಪಿಗೆ ತಲೆಬಾಗಿ ಸರಕಾರ ಆಗಷ್ಟ 10 ರೊಳಗಾಗಿ ಒಳ ಮೀಸಲಾತಿ ಜಾರಿಗೊಳಿಸದೇ ಇದ್ದಲ್ಲಿ ಸಮುದಾಯದ ನಾಯಕ ಎ.ನಾರಾಯಣಸ್ವಾಮಿ ಅವರು ತೀರ್ಮಾನಿಸಿ, ರಾಜ್ಯದ್ಯಾಂತ ಪ್ರವಾಸವನ್ನು ಕೈಗೊಂಡು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಗಷ್ಟ 1ರಂದು ಜಿಲ್ಲಾಧಿಕಾರಿಗಳ ಕಛೇರಿಗಳ ಮುಂದೆ ಅರೆಬತ್ತಲೆ ಪ್ರತಿಭಟನೆ ನಡೆಸಲು ನಿರ್ಧರಿಸಿದಂತೆ ಆಗಷ್ಟ 1 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಗತ್ ವೃತ್ತದಿಂದ ಸರದಾರ ವಲ್ಲಾಭಾಯಿ ಪಟೇಲ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅರೆಬತ್ತಲೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಮುದಾಯದ ಬುದ್ಧಿಜೀವಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಒಳಮೀಸಲಾತಿ ಜಾರಿಗಾಗಿ ನಿರಂತರ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಸಂಚಾಲಕ ಗೋಪಾಲ ಕಟ್ಟಿಮನಿ ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲು ಕೊಡಂಬಲ್, ವಿಜಯಕುಮಾರ ಕೊರಡಂಪಳ್ಳಿ, ಅಂಬರೀಶ ಭಕ್ತಂಪಳ್ಳಿ, ಮೋಹನ್ ದಂಡಿನ್, ಜನಾರ್ಧನ ಕರ್ಚಖೇಡ, ವಿರೇಶ ಮೇತ್ರಿ, ರವಿ ಗಡಿಲಿಂಗದಳ್ಳಿ, ಸುಭಾಶ ರುಸ್ತಂಪೂರ, ವಿಶಾಲ ಸುಗಂದಿ, ಜಾನ್ಸನ್ ದಂಡಿನ, ಕೆ.ನಾಗೇಶ್ವರಾವ ಅವರು ಇದ್ದರು.