ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರು” – ಕಾವೇರಿ ವಸತಿ ನಿಲಯದಲ್ಲಿ ಸ್ಪೂರ್ತಿದಾಯಕ ಕಾರ್ಯಕ್ರಮ

“ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರು” – ಕಾವೇರಿ ವಸತಿ ನಿಲಯದಲ್ಲಿ ಸ್ಪೂರ್ತಿದಾಯಕ ಕಾರ್ಯಕ್ರಮ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಾವೇರಿ ವಸತಿ ನಿಲಯ (ಕೋಡ್ 2090 ಮತ್ತು 2093)ದಲ್ಲಿ “ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರು” ಎಂಬ ಶೀರ್ಷಿಕೆಯಡಿಯಲ್ಲಿ ಶಕ್ತಿದಾಯಕ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸೋಮಶೇಖರ ವಾಯ್, ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಶ್ರೀ ಶರಣಬಸಪ್ಪ ಪಾಟೀಲ್, ಮುಖ್ಯ ಭಾಷಣಕಾರರಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಕೆ.ಎಂ. ವಿಶ್ವನಾಥ್ ಮರತೂರ ಹಾಗೂ ಅತಿಥಿಗಳಾಗಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಡಾ. ಗೌತಮ್ ಕರಿಕಲ್, ವಸತಿ ನಿಲಯದ ಅಧ್ಯಕ್ಷ ಸಂತೋಷಕುಮಾರ ಎಸ್.ಪಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಅಭಿವೃದ್ಧಿ, ಹಕ್ಕು ಮತ್ತು ಕರ್ತವ್ಯದ ಮೆಚ್ಚುಗೆ:
ಕಾರ್ಯಕ್ರಮವನ್ನು ಉದ್ದೇಶಿಸಿ ಉಪನಿರ್ದೇಶಕರಾದ ಶ್ರೀ ಸೋಮಶೇಖರ ವಾಯ್ ಅವರು, “ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಗುರಿಗಳನ್ನು ಸಾಧಿಸಬೇಕು” ಎಂದು ಸಲಹೆ ನೀಡಿದರು.
ತಾಲ್ಲೂಕು ಕಲ್ಯಾಣಾಧಿಕಾರಿ ಶರಣಬಸಪ್ಪ ಪಾಟೀಲ್ ಅವರು “ಈ ರೀತಿ ಸ್ವಯಂಪ್ರೇರಿತವಾಗಿ ವಿದ್ಯಾರ್ಥಿಗಳು ಕಾರ್ಯಕ್ರಮ ಹಮ್ಮಿಕೊಂಡಿರುವುದು ಮೆಚ್ಚುಗೆಯ ಸಂಗತಿ. ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ” ಎಂದರು.
ಮೂಲ ಭಾಷಣಕಾರ ಶ್ರೀ ಕೆ.ಎಂ. ವಿಶ್ವನಾಥ್ ಮರತೂರ ಮಾತನಾಡುತ್ತಾ, “ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರು ಎಂಬ ನುಡಿಗೆ ಅನುಗುಣವಾಗಿ, ವಿದ್ಯಾರ್ಥಿಗಳು ಸ್ವಪ್ನಗಳನ್ನು ಸತ್ಯಗೊಳಿಸಲು ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಸಂದೇಶ ನೀಡಿದರು.
ಹಕ್ಕುಗಳ ಜೊತೆ ಕರ್ತವ್ಯಗಳು ಕೂಡಾ ಮುಖ್ಯ – ವಸತಿ ನಿಲಯದ ಅಧ್ಯಕ್ಷ:
ವಸತಿ ನಿಲಯದ ಅಧ್ಯಕ್ಷ ಸಂತೋಷ ಕುಮಾರ್ ಎಸ್.ಪಿ ಅವರು, “ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಪ್ರಶ್ನಿಸುವ ಹಾಗೆಯೇ, ತಮ್ಮ ಕರ್ತವ್ಯಗಳನ್ನೂ ಗೌರವದಿಂದ ನಿರ್ವಹಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.