ಚಂಚಲ ಮನ ನಿಯಂತ್ರಣಕ್ಕೆ ದಾಸ ಸಾಹಿತ್ಯವೇ ಮದ್ದು: ಡಾ.ಜಾಧವ

ಚಂಚಲ ಮನ ನಿಯಂತ್ರಣಕ್ಕೆ ದಾಸ ಸಾಹಿತ್ಯವೇ ಮದ್ದು: ಡಾ.ಜಾಧವ
ಕಲಬುರಗಿ: ಇಂದಿನ ವಿಜ್ಞಾನ-ತಂತ್ರಜ್ಙಾನಗಳ ನಾಗಾಲೋಟದಲ್ಲಿ ಡಿಜಿಟಲ್ ದುಶ್ಚಟಗಳಿಗೆ ಬಲಿಯಾಗಿ ಸಾಂಸ್ಕೃತಿಕ ಅಧಃಪತನದತ್ತ ಸಾಗುತ್ತಿರುವ ಯುವ ಪೀಳಿಗೆಗೆ ಹರಿದಾಸ ಸಾಹಿತ್ಯ ಮನಸ್ಸನ್ನು ನಿಯಂತ್ರಿಸುವ ಸಾಧನವಾಗಿದೆ ಎಂದು ಸಾಹಿತಿ ಹಾಗೂ ದಾಸ ಸಾಹಿತ್ಯ ಚಿಂತಕ ಡಾ.ಸುರೇಶ ಜಾಧವ ಹೇಳಿದ್ದಾರೆ.
ದಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಇಲ್ಲಿನ ಕರುಣೇಶ್ವರ ನಗರದ ಜೈ ವೀರಹನುಮಾನ್ ಮಂದಿರದಲ್ಲಿ ಏರ್ಪಡಿಸಿದ್ದ ದಿ.ನರಸಿಂಗರಾವ ಹನುಮಂತರಾವ ಕುಲಕರ್ಣಿ ಮಲ್ಲಾಬಾದಿ ಸ್ಮರಣಾರ್ಥ ' ದಾಸ ಸಾಹಿತ್ಯದಲ್ಲಿ ಸಾಂಸ್ಕೃತಿಕ ಮೌಲ್ಯಗಳು' ವಿಷಯದ ಮೇಲೆ ವಿಶೇಷ ದತ್ತಿ ಉಪನ್ಯಾಸ ನೀಡಿದ ಡಾ.ಜಾಧವ ಕನ್ನಡ ವಾಗ್ದೇವಿಯ ಭಂಡಾರಕ್ಕೆ ಅಮೂಲ್ಯ ಕಾಣಿಕೆ ನೀಡಿದ ಹರಿದಾಸ ಸಾಹಿತ್ಯ ತನು-ಮನಗಳನ್ನು ಶೋಧಿಸಿ ಬಾಳು ಬೆಳಗುವ, ಮನುಷ್ಯನ ಸಣ್ಣತನಗಳನ್ನು ಹೋಗಲಾಡಿಸಿ ಅವನು ವಿಶ್ವ ಮಾನವನಾಗಿ ಬಾಳಲು ಪ್ರೇರಣೆ ನೀಡುವ ಸಾಹಿತ್ಯವಾಗಿದೆ ಎಂದು ನುಡಿದರು. ಮನೋ ನಿಯಂತ್ರಣಗೊಳಿಸಿ ಸಾಧನೆಯ ಮಾರ್ಗದಲ್ಲಿ ಸಾಗುವುದಕ್ಕೆ ಪೂರಕವಾದ ಉತ್ಕ್ರಷ್ಟ ಸಾಂಸ್ಕೃತಿಕ ಮೌಲ್ಯಗಳನ್ನು ದಾಸ ಸಾಹಿತ್ಯ ಒಳಗೊಂಡಿದೆ.
"ಹಳೆಯ ಕಾಲದ ಜೀವನ ಮೌಲ್ಯಗಳೆಲ್ಲ ಮಾಯವಾಗಿ ಭ್ರಮೆಯಲ್ಲಿ, ಅನಿಶ್ಚಿತತೆಯಲ್ಲಿ ಮುಳುಗಿ ಯಾವುದರಲ್ಲೂ ಸುಖವನ್ನು ಕಾಣದೆ ತೊಳಲಿ ಬಳಲುವ ಮನಗಳಿಗೆ ಹರಿದಾಸ ಸಾಹಿತ್ಯದ ವೈವಿಧ್ಯಮಯ ಚಿಂತನಗಳು ದಾರಿ ತೋರುವ ದಿವ್ಯ ಔಷಧಗಳಾಗಿವೆ" ಎಂದರು ಡಾ.ಜಾಧವ. ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದಾಗ, ಬಾಹ್ಯವಾಗಿ ನಾವು ಎಷ್ಟೇ ಸುಧಾರಣೆಗಳನ್ನು ಕಂಡರೂ, ಆಂತರಿಕವಾಗಿ ನಮ್ಮ ಸಮಾಜ ಬಳಲುತ್ತಿದೆ. ಅರಿವಿಲ್ಲದಂತೆ ಮಂಕು ಆವರಿಸಿ ಮಾನವೀಯತೆಯನ್ನು ಕಳೆದುಕೊಳ್ಲುತ್ತಿರುವ ಇಂದಿನ ದುರ್ಭರ ಸಂದರ್ಭದಲ್ಲಿ ಸ್ವಸ್ಥ ಹಾಗೂ ಸುದೃಢ ಸಮಾಜ ನಿರ್ಮಾಣಕ್ಕೆ ಹರಿದಾಸ ಸಾಹಿತ್ಯದ ಮೌಲ್ಯಗಳು ವರದಾನವಾಗಿ ಪರಿಣಮಿಸಿವೆ ಎಂದರು. ಇಂದಿನ ಯುವಕರು ಡಿಜಿಟಲ್ ವ್ಯಾಮೋಹವನ್ನು ತೊರೆದು ವ್ಯಕ್ತಿತ್ವನಿರ್ಮಾಣಕ್ಕೆ ಸಹಕಾರಿಯಾದ ದಾಸ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಉಪನ್ಯಾಸ, ಸಂಗೀತ, ನೃತ್ಯ ವೈವಿಧ್ಯಗಳನ್ನು ಒಳಗೊಂಡ 'ದಾಸ ವೈಭವ' ಕಾರ್ಯಕ್ರಮವನ್ನು ಉದ್ಯಮಿ, ಧಾರ್ಮಿಕ, ಸಾಮಾಜಿಕ ಧುರೀಣರಾದ ಕಿಶೋರ ದೇಶಪಾಂಡೆ ಅವರು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಸಿರನೂರಕರ್ ಅವರು ವಿಶ್ವದ ಯಾವುದೇ ಸಾಹಿತ್ಯದಲ್ಲಿ ಇಲ್ಲದಿರುರುವಂತಹ ವೈವಿಧ್ಯತೆ, ವೈಶ್ಯಾಲ್ಯತೆ, ವೈಚಾರಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಹರಿಸಾಸ ಸಾಹಿತ್ಯ ಒಳಗೊಂಡಿದ್ದು ಅದರ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಮಹತ್ವ ಮತ್ತು ಪ್ರಸ್ತುತತೆಯನ್ನು ಮನಗಾಣಲು ಹೆಚ್ಚಿನ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಸ್ವಾಮಿರಾವ ಕುಲಕರ್ಣಿ ಅವರು ಪ್ರತಿಷ್ಠಾನವು ಸಮಾಜಮುಖಿ ಚಿಂತನೆಗಳನ್ನು ಮನೆ-ಮನಗಳಿಗೆ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಹೇಳಿದರು.
ಖ್ಯಾತ ಗಾಯಕಿ ಸ್ನೇಹಾ ಸಿರನೂರಕರ್ ಅವರು ದಾಸವಾಣಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವರ್ಣ ಸಿಂಧು ನೃತ್ಯ ಕೇಂದ್ರದ ಕಲಾವಿದರು ದಾಸರ ಕೀರ್ತನೆಗಳ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ಶಾರದಾ ಸಂಗೀತ ವಿದ್ಯಾಲಯದ ಕಲಾವಿದರು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ದತ್ತಿ ದಾನಿ ಹಿರಿಯ ವಕೀಲ ಚಂದ್ರಕಾಂತ ಮಲ್ಲಾಬಾದಿ, ಪ್ರತಿಷ್ಠಾನದ ಟ್ರಸ್ಟಿಗಳಾದ ಸುನಂದಾ ಸಾಲವಾಡಗಿ, ಕೆ.ಪಿ.ಗಿರಿಧರ ಉಪಸ್ಥಿತರಿದ್ದರು.