ಬಹಮನಿ ಸುಲ್ತಾನರ ಕಾಲದ ಚಿತ್ರಕಲೆಯ ಇತಿಹಾಸವು ಮಧ್ಯಕಾಲೀನ ಸಂದರ್ಭದ ಶ್ರೀಮಂತ ಅಧ್ಯಾಯ - ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಅಭಿಮತ

ಬಹಮನಿ ಸುಲ್ತಾನರ ಕಾಲದ ಚಿತ್ರಕಲೆಯ ಇತಿಹಾಸವು ಮಧ್ಯಕಾಲೀನ ಸಂದರ್ಭದ ಶ್ರೀಮಂತ ಅಧ್ಯಾಯ - ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಅಭಿಮತ
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಇಲ್ಲಿ ಕಲಬುರಗಿಯ ವಿಭಾಗೀಯ ಪತ್ರಾಗಾರ ಕಛೇರಿಯ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಅವರು ಬಹಮನಿ ಸಾಮ್ರಾಜ್ಯ: ಚಿತ್ರಕಲೆ ಕುರಿತು ಇಂದು ಉಪನ್ಯಾಸ ನೀಡಿದರು.
ಮಧ್ಯಕಾಲೀನ ಸಂದರ್ಭದಲ್ಲಿ ದಖನ್ನಿನಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಬಹಮನಿ ಸಾಮ್ರಾಜ್ಯವೂ ಒಂದು. ಇದು ತನ್ನ ಮಿಲಿಟರಿ ಮತ್ತು ರಾಜಕೀಯ ಸಾಧನೆಗಳಿಗೆ ಮಾತ್ರ ಸೀಮಿತಗೊಳ್ಳದೇ ಕಲೆ, ವಾಸ್ತುಶಿಲ್ಪ ಮತ್ತು ಚಿತ್ರಕಲೆಯ ಪೋಷಣೆಗೂ ಹೆಸರಾಗಿತ್ತು.
ಆರಂಭದಲ್ಲಿ ವಾಸ್ತುಶಿಲ್ಪಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದ ಬಹಮನಿ ಸುಲ್ತಾನರು ಮುಹಮ್ಮದ ಷಾ-2 (13781397) ಕಾಲದಲ್ಲಿ ಚಿತ್ರಕಲೆಗೂ ಪ್ರಾಶಸ್ತ್ಯ ನೀಡುತ್ತ ಬಂದರು. ಪರ್ಷಿಯಾ ಮತ್ತಿತರ ಭಾಗಗಳಿಂದ, ಹಲವು ಕಲೆಗಳಲ್ಲಿ ನಿಮಣರೆನಿಸಿದ ವಿದ್ವಾಂಸರನ್ನು ಬರಮಾಡಿಕೊಳ್ಳಲಾಯಿತು. ತನ್ಮೂಲಕ ಬಹಮನಿ ರಾಜ್ಯ ಕಲೆ, ಸಂಸ್ಕೃತಿಗಳ ಹೊಸ ಮನ್ವಂತರಕ್ಕೆ ಕಾರಣವಾಯಿತು. ಈ ರಾಜ್ಯದ ಆಡಳಿತ ಅಲಾವುದ್ದೀನ್ ಹಸನ್ ಗಂಗು ಬಹಮನಿ'ಯಿಂದ ಪ್ರಾರಂಭವಾಯಿತಾದರೂ ಶಮಶುದ್ದೀನ್ ಮುಹಮ್ಮದ ಷಾ-3 (1463-1482) ಕಾಲದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಇದರಲ್ಲಿ ಮಹಮುದ ಗವಾನ್ ಪಾತ್ರವನ್ನು ಮರೆಯಲಾಗದು ಎಂಬುದನ್ನು ಪ್ರೊ. ಎಚ್.ಕೆ. ಶೇರವಾನಿ ಅವರು ತಮ್ಮ ಕೃತಿಯಲ್ಲಿ (Haroon Khan Sherwani, Mahmud Gawan, the Great Bahmani Wazir (Allahabad, 1942), 73.) ಉಲ್ಲೇಖಿಸುತ್ತಾರೆ ಎಂದರು.
ಬಹಮನಿ ಸುಲ್ತಾನರು ಸಕಲ ಕಲೆಗಳ ಮಹಾನ್ ಪೋಷಕರಾಗಿದ್ದಂತೆ ಚಿತ್ರ, ಶಿಲ್ಪ ಹಾಗೂ ವಾಸ್ತುಶಿಲ್ಪ ಕಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆಂದ ಅವರು, ತಮ್ಮ ಉಪನ್ಯಾಸದ ಮೂಲಕ ಆ ಕಾಲದ ಚಿತ್ರಕಲೆಯ (ಸ್ಟುಕ್ಕೋ/ಫೆಸ್ಕೋ) ಮೇಲೆ ಕೇಂದ್ರೀಕರಿಸಿ ಮಾತನಾಡಿದರು. ಗುಲಬರ್ಗಾ ಮತ್ತು ಬೀದರ್ ಭಾಗದ ಹಲವೆಡೆ ಇವರ ಕಾಲದ ಭಿತ್ತಿ ಚಿತ್ರಗಳನ್ನು ನೋಡಬಹುದು ಎಂದರು.
ಬಹಮನಿ ಸುಲ್ತಾನರ ಕಾಲದಲ್ಲಿ ಭಿತ್ತಿಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ರಚಿಸಲ್ಪಟ್ಟಿದ್ದನ್ನು ನಾವು ಗಮಿಸಿದ್ದೇವೆ. ಆದರೆ ಬಿಡಿ ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಡಾ. ಎಸ್.ಕೆ. ಅರುಣಿ ಅವರು ತಮ್ಮ ದಖನಿ ಚಿತ್ರಕಲೆಯಲ್ಲಿ ಈ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರಾದರೂ ಅದು ಬಹಮನಿ ಕಾಲದ್ದೇ ಎನ್ನುವ ತೀರ್ಮಾನಕ್ಕೆ ಇನ್ನೂ ಬರಲಾಗಿಲ್ಲ. ಜರ್ಮನ್ ವಿದ್ವಾಂಸ ಹೆರ್ಮಾನ್ ಗೊಯೆಟ್ಸ್ ಅವರು ಪ್ರಾಚೀನ ಹಸ್ತಪ್ರತಿ ಚಿತ್ರಗಳನ್ನು ಪರಿಶೀಲಿಸುವ ವೇಳೆ 'ಲೈಲಾ ಮ' ಮತ್ತು 'ಶಿರಿನ್-ಪರ್ವಿನ್' ದೃಶ್ಯಗಳ ಎರಡು ಕಿರು ಚಿತ್ರಗಳನ್ನು ಕಲೆ ಹಾಕಿ, ಚಿತ್ರಗಳಲ್ಲಿನ ಆಕೃತಿಗಳ ಲಕ್ಷಣಗಳು ಮತ್ತು ಶೈಲಿಯ ಆಧಾರದ ಮೇಲೆ, ಈ ಕಿರು ಚಿತ್ರಗಳು ಬಹಮನಿ ಸುಲ್ತಾನರ ಕಾಲದಲ್ಲಿ ರಚನೆ ಆಗಿರಬೇಕೆಂದು ಊಹಿಸಿರುವ ಸಂಗತಿಯನ್ನು ಅರುಣಿಯವರು ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆಂದ ಅವರು, ವಾಸ್ತವದಲ್ಲಿ ಬಿಡಿ ಚಿತ್ರಗಳ (ಚಿಕಣಿ ಚಿತ್ರ) ಇತಿಹಾಸ ವಿಜಯನಗರೋತ್ತರ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿ ನಡೆದಂತೆ ತೋರುತ್ತದೆ. ಹಾಗೆಂದ ಮಾತ್ರಕ್ಕೆ ಅದಕ್ಕೂ ಹಿಂದೆ ಬಿಡಿ ಚಿತ್ರಗಳ ರಚನೆ ಆಗಿರಲೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರುವುದು ಕಷ್ಟ ಎಂದರು. ಜೈನ ಹಸ್ತಪ್ರತಿಗಳು (ಧವಳಯತ್ರಯಗಳು) ಒಳಗೊಂಡಂತೆ ಮಧ್ಯಪ್ರದೇಶ ಮತ್ತಿತರ ಪ್ರಾಂತಗಳಲ್ಲಿ ಬಿಡಿ ಚಿತ್ರಗಳ ರಚನೆ ಆಗಿರುವ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.
ಚಿತ್ರಕಲೆಯು ಆ ದಿನಗಳಲ್ಲಿ ಕೇವಲ ಕಲೆಯಾಗಿ ಕಾಣಿಸಲಿಲ್ಲ. ಅದು ಮಾನವನ ಸಹಜ ಪ್ರವೃತ್ತಿ ಅಥವಾ ಹವ್ಯಾಸವೂ ಆಗಿತ್ತು. ಹಾಗಾಗಿ ಆಯಾ ಕಾಲಘಟ್ಟದಲ್ಲಿ ಚಿತ್ರರಚನೆ ಮಾಡಿರುವ ಸಾಧ್ಯತೆಗಳು ತುಂಬಾ ಹೆಚ್ಚಿವೆ. ಆದರೆ, ಮತಪಂಥಗಳಾಧಾರಿತ ಚಿತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಸಂಗತಿವುಳ್ಳ ಚಿತ್ರಗಳನ್ನು ಉಳಿಸಿಕೊಳ್ಳುವ ಕೆಲಸ ಹೆಚ್ಚು ನಡೆದಿರಲಿಕ್ಕಿಲ್ಲ. ಉದಾಹರಣೆಗೆ: ಗೀಸು ದರಜ್ ಅವರ ಧಾರ್ಮಿಕ ವಿಷಯಗಳ ಲ್ಯಾಪಿಡ್ ಸ್ಕೆಚೆಸ್ ಮಾಡಲಾಗಿತ್ತೆಂದು ಜಾರ್ಜ್ ಮಿಶಲ್ ಅಂಡ ರಿಚರ್ಡ್ ಈಟ್ರನ್ ಅವರ ಫಿರೋಜಾಬಾದ: ಎ ಸಿಟಿ ಆಫ್ ಪ್ಯಾಲೆಸ್ ದ ಡೆಕ್ಕನ್ ಕೃತಿಯ ಒಂದೆಡೆ ಉಲ್ಲೇಖಿಸಲಾಗಿರುವ ಸಂಗತಿ The New Cambridge History of India ಕೃತಿಯ ಪುಟ-51ರಲ್ಲಿದೆ. ಬಹಮನಿ ಕಾಲದ ಹಸ್ತಪ್ರತಿಗಳು ಅಲಿಘಡ್ ರಾಜ್ ಮ್ಯೂಸಿಯಂನಲ್ಲಿ ಲಭ್ಯ ಇವೆ ಎನ್ನಲಾಗಿದೆ ಎಂದು ಮಾಹಿತಿ ನೀಡಿದರು.
ಅಮೆರಿಕಾದ ಫಿಲಡೆಲ್ಸಿಯಾ ಮ್ಯೂಸಿಯಂ ಆಫ್ ಆರ್ಟ್ಸ್‌ನಲ್ಲಿ ಸಂಗ್ರಹಿಸಲ್ಪಟ್ಟ ಗುಲ್ಸನ್ ಇ ಇಶ್‌ಕ ಎಂಬ ಚಿತ್ರಿತ ಹಸ್ತಪ್ರತಿಯನ್ನು ಶೋಧನೆಗೊಳಪಡಿಸಿದೆ. ಈ ಹಸ್ತಪ್ರತಿಯಲ್ಲಿ ಬಹಮನಿ ಕಾಲಘಟ್ಟದ ಘಟನಾವಳಿಗಳಿಗೆ ಸಂಬಂಧಿಸಿದ ಚಿತ್ರಗಳಿವೆ ಎನ್ನಲಾಗಿದೆ. ಅದರಲ್ಲಿ ಒಂದು ಕಿರುಚಿತ್ರವು ಖಾಜಾ ಬಂದೇನವಾಜ್ ಗೇಸುದರಾಜ್ ಅವರಿಗೆ ಸಂಬಂಧಿಸಿದೆ. ಮಿಯನ್ ನುಸ್ರತಿ ಎಂಬ ಬಿಜಾಪುರ ಕವಿಯು ಕ್ರಿ.ಶ. 1657-58ರ ಅವಧಿಯಲ್ಲಿ ರಚಿಸಿದನೆನ್ನಲಾಗುವ ಈ ಕಾವ್ಯಮಯ ಹಸ್ತಪ್ರತಿಯ ಚಿತ್ರವೊಂದರ ಎಡಬದಿಯಲ್ಲಿ ಪರ್ಷಿಯನ್ ಭಾಷೆಯ ನಸ್ ಲಿಪಿಯಲ್ಲಿ 'ಸಯ್ಯದ ಮಹಮ್ಮದ್ ಗೇಸುದರಾಜ್” ಎಂದು ಬರೆಯಲಾಗಿದೆ. ಚಿತ್ರದ ಶೈಲಿ ಮತ್ತು ಆಕೃತಿಯ ಗುಣಲಕ್ಷಣದ ಆಧಾರದ ಮೇಲೆ ಇದು ಮುಘಲ್ ಕಾಲದಲ್ಲಿ ಬರೆದಿರುವ ಸಾಧ್ಯತೆಗಳಿವೆ. ಪ್ರಸ್ತುತ ಕಿರುಚಿತ್ರ ಬಹಮನಿ ಕಾಲಘಟ್ಟದ ಘಟನಾವಳಿಗೆ ಸಂಬಧಿಸಿದೆಯಾದರೂ ಬಹಮನಿ ಕಾಲದಲ್ಲೇ ಬರೆದಿರುವ ಚಿತ್ರವಲ್ಲ ಎಂದು ಖ್ಯಾತ ಇಸಿಹಾಸಕಾರ ಜಗದೀಶ್ ಮಿತ್ತಲ್ ಅಭಿಪ್ರಾಯ ಪಡುತ್ತಾರೆ.
ಮಿತ್ತಲ್ ಅವರೇ ಶೋಧಿಸಿದ ಇನ್ನೊಂದು ಕಿರುಚಿತ್ರ ಅಹ್ಮದ ಷಾ ವಲಿ'ಯದ್ದು. ಇದೂ ಸಹ ಬಹಮನಿ ಅರಸೊತ್ತಿಗೆ ನಂತರದ್ದು. ಚಿತ್ರದ ಬಲಬದಿಯ ಮೇಲ್ಬಾಗದಲ್ಲಿ ಪರ್ಷಿಯನ್ ಭಾಷೆಯಲ್ಲಿ ಸುಲ್ತಾನನ ಹೆಸರು ಬರೆಯಲಾಗಿದೆ. ಬಹಮನಿಯಿಂದ ಸ್ಪೂರ್ತಿಗೊಂಡ ಬಿಜಾಪುರ, ಗೋಲ್ಗೊಂಡಾ ಕಲಾವಿದರು ಸಂಸ್ಥಾನದ ಆರಂಭದ ದಿನಗಳಲ್ಲಿ ಬಹಮನಿ ಕಾಲಘಟ್ಟವನ್ನಾಧರಿತ ಸಾಕಷ್ಟು ಸಂಖ್ಯೆಯ ಚಿತ್ರಗಳನ್ನು ರಚಿಸಿದ್ದು, ಇದು ಅದೇ ಮಾದರಿಯದು ಎಂದೂ ಮಿತ್ತಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ (2004 ಜುಲೈ 12ರಂದು ಹೈದರಾಬಾದ್‌ನ ಗಗನ ಮಹಲ್ ರಸ್ತೆಯಲ್ಲಿರುವ ಡಾ. ಜಗದೀಶ್ ಅಂಡ್ ಕಮಲ್ ಮಿತ್ತಲ್ ಮ್ಯೂಸಿಯಂ ಆಫ್ ಇಂಡಿಯನ್ ಆರ್ಟ್; ಇಲ್ಲಿಗೆ ಭೇಟಿ ನೀಡಿದ್ದೆ. ಕೇವಲ 5 ನಿಮಿಷ ಮಾತ್ರ ನನಗೆ ಅವಕಾಶ ನೀಡಿದ್ದ ಮಿತ್ತಲ್ ರವರು ಅಂದು ಮಧ್ಯಾಹ್ನ 2.25ರ ವರೆಗೆ ದಬ್ಬನಿ ಕಲೆಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು ಎಂದು ಮಾಹಿತಿ ನೀಡಿದರು.
ಬಹಮನಿ ಸುಲ್ತಾನರ ಕಾಲದ ಚಿತ್ರಕಲೆಯ ಕುರಿತು ವಿಸ್ತೃತ ಮಾಹಿತಿ ಹಂಚಿಕೊಂಡ ಅವರು, ಬಹಮನಿ ಸುಲ್ತಾನರ ಕಾಲದ ಚಿತ್ರಕಲೆಯ ಇತಿಹಾಸವು ಮಧ್ಯಕಾಲೀನ ಸಂದರ್ಭದ ಶ್ರೀಮಂತ ಅಧ್ಯಾಯ ಎನಿಸಿದೆ. ಮುಘಲ್ ಅಥವಾ ರಜಪೂತ ಚಿತ್ರಕಲೆಯಂತೆ ವ್ಯಾಪಕವಾಗಿ ದಾಖಲಿಸಲ್ಪಟ್ಟಿಲ್ಲದಿದ್ದರೂ, ಬಹಮನಿ ನಂತರದ ದಬ್ಬನಿ ಚಿತ್ರ ಸಂಪ್ರದಾಯದ ಅಡಿಪಾಯ ಹಾಕುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.
ಬಹಮನಿ ರಾಜ್ಯ ಚಿತ್ರಕಲೆ, ವಾಸ್ತುಶಿಲ್ಪ, ಕ್ಯಾಲಿಗ್ರಫಿ, ಹಸ್ತಪ್ರತಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪೋಷಣೆಗೆ ಹೆಸರಾಗಿದೆ. ಸಾಕಷ್ಟು ಸಂಖ್ಯೆಯ ಕ್ಯಾಲಿಗ್ರಫಿಗಳು ಬಹಮನಿಗಳ ಕಾಲದಲ್ಲಿ ಬರೆಯಲ್ಪಟ್ಟವು (ಬೀದರ್‌ನ ಮದ್ರಸಾದಲ್ಲಿ ಈ ಕೆಲಸ ಹೇರಳವಾಗಿ ಮಾಡಲಾಗುತ್ತಿತ್ತು) ಎನ್ನುವುದನ್ನು ಅಥನಾಸಿ ನಿಕಿಟಿನ್ ಒಂದೆಡೆ ದಾಖಲಿಸುತ್ತಾನೆ. ಅರಮನೆಯ ಅಲಂಕಾರ, ಗೋಡೆಯ ಮೇಲಿನ ಚಿತ್ರಗಳು, ಹಸ್ತಪ್ರತಿ ಚಿತ್ರಗಳು ಬಹಮನಿ ರಾಜ್ಯದಲ್ಲಿ ಹೇರಳವಾಗಿ ಮಾಡಲ್ಪಡುತ್ತಿತ್ತು ಎನ್ನುವುದು ವಿದೇಶಿ ಪ್ರವಾಸಿಗರ ಬರಹಗಳಲ್ಲಿ ಕಾಣಸಿಗುತ್ತವೆ.
ಪರ್ಷಿಯಾದೊಂದಿಗಿನ ಸಾಂಸ್ಕೃತಿಕ, ರಾಜಕೀಯ ಸಂಬಂಧಗಳಿಂದಾಗಿ; ಪರ್ಷಿಯನ್ ಕಲಾವಿದರು, ಕ್ಯಾಲಿಗ್ರಾಫರ್‌ಗಳು, ವಾಸ್ತುಶಿಲ್ಪಿಗಳನ್ನು ಆಸ್ಥಾನಕ್ಕೆ ಆಹ್ವಾನಿಸಲಾಯಿತು. ಶೈಲೀಕೃತ ಹೂವಿನ ಲಕ್ಷಣಗಳು, ಜ್ಯಾಮಿತಿಯ ಮಾದರಿಗಳು, ವ್ಯಕ್ತಿ ಚಿತ್ರಗಳನ್ನು ಇವರು ಮಾಡಿದರು. ಬಹಮನಿ ಕಲೆಯು ಸ್ಥಳೀಯ ದಬ್ಬನಿ ಶೈಲಿಗಳು, ವಿಷಯ ಮತ್ತು ಬಣ್ಣಗಳ ಮೇಲೆ ಪ್ರಭಾವ ಬೀರಿದವು. ಕ್ರಿಯಾತ್ಮಕ ಮತ್ತು ಅಭಿವ್ಯಕ್ತಿಶೀಲ ರೂಪಗಳೊಂದಿಗೆ ಬಹಮನಿ ಕಲೆಯು ನಂತರದ ಬಿಜಾಪುರ, ಗೋಲ್ಗೊಂಡ, ಅಹ್ಮದ್‌ನಗರ ದನಿ ಶಾಲೆಗಳಿಗೆ (ದೃಶ್ಯಭಾಷೆಯಲ್ಲಿ ಶಾಲೆ ಅಂದ್ರೆ ಚಿತ್ರ ಸಂಪ್ರದಾಯ ಎಂದು ಅರ್ಥೈಸಲಾಗುತ್ತದೆ) ಅಡಿಪಾಯ ಹಾಕಿತು.
ರಾಜಪ್ರಭುತ್ವ, ರಾಜ ಸಭೆಗಳು, ಔತಣ ಕೂಟಗಳು, ಸಂಗೀತ ಮತ್ತು ನೃತ್ಯದ ಚಿತ್ರಣಗಳು, ಶಹನಾಮ ಮತ್ತು ಖಾಯಂತಹ ಪರ್ಷಿಯನ್ ಮಹಾಕಾವ್ಯಗಳ ವಿವರಣೆಗಳು, ಗುಲ್ಬರ್ಗದಲ್ಲಿನ ಖಾಜಾ ಬಂದೇ ನವಾಜ್‌ರಂತಹ ಸೂಫಿ ಸಂತರ ಪ್ರಭಾವವನ್ನು ಪ್ರತಿಬಿಂಬಿಸುವ ಅತೀಂದ್ರಿಯ ವಿಷಯಗಳು, ಪ್ರಕೃತಿ ಮತ್ತು ಬೇಟೆಯ ದೃಶ್ಯಗಳು ಈ ಕಲೆಯಲ್ಲಿ ಕಾಣಬಹುದು. ಕಾಲನ ತುಳಿತಕ್ಕೆ ಬಹುತೇಕ ವರ್ಣಚಿತ್ರಗಳು ನಶಿಸಿ ಹೋಗಿವೆ. ಬೀದರ್ ಕೋಟೆ, ಮಹಮುದ್ ಗವಾನ್ ಮದರಸಾ ಸೇರಿದಂತೆ ಗುಲಬರ್ಗಾ ಮತ್ತು ಬೀದರ್‌ನ ಅನೇಕ ಕಡೆಗಳಲ್ಲಿ ಇವರ ಕಾಲದ ಕಲಾ ರಚನೆಗಳಿವೆ.
ಪರ್ಷಿಯಾ ಮತ್ತು ಮಧ್ಯ ಏಷ್ಯಾದ ಕಲಾವಿದರು, ವಿದ್ವಾಂಸರು, ವಾಸ್ತುಶಿಲ್ಪಿಗಳನ್ನು ಬಹಮನಿ ಸುಲ್ತಾನರು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದ್ದರು. ತನ್ಮೂಲಕ ಬಹಮನಿಗಳ ಕಾಲದಲ್ಲಿ ಚಿತ್ರಕಲೆಯು ಆಸ್ಥಾನ ಕಲೆಯಾಗಿ ಅಭಿವೃದ್ಧಿಯತ್ತ ಸಾಗುತ್ತಿತ್ತು. ಅನೇಕ ಕಲಾವಿದರು ಇಲ್ಲಿ ಕೃಷಿ ಮಾಡಲ್ಪಟ್ಟಿದ್ದರೂ ಇತಿಹಾಸದ ಪುಟಗಳಲ್ಲಿ ಚಿತ್ರಕಾರರ ಹೆಸರುಗಳು ದಾಖಲುಗೊಂಡಿರುವುದು ತೀರ ಅಪರೂಪ. ಆದರೆ, ನಂತರದ ಶಾಖೆಗಳಾದ ಬಿಜಾಪುರ, ಗೋಲ್ಗೊಂಡ, ಅಹ್ಮದ್‌ನಗರ ರಾಜ್ಯದಲ್ಲಿ ಅವರ ಹೆಸರುಗಳು ಕೇಳಲ್ಪಟ್ಟವು. ಹಾಗಾದರೆ, ಬಹಮನಿ ಸುಲ್ತಾನರ ಕಾಲದಲ್ಲಿ ಚಿತ್ರಕಾರರು ಆಶ್ರಯ ಪಡೆದಿರಲಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಮುಘಲ್-ಡೆಕ್ಕನ್ ಸಂದರ್ಭದಲ್ಲಿನ ಫರೂಖ್ ಬೇಗ್‌ನಂತೆ, ಬಹಮನಿಗಳ ಆಸ್ಥಾನದಲ್ಲಿ ಗುರುತಿಸಲ್ಪಡುವಂಥ ಚಿತ್ರಕಾರರ ಹೆಸರುಗಳು ಕಾಣಸಿಗುವುದಿಲ್ಲ. ಆದರೆ ಫಿರೋಜ್ ಷಾ ಬಹಮನಿ (1397-1422) ಆಳ್ವಿಕೆಯಲ್ಲಿ ಪರ್ಷಿಯನ್ ವರ್ಣಚಿತ್ರಕಾರರು, ಕ್ಯಾಲಿಗ್ರಾಫರ್‌ಗಳನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲಾಯ್ತು ಎಂಬ ಮಾಹಿತಿ ವಿದೇಶಿ ಪ್ರಸಾಸಿಗರ ದಾಖಲುಗಳಲ್ಲಿ ಲಭ್ಯವಿದೆ.
ಘುಲಾಮ್ ಯಜ್ಞಾನಿ ಅಂಥವರು ಕೂಡ, ಬಹಮನಿ ಸುಲ್ತಾನರ ಕಾಲದಲ್ಲಿ ಕಲಾವಿದರ ಹೆಸರುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದಿರುವ ಬಗ್ಗೆ ಉಲ್ಲೇಖಿಸುತ್ತಾರೆ. ವಾಸ್ತುಶಿಲ್ಪದ ಅಲಂಕಾರಗಳನ್ನು ಮಾಡುವಲ್ಲಿ ಸ್ಟು, ಫ್ರೆಷ್ಟೋ ಕಲಾವಿದರು ಸೇರಿದಂತೆ ಅನೇಕ ಕುಶಲಕರ್ಮಿಗಳ ತಂಡ ಒಳಗೊಂಡಿರುತ್ತದೆ. ಆದರೆ ಅವರು ಅನಾಮಧೇಯರಾಗಿಯೇ ಉಳಿದುಕೊಂಡಿದ್ದಾರೆ. ಬಹಮನಿ ನಂತರದ ರಾಜ್ಯಗಳಲ್ಲಿ ವರ್ಣಚಿತ್ರಕಾರರು ಹೆಚ್ಚು ಹೊರಹೊಮ್ಮಿದರು ಮತ್ತು ಅವರ ಹೆಸರುಗಳೂ ದಾಖಲಿಸಲಾಯ್ತು. ಉದಾಹರಣೆಗೆ: ಫಾರೂಖ್ ಹುಸೇನ್, ಅಬ್ದುಲ್ಲಾ ಖಾದಿರಿ (ಬಿಜಾಪುರ), ಮುಹಮ್ಮದ್ ಅಲಿ, ಮೀರ್ ಕಲನ್ ಖಾನ್ (ಗೋಲ್ಗೊಂಡ), ಹುಸೇನ್ ನಕ್ಕಾಶ್ (ಅಹ್ಮದ್‌ನಗರ) ಹೆಸರುಗಳು ಕಾಣಿಸುತ್ತವೆ. ಈ ಶಾಲೆಗಳು ಬಹಮನಿ ಸಂಪ್ರದಾಯವನ್ನು ಆನುವಂಶಿಕವಾಗಿ ಪಡೆದುಕೊಂಡವು ಮತ್ತು ವಿಸ್ತರಿಸಿದವು ಎಂದು ಹೇಳುತ್ತ, ಅಲ್ಲೂ ಸಹ ಹೆಚ್ಚು ವೈಯಕ್ತಿಕಗೊಳಿಸಿದ ಮತ್ತು ಹೆಸರಿಸಲಾದ ಕಲಾಕೃತಿಗಳನ್ನು ಉತ್ಪಾದಿಸಿದವು ಎಂದು ಯಜ್ಞಾನಿ ಒಂದೆಡೆ ಉಲ್ಲೇಖಿಸುತ್ತಾರೆ.
ಒಟ್ಟಿನಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ದಾಖಲಿಸಲ್ಪಟ್ಟ ಚಿತ್ರಕಾರರ ಹೆಸರಿಲ್ಲ. ಆದರೆ ಈ ಸುಲ್ತಾನರ ಕಾಲದಲ್ಲಿ ಚಿತ್ರಕಲೆ ಸಂಪ್ರದಾಯವಾಗಿ ಅರಳಿತು ಎನ್ನುವುದು ವಿದೀತವಾಗುತ್ತದೆ ಎಂದು ವಿವರಿಸಿ ತಮ್ಮ ಉಪನ್ಯಾಸವನ್ನು ಮುಗಿಸಿದರು.
ಕಲಬುರಗಿಯ ಸರ್ಕಾರಿ ಕಾಲೇಜಿ (ಸ್ವಾಯತ್ತ)ನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಭಾಗಾ ಅವರು ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಪ್ರಕಾಶ ಬಡಿಗೇರ್ ಅವರು ಗೌರವ ಉಪಸ್ಥಿತರಿದ್ದರು.