ಆಯ್ದಕ್ಕಿ ಮಾರಯ್ಯ

ಆಯ್ದಕ್ಕಿ ಮಾರಯ್ಯ

ಆಯ್ದಕ್ಕಿ ಮಾರಯ್ಯ

ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ,

ಮಾಡುವುದೇನು ? ನೀಡುವುದೇನು ?

ಮನೆ ಧನ ಸಕಲ ಸಂಪದ ಸೌಖ್ಯವುಳ್ಳ 

ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು, ಎನ್ನೊಡಲ ಹೊರೆವೆನಾಗಿ, 

ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ 

ಎನಗಿಲ್ಲ ಸಂಗನಬಸವಣ್ಣಾ.

         ಆಯ್ಕಕ್ಕಿ #ಮಾರಯ್ಯ

               *ವಚನ ಅನುಸಂಧಾನ* 

ಸರಳತೆ ಮತ್ತು ಸಹಜತೆಯ ಪ್ರಾಮಾಣಿಕತೆಗೆ ಈ ವಚನ ಒಂದು ಹೆಗ್ಗುರುತು. ನಿಜವಾದ ಶರಣತ್ವ ಅಂದರೆ ಏನು ಎನ್ನುವುದನ್ನು ಮನದಟ್ಟು ಮಾಡಿ ಕೊಡುವ ಈ ವಚನದಲ್ಲಿ ಶರಣತತ್ವ ಸಿದ್ಧಾಂತವು

ಅನನ್ಯವಾಗಿ ಪರಿಮಳಿಸಿ ಪರಿಣಮಿಸುತ್ತದೆ. ಈ ವಚನ ಮೇರು ಸದೃಶವಾದ ಅಪ್ಪಬಸವಣ್ಣನವರ 

ಮುಂದೆ ಪ್ರತ್ಯಕ್ಷವಾಗಿ ನಿಂತು ವಚನಕಾರ ಶರಣ ಆಯ್ದಕ್ಕಿ ಮಾರಯ್ಯ ತನ್ನ ಲೌಕಿಕ ಬದುಕಿನ ನಿಜ ಸ್ಥಿತಿ ಗತಿಯ ಇತಿ ಮಿತಿಯನ್ನು ಕುರಿತು ಮಾಹಿತಿ ನೀಡುವಂತೆ ಕಂಡುಬರುತ್ತದೆ. ಆದರೆ ಈ ವಚನ ತನ್ನ ಮುಗ್ಧತೆ ಮತ್ತು ಪ್ರಾಮಾಣಿಕತೆಯ ಕುರಿತು ಅತ್ಯಂತ ಸಹಜವಾಗಿ ಪ್ರಬುದ್ಧತೆಯನ್ನ ಮೆರೆದಿದೆ ಇದು ಅನುಭಾವಿಕ ನೆಲೆಯಲ್ಲಿ ಇರುವ ಶರಣಗೆ ಮಾತ್ರ ದಕ್ಕುವ ಅನುಭಾವದ ಸಹಜ ನಡೆ ಆಗಿದೆ

ಈಗ ಇದನ್ನ ಅನುಸಂಧಾನ ಮಾಡಿ ನೋಡೋಣ 

*#ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ,*

*ಮಾಡುವುದೇನು ? #ನೀಡುವುದೇನು ?*

ಕಾಯಕ ಮತ್ತು ದಾಸೋಹ ಇವುಗಳನ್ನು ಭಕ್ತನು ಕಡ್ಡಾಯವಾಗಿ ಮಾಡಬೇಕು ಎನ್ನುವ ನಿಲುವನ್ನು ಶರಣರು ನಿಗದಿ ಪಡಿಸಿದ್ದರು ಎನ್ನುವುದು ವಚನ ಅಧ್ಯಯನದಲ್ಲಿ ತಿಳಿದು ಬರುತ್ತದೆ. ಇಲ್ಲಿ ಪ್ರಸ್ತುತ ವಚನವು ಈ ಹಿನ್ನೆಲೆಯಲ್ಲೇ ರೂಪುಗೊಂಡಂತೆ ಕಂಡು ಬರುತ್ತದೆ. ಇದು, ಮಾರಯ್ಯ ಶರಣರು ಎದಿರುಗೊಂಡು ಹೇಳಿದ್ದು ಸಾಕ್ಷಾತ್ ಬಸವಣ್ಣನ ವರಿಗೆ! ತಮ್ಮ ಲೌಕಿಕ ಬದುಕಿ ನಿಜ ಸ್ಥಿತಿ ಗತಿಯ ಬಗ್ಗೆ ಹೀಗೆ ಅನಾವರಣ ಮಾಡುವ ಮೂಲಕವೇ ತಮ್ಮ ಶರಣಭಾವದ ಪ್ರಾಮಾಣಿಕ ಸ್ವರೂಪವನ್ನ ತೋರಿಸುತ್ತಲೇ ತಮಗೆ 'ಮನೆ ಇಲ್ಲ ಧನ ಇಲ್ಲ ಏನು ಮಾಡುದು? ಏನು ಕೊಡುದು?' ಎಂದು ನೇರವಾಗಿ ಬಸವಣ್ಣನವರಿಗೆ ಆಗ ಎದುರಾದ ಸನ್ನಿವೇಶದ ಹಿನ್ನೆಲೆಯಲ್ಲಿ ಹೀಗೆ ನಿವೇದನೆ ರೀತಿ ಪ್ರಶ್ನಿಸಿದ್ದಾರೆ. ಅನುಭಾವಿಕ ನೆಲೆಯಲ್ಲಿ ಅವರು ಹೇಳಿದ್ದಾರೆ. ಇಲ್ಲಿ ಮನೆಯಿಲ್ಲ ಅಂದರೆ ಸದೃಢ ಮನಸ್ಸು, ಧನ ಅಂದ್ರೆ ಭಕ್ತಿ ಸಂಪತ್ತು. ಇವುಗಳು ತಮ್ಮಲ್ಲಿ ಇಲ್ಲಾ ಎನ್ನುವ ವಿನಯಪೂರ್ವಕವಾದ ದೈನ್ಯತೆಯ ಭಾವನೆ ಇಲ್ಲಿ ಮಾರಯ್ಯ ಶರಣರದು

ಯಾಕೆಂದರೆ ಭಕ್ತರ ಮನೆ ಅವಿಮುಕ್ತ ಕ್ಷೇತ್ರವೆಂದಿ

ದ್ದಾರೆ ಶರಣರು. ಹಾಗಾಗಿ ಭಕ್ತಿಯಿಲ್ಲದ ಬಡವ ತಾನು ಎಂದಿರುವರು ಮಾರಯ್ಯನವರು.

*ಮನೆ ಧನ ಸಕಲ ಸಂಪದ ಸೌಖ್ಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು*, *ಎನ್ನೊಡಲ #ಹೊರೆವೆನಾಗಿ,*

ಮಾರಯ್ಯ ಶರಣ ತಮ್ಮ ಲೌಕಿಕ ಬದುಕಿನ ಭಕ್ತನ ಬಡತನ ಕುರಿತ ಹೆಚ್ಚಿನ ಮಾಹಿತಿಯನ್ನ ಮೇಲಿನ ವಚನ ಸಾಲಿನಲ್ಲಿ ಹೇಳುತ್ತಾ, ತಾನು ಯಾವರೀತಿ ಹೊಟ್ಟೆ ಹೊರೆಯುತ್ತಿರುವುದು ಎನ್ನುವುದಕ್ಕೆ ಈ ಮೇಲಿನಂತೆ ಎಲ್ಲಾ ರೀತಿಯ ಸಕಲ ಸಂಪತ್ತುಳ್ಳ ಶರಣರ ಮನೆ ಅಂಗಳದಲ್ಲಿ ನೆಟ್ಟು ಹಚ್ಚಿದ ಚೀಲ ದಿಂದ ಚೆಲ್ಲಿದ ಅಕ್ಕಿಯನ್ನ ಆಯ್ದು ತಂದು ಹೊಟ್ಟೆ ಹೊರೆಯುತ್ತಿರುವುದ ತಿಳಿಸುವ ಮೂಲಕವಾಗಿ ಶರಣ ತತ್ವವು; ಲೌಕಿಕದ ಮನೆ ಧನ ಕನಕ ಸಕಲ ಸಂಪದ ಸೌಖ್ಯವನ್ನು ಸತ್ಯದ ಹಾಗೂ ಕಾಯಕದ ಪರಿಶ್ರಮದ ಶರಣ ಮಾರ್ಗದಿಂದ ಗಳಿಸುವುದನ್ನ ಇಲ್ಲಿ ಪರೋಕ್ಷವಾಗಿ ಸಮರ್ಥಿಸುತ್ತದೆ. ಇಂತಹ ಘನಮನ ಸಂಪನ್ನರು ಹಾಗೂ ಭಕ್ತಿ ಸಂಪನ್ಮೂಲ ಸಿರಿವಂತರಾದ ಶರಣರ ಆಶ್ರಯದಲ್ಲಿದ್ದು ತಮ್ಮ ಜೀವನ ನಡೆಸುತ್ತಿರುವುದನ್ನು ಇಲ್ಲಿ ಮಾರಯ್ಯ ಶರಣ ತಮ್ಮ ಲೌಕಿಕದ ಮತ್ತು ಪಾರಮಾರ್ಥಿಕದ

ಬದುಕಿನ ಸಮದರ್ಶನದ ಚಿತ್ರಣವನ್ನ ನಿವೇದನೆ ಮಾಡಿಕೊಂಡಿರುವ ರೀತಿಯು ನಿಜಕ್ಕೂ ಅನನ್ಯ ತೆಯನ್ನು ಒಳಗೊಂಡಿದೆ.

*ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ* 

*ಎನಗಿಲ್ಲ* *ಸಂಗನಬಸವಣ್ಣಾ.*

ಭಕ್ತನಿಗೆ ತನ್ನ ಪರಿಶ್ರಮದ ಫಲವಾಗಿ ಸಿಗುವುದು 

ಹೊಟ್ಟೆ ಹೊರೆಯುವಷ್ಟೇ ಆಗಿರುವಾಗ ಹೆಚ್ಚಿನ ಸಂಪಾದನೆ ತನಗಿಲ್ಲದ ಕಾರಣಕ್ಕೆ ಎಲ್ಲರಿಗೂ ಕೊಡುವ ಅಮರೇಶ್ವರಲಿಂಗಕ್ಕೆ ತಾನು ನೀಡುವ ಬಯಕೆ ಖಂಡಿತಾ ಇಲ್ಲಾ ಬಸವಣ್ಣಾ ಎನ್ನುವ ಮೂಲಕ ತನಗೆ "*ಇಲ್ಲದಿದ್ದರೂ ಕೊಟ್ಟು ಬೀಗುವ ಅಹಂನ್ನು"* ಗೆಲ್ಲುತ್ತಾರೆ ಇಲ್ಲಿ ಆಯ್ದಕ್ಕಿ ಮಾರಯ್ಯ ಶರಣರು. ಮಾಡುವಲ್ಲಿ ನೀಡುವಲ್ಲಿ ಶಕ್ತಿ ಮೀರಿ ನೀಡಿ ಮಾಡಿ ಅಹಂಕಾರಕ್ಕೆ ಈಡಾಗಬಾರದೆಂಬ ಸಂದೇಶ ಈ ವಚನದ ಮೂಲ ಆಶಯವಾಗಿದೆ.  

#ಸಂಕ್ಷಿಪ್ತ #ಪರಿಚಯ*

ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ

ಅಪ್ಪ ಬಸವಣ್ಣನವರ ಸಮಕಾಲೀನರಾದ ಶರಣ ಆಯ್ದಕ್ಕಿ ಮಾರಯ್ಯ ಅನುಭವ ಮಂಟಪದಲ್ಲಿನ ೭೭೦ ಅಮರ ಗಣಂಗಳಲ್ಲಿಯ ಒಬ್ಬ ವಚನಕಾರ ಅನುಭಾವಿ ಶರಣ. ಆಯ್ದಕ್ಕಿ ಲಕ್ಕಮ್ಮ ಶರಣೆಯಿ ವರ ಧರ್ಮಪತ್ನಿ. ಈ ದಂಪತಿಗಳ ಕಾಯಕನಿಷ್ಠೆ ಮತ್ತು ದಾಸೋಹನಿಷ್ಠೆ ಶರಣರಲ್ಲೇ ಅಗ್ರಗಣ್ಯತೆ ಪಡೆದಿದೆ. "ಕಾಯಕವೇ ಕೈಲಾಸ" ಎಂಬುದಿವರ ಬದುಕಿನ ಮುಖ್ಯ ಸಿದ್ಧಾಂತ. ರಾಯಚೂರ ಜಿಲ್ಲೆ ಲಿ೦ಗಸೂರ ತಾಲೂಕ ಅಮರೇಶ್ವರ ಇವರೂರು. 'ಅಮರೇಶ್ವರ ಲಿಂಗ' ಆಂಕಿತದಲ್ಲಿವರು ರಚಿಸಿದ ೩೨ ವಚನ ಲಭ್ಯವಾಗಿವೆ. ಇಲ್ಲಿ ಕಾಯಕ ತತ್ವದ ವಿಚಾರವೇ ಪ್ರಧಾನವಾಗಿದ್ದು ಕಂಡುಬರುತ್ತದೆ. ಮಹಾಮನೆಯ ಅಂಗಳದಲ್ಲಿ ದಾಸೋಹಕ್ಕೆಂದು ತರುವಂಥ ಅಕ್ಕಿ ಚೀಲದಿಂದ ಚೆಲ್ಲಿದ ಅಕ್ಕಿಯನ್ನು ಆಯುವುದು ಮಾರಯ್ಯ ಶರಣರ ಕಾಯಕ ಆಗಿ ದ್ದರಿಂದ ಆಯ್ದಕ್ಕಿ ಮಾರಯ್ಯ ಶರಣ ಎನ್ನುವ ಆ ಹೆಸರಿನಲ್ಲೇ ಇವರು ಪ್ರಸಿದ್ಧರಾಗಿದ್ದಾರೆ.

 *ಅಳಗುಂಡಿ ಅಂದಾನಯ್ಯ*