ಸಂಸಾರದಲ್ಲಿದ್ದು ಪಾರಮಾರ್ಥ ಸಾಧಿಸುವುದೇ ಶರಣಮಾರ್ಗ*

ಸಂಸಾರದಲ್ಲಿದ್ದು  ಪಾರಮಾರ್ಥ ಸಾಧಿಸುವುದೇ ಶರಣಮಾರ್ಗ*

*ಸಂಸಾರದಲ್ಲಿದ್ದು ಪಾರಮಾರ್ಥ ಸಾಧಿಸುವುದೇ ಶರಣಮಾರ್ಗ* 

ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 21ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಶರಣಸಿದ್ದಾಂತ ದೇಶಾತೀತ , ಕಾಲಾತೀತ ಸಿದ್ದಾಂತವಾಗಿದೆ ,ಶರಣರು ಗಡ್ಡ ಬಿಟ್ಟು ಗುಡ್ಡ ಸೇರಿ ತಪಸ್ಸು ಮಾಡಿ ಉಪದೇಶಿಸಲಿಲ್ಲ .ಲೋಕದ ಮಾನವರಂತೆ ಜಗದೊಳಗೆ ಬದುಕಿ ಬದುಕನ್ನೇ ಪ್ರಯೋಗಿಸಿ ಅಧ್ಯಾತ್ಮ ಸಾಧನೆ ಸಾಧ್ಯವೆಂದು ತೋರಿಸಿಕೊಟ್ಟವರು .ಸಂಸಾರ ತೊರೆದು ಅಧ್ಯಾತ್ಮ ಸಾಧಿಸಬೇಕೆಂದೇನಿಲ್ಲ ,ಸಂಸಾರಕ್ಕೂ ಅಧ್ಯಾತ್ಮಕ್ಕೂ ವೈರತ್ವವಿಲ್ಲ. ಸಂಸಾರದೊಳಗಿದ್ದೆ ಪಾರಮಾರ್ಥ ಸಾಧಿಸಿ ತೋರಿದವರು ಶರಣರು. ತತ್ವ ನೀತಿಗಳು ಅರಿತುಕೊಳ್ಳುವ ಹಂಬಲ ಇರಬೇಕು ,ಅದನ್ನು ಅರಿತುಕೊಳ್ಳಲು ಗುರುವಿನ ಹತ್ತಿರ ಹೋಗಬೇಕಾಗುತ್ತದೆ .ದಾಹವಾದವನು ನದಿಗೆ ಹೋಗಿ ನೀರು ಕುಡಿಯಬೇಕೇ ಹೊರತಾಗಿ ನದಿಯೇ ಅವನೆಡೆಗೆ ಬರುವುದಿಲ್ಲ. ಅಧ್ಯಾತ್ಮದ ಹಸಿವಾದವನು ಪ್ರಯತ್ನ ಮಾಡಬೇಕು. ಬದುಕಿನಲ್ಲಿ ಎಲ್ಲವೂ ವಿಧಿಲಿಖಿತವೆಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಪ್ರಯತ್ನದಿಂದ ಪ್ರಾರಬ್ಧ ಗೆಲ್ಲಬಹುದು .ಮನುಷ್ಯನಿಗೆ ಸಾಧಿಸುವ ಛಲಬೇಕು ಸಾಧನೆಗೆ ಅಸಾಧ್ಯವಾದುದಿಲ್ಲ. ವ್ಯಕ್ತಿಯೊಬ್ಬ, ಅರಸನೊಬ್ಬ ವೈರಾಗ್ಯ ಬಂದು ಹೆಂಡತಿ ಮಕ್ಕಳನ್ನು ತೊರೆದು ಹೋಗುವುದು ಹೇಡಿತನದ ಲಕ್ಷಣವಾಗಿದೆ. ಸಂಸಾರದಲ್ಲಿ ಈಸಬೇಕು ಇದ್ದು ಜಯಸಬೇಕು ಅಧ್ಯಾತ್ಮ ಸಾಧನೆ ಮಾಡಬೇಕು. ಸಂಸಾರದಲ್ಲಿ ವೈರಾಗ್ಯ ಬಂದು ಮನೆ ಬಿಟ್ಟು ಹೋದವನು ಹೆಂಡತಿ ಮಕ್ಕಳಿಗೆ ಸಿರಿ ಸಂಪತ್ತು ಬಿಟ್ಟು ಹೋಗಬಹುದು ,ಆದರೆ ಹೆಂಡತಿಗೆ ಗಂಡನ ಪ್ರೀತಿ ,ಮಕ್ಕಳಿಗೆ ತಂದೆಯ ಪ್ರೀತಿಯ ಕೊರತೆ ಇಟ್ಟು ಹೋಗುತ್ತಾನೆ. ಆದ್ದರಿಂದ ಶರಣರು ಸಂಸಾರದಲ್ಲಿ ಇದ್ದು ಪಾರಮಾರ್ಥ ಸಾಧಿಸಬೇಕು ಎಂದು ಹೇಳಿದರು. ಸಂಸಾರ ತೊರೆದರೆ ಸಾಲದು ಅರಿಶಡ್ವರ್ಗಗಳನ್ನು ತೊರೆಯಬೇಕು.

ಅರಿಶಡ್ವರ್ಗಗಳನ್ನು ತೊರೆಯದೆ ಸಂಸಾರ ತೊರೆದರೆ ಏನೂ ಪ್ರಯೋಜನವಿಲ್ಲ . ಆದ್ದರಿಂದಲೇ ಶರಣರು ಸಂಸಾರದಲ್ಲಿದ್ದೆ ಪಾರಮಾರ್ಥ ಸಾಧಿಸುವ ವಿನೂತನ ಅಧ್ಯಾತ್ಮ ಮಾರ್ಗ ಕಂಡುಹಿಡಿದರು. ಸಕಲೇಶ ಮಾದರಸ ಶರಣನು ಸಂಸಾರ, ಅರಸೊತ್ತಿಗೆ ತೊರೆದು ಅರಣ್ಯದಲ್ಲಿ ತಪಸ್ಸು ಮಾಡಿ ಸಾಧಿಸಲಾಗದೆ ,

ಕಲ್ಯಾಣಕ್ಕೆ ಬಂದು ಬಸವಣ್ಣನವರನ್ನು ಭೇಟಿಯಾಗಿ ಶರಣ ಮಾರ್ಗದಲ್ಲಿ ಬದುಕಿದನು .

ಸಂಸಾರದೊಳಗಿದ್ದೆ ಸಂಸಾರ ಅಂಟಿಸಿಕೊಳ್ಳದಂತೆ ಬದುಕಬೇಕು ಬಸವಣ್ಣನವರು ಸಂಸಾರದಲ್ಲಿದ್ದೆ ಪಾರಮಾರ್ಥ ಸಾಧಿಸುವ ವಿನೂತನ ದಾರಿ ಜಗಕ್ಕೆ ತೋರಿಸಿದರು. ಬಸವಣ್ಣನವರ ವಿನಯಶೀಲ ಗುಣ ಕಂಡ ಶರಣರು ಅವರನ್ನು ಅನಾದಿ ಪರಮಾತ್ಮನಾಗಿಯೇ ಕಂಡರು. ಬಸವಣ್ಣ ಬಾಳೆಯ ಗೊನೆಯಂತೆ ಬಾಗಿ ವಿಶ್ವ ಶ್ರೇಷ್ಠರಾದರು. ಬಸವಣ್ಣ ತೋರಿಸಿದ ಭಕ್ತಿ ಕಳ್ಳರನ್ನು ,ಕೊಲೆಗಡುಕರನ್ನು, ವೇಶ್ಯೆ, ದಾಸಿಯರನ್ನು ಶರಣರನ್ನಾಗಿಸಿತು. ವೇಶ್ಯೆಯರನ್ನು ನಾಯಿ ಮುಟ್ಟಿದ ಮಡಿಕೆ ಎಂದು ನಿಂದಿಸಿದ ಧರ್ಮಗಳಿವೆ. ಆದರೆ ಬಸವ ಧರ್ಮ ಆಕೆಯನ್ನು ಶರಣರ ಪಟ್ಟ ಕಟ್ಟಿತು ಎಂದು ಹೇಳಿದರು . 

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ ಅವರು ಹಾಜರಿದ್ದರು