ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳ ಬಲಿಬೇಡ-ಮಹೇಶ್ ಪಾಟೀಲ್ ಕಡಕೋಳ
ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳ ಬಲಿಬೇಡ-ಮಹೇಶ್ ಪಾಟೀಲ್ ಕಡಕೋಳ
ಯಡ್ರಾಮಿ, ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
ಯಡ್ರಾಮಿ ತಾಲೂಕು ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಹೇಶ್ ಪಾಟೀಲ್ ಕಡಕೋಳ ಅವರು ಮಾತನಾಡಿ, “ಇಂದಿನ ಪಾಲಕರು ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಇದರ ಪರಿಣಾಮವಾಗಿ ರಾಜ್ಯದ ಅನೇಕ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ,” ಎಂದು ಕಳವಳ ವ್ಯಕ್ತಪಡಿಸಿದರು.
“ಪಾಲಕರು ಲಕ್ಷಾಂತರ ರೂಪಾಯಿ ಡೊನೇಶನ್ ನೀಡಿ ಇಂಗ್ಲಿಷ್ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ದುಃಖಕರವಾಗಿದೆ. ಕನ್ನಡ ಭಾಷೆಯನ್ನು ಕನ್ನಡಿಗರೇ ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾಸ್ತವವನ್ನು ಪ್ರತಿಯೊಬ್ಬ ಕನ್ನಡಪರ ಪಾಲಕರು ಅರಿತುಕೊಳ್ಳಬೇಕು,” ಎಂದರು.
ಹಣದಾಸೆಯಿಂದ ಹಾಗೂ ವ್ಯಾಪಾರಿಕ ದೃಷ್ಟಿಯಿಂದ ಕೆಲವು ಉದ್ಯಮಿಗಳು ಖಾಸಗಿ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಿದ್ದು, ಇದರ ಪರಿಣಾಮ ಕನ್ನಡ ಶಾಲೆಗಳ ಅವನತಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
“ಕನ್ನಡ ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಾಖಲಿಸಬೇಕು. ಕನ್ನಡಪರ ಸಂಘಟನೆಗಳು ಹಾಗೂ ಯುವಕರು ಇದರ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು. ಎಲ್ಲ ವಲಯಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಳವಾಗಬೇಕು,” ಎಂದು ಕಡಕೋಳ ಅಭಿಪ್ರಾಯಪಟ್ಟರು.
“ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಕನ್ನಡ ಮಿಶ್ರಿತ ಇಂಗ್ಲಿಷ್ ಬಳಕೆ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ನಿಜವಾದ ಕನ್ನಡ ಉಸಿರಾಡುತ್ತಿದೆ. ಈ ಕನ್ನಡದ ಶುದ್ಧತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ,” ಎಂದು ಹೃದಯದಿಂದ ಕರೆ ನೀಡಿದರು.
