ಜನಪದ ಕಾವ್ಯಗಳಲ್ಲಿ ಜನಜೀವನದ ಜ್ವಾಲಾಮುಖಿ”’ ಕೆ.ವಿ. ನಾಗರಾಜಮೂರ್ತಿ

ಜನಪದ ಕಾವ್ಯಗಳಲ್ಲಿ ಜನಜೀವನದ ಜ್ವಾಲಾಮುಖಿ”’ ಕೆ.ವಿ. ನಾಗರಾಜಮೂರ್ತಿ
‘ಜನಪದ ಮೌಖಿಕ ಮಹಾಕಾವ್ಯಗಳು ಸಮಾನತೆಯ ಸಂದೇಶವಾಹಕ’ — ಕೆ.ವಿ. ನಾಗರಾಜಮೂರ್ತಿ
ಚಾಮರಾಜನಗರ, ಜುಲೈ 16:ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ರಂಗವಾಹಿನಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಜನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ’ ವಿಷಯದ ವಿಚಾರಸಂಕಿರಣವನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ‘‘ದೇಶದಲ್ಲಿ ಏಕಮುಖಿ ಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಹುನ್ನಾರಗಳು ನಡೆಯುತ್ತಿವೆ. ಜನಪದ ಮಹಾಕಾವ್ಯಗಳಂತಹ ಬಹುಮುಖಿ ಸಂಸ್ಕೃತಿಯಷ್ಟೇ ನಿಜವಾದ ಭಾರತೀಯತನವನ್ನು ಪ್ರತಿಪಾದಿಸಬಲ್ಲದು. ಮನುಜಮತ ವಿಶ್ವಪಥದತ್ತ ಹೆಜ್ಜೆ ಇಡುವಂತೆ ಕುವೆಂಪು ಕನಸು ಕಂಡಿದ್ದರು. ಶೋಷಿತರ, ಹಳ್ಳಿಗಾಡು ಜನರ ಬದುಕಿನಿಂದ ಉದ್ಭವಿಸಿರುವ ಈ ಮಹಾಕಾವ್ಯಗಳು ಸಮಾಜದಲ್ಲಿ ಆಂತರಿಕ ಶಕ್ತಿ ತುಂಬುತ್ತವೆ’’ ಎಂದು ತಿಳಿಸಿದರು.
ಸಮಾಜದಲ್ಲಿ ಸಾಮಾಜಿಕ ಅಸಮತೆ, ಸಂಬಂಧಗಳ ಶಿಥಿಲತೆ, ಹಾಗೂ ಯುವಜನತೆ ಮಾದಕ ವ್ಯಸನಕ್ಕೆ ಒಲಿಯುತ್ತಿರುವ ಈ ಸಮಯದಲ್ಲಿ, ಜನಪದ ಕಾವ್ಯಗಳು ಮಾನಸಿಕ ಶಕ್ತಿ, ಆತ್ಮಪ್ರಜ್ಞೆ ನೀಡಬಲ್ಲವು ಎಂದರು.
ಜಾನಪದ ನಾಟಕಗಳ ಸಾಂಸ್ಕೃತಿಕ ಮಹತ್ವವನ್ನು ವಿವರಿಸುತ್ತಾ ರಂಗತಜ್ಞ ಶಶಿಧರ್ ಭಾರಿಘಾಟ್ ಮಾತನಾಡಿ, ‘‘ಎಲ್ಲ ಕಲೆಗಳಿಗೂ ಜನಪದವೇ ಮೂಲ ಆಕರವಾಗಿದೆ. ಜನಪದ ರಂಗಭೂಮಿ ಜನಜೀವನದ ಭಾವನೆಗಳನ್ನು ಆಳವಾಗಿ ವ್ಯಕ್ತಪಡಿಸುವ ಮಾಧ್ಯಮವಾಗಿದೆ’’ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ 'ಎಚ್.ಎಸ್. ಶಿವಪ್ರಕಾಶರ ನಾಟಕಗಳಲ್ಲಿ ಜಾನಪದ ಮೌಖಿಕ ಪರಂಪರೆಯ ಅನಾವರಣ' ಕುರಿತು ಜಗದೀಶ್ ಸಿ. ಜಾಲ ಉಪನ್ಯಾಸ ನೀಡಿದರು. ಸಭೆಗೆ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಜೆಎಸ್‌ಎಸ್ ಸಂಸ್ಥೆಯ ಪಿಆರ್‌ಒ ಆರ್.ಎಂ. ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು