ಬಸವ ತತ್ವ ಜಗತ್ತಿಗೆ ತಲುಪಿಸಲು ಮಹಿಳೆಯರ ಸಂಘಟಿತ ಶ್ರಮ ಅಗತ್ಯ-ನೀಲಮ್ಮ ನೆಲೋಗಿ
ಬಸವ ತತ್ವ ಜಗತ್ತಿಗೆ ತಲುಪಿಸಲು ಮಹಿಳೆಯರ ಸಂಘಟಿತ ಶ್ರಮ ಅಗತ್ಯ-ನೀಲಮ್ಮ ನೆಲೋಗಿ
ಮಾದೇವಿಯಕ್ಕಗಳ 15ನೇ ಸಮ್ಮೇಳನಕ್ಕೆ ಚಾಲನೆ
ನಗರದ ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಹಾದೇವಿಯಕ್ಕಗಳ 15ನೇ ಸಮ್ಮೇಳನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು . ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನೆರವೇರಿತು .ಮೆರವಣಿಗೆಯಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ಶರಣೆಯರು ಕಂಗೊಳಿಸಿದರು . ವಚನ ಪಠಣ, ವಚನ ಗಾಯನ, ವಚನ ನೃತ್ಯ ಗಮನ ಸೆಳೆಯಿತು .
ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ವಿಲಾಸವತಿ ಖೂಬಾ ಅವರು ಪ್ರಸ್ತಾವಿಕ ನುಡಿಗಳ ನಾಡುತ್ತಾ 15 ವರ್ಷಗಳಿಂದ ಮಹಾದೇವಿ ಅಕ್ಕನವರ ಸಮ್ಮೇಳನ ಮಾಡುತ್ತಾ ಬಂದಿದ್ದೇವೆ . ಬಿಡಿ ಜತ್ತಿ ಅವರು 60 ವರ್ಷಗಳ ಮೊದಲು ಈ ಬಸವ ಸಮಿತಿ ಸ್ಥಾಪಿಸಿದ್ದಾರೆ .ಅಂದಿನಿಂದ ಇಂದಿನವರೆಗೆ ಬಸವ ಸಮಿತಿ ನಿರಂತರವಾಗಿ ಬಸವ ತತ್ವ ಪ್ರಚಾರ ಮಾಡುತ್ತಾ ಬಂದಿದೆ ಎಂದರು .
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನೀಲಮ್ಮ ನೆಲೋಗಿ ಅವರು ಎಲ್ಲಾ ಬಸವ ಭಕ್ತರು ಒಂದೆಡೆಗೆ ಸೇರಿ ಬಸವತತ್ವಕ್ಕಾಗಿ ಶ್ರಮಿಸಿದರೆ ಬಸವ ತತ್ವ ಜಗತ್ತಿಗೆ ಬಿತ್ತರಿಸಲು ಸಾಧ್ಯವಿದೆ .ಅಕ್ಕಮಹಾದೇವಿಯ ಹೆಸರಿನಲ್ಲಿ ಮಹಿಳೆಯರು ಸಂಘಟಿತರಾಗಬೇಕು ಎಂದು ನುಡಿದರು .
ಸಮ್ಮೇಳನದ ಸರ್ವಾಧ್ಯಕ್ಷರಾದ ಪುಷ್ಪಾ ವಾಲಿಯವರು ಮಾತನಾಡಿ ಬಸವ ಪೂರ್ವ ಸಮಾಜದಲ್ಲಿ ಅನೇಕ ಬಗೆಯ ಭೇದ ಭಾವಗಳು ನೆಲೆಯೂರಿದ್ದವು. ವರ್ಗ ಬೇದ, ವರ್ಣಭೇದ, ಲಿಂಗ ಭೇದ, ಜಾತಿ ಭೇಧಗಳು ಸಮಾಜವನ್ನು ಬೇರೆ ಬೇರೆ ಭಾಗಗಳನ್ನಾಗಿ ಮಾಡಿ ಜನರ ಶೋಷಣೆಗೆ ಕಾರಣವಾಗಿದ್ದವು. ಬಸವಣ್ಣನವರು ಈ ಭೇದ ಭಾವ ಶೋಷಣೆಯಿಂದ ಸಮಾಜವನ್ನು ಮುಕ್ತಗೊಳಿಸಲು ಸಮಾಜ ಸಂಘಟನೆಯ ಅವಶ್ಯಕತೆಯನ್ನು ಮನಗಂಡರು. ಅದಕ್ಕಾಗಿ ಬಸವಣ್ಣನವರು ೧೨ ನೆಯ ಶತಮಾನದಲ್ಲಿ ಶರಣ ಸಂಘಟನೆ ಹುಟ್ಟು ಹಾಕಿ, ಈ ಸಂಘಟನೆ ಸದಸ್ಯರಾಗಲು ಭಕ್ತಿ, ಕಾಯಕ ಮತ್ತು ದಾಸೋಹ ತತ್ವಗಳನ್ನು ಅಳವಡಿಸಿಕೊಳ್ಳುವದು ಅನಿವಾರ್ಯವೆಂದು ಬಯಸಿದರು. ಈ ತತ್ವಗಳನ್ನು ಬೆಳೆಸಿಕೊಂಡ ಅನೇಕ ಜನರು ಈ ಸಂಘಟನೆಯ ಸದಸ್ಯರಾಗಿ ಸೇರಿಕೊಂಡರು. ಇದರ ಜೊತೆಗೆ ಸದಸ್ಯರಾದವರೆಲ್ಲರೂ ಸಮಾನರೆಂದು ಪರಿಗಣಿಸಿ ಬಸವಣ್ಣನವರೇ ಹುಟ್ಟುಹಾಕಿದ ಮಹಾಮನೆಯಲ್ಲಿ ಸದಸ್ಯರಾಗಿ ಬಂದವರೆಲ್ಲರಿಗೂ ಪ್ರಸಾದ ವಿತರಣೆ ಸಮಾಜೋಧಾರ್ಮಿಕ ವಿಚಾರಗಳ ಚಿಂತನೆ ನಡೆದು ಅನುಭವ ಮಂಟಪ ಅಸ್ತಿತ್ವದಲ್ಲಿ ಬಂದ ನಂತರ ಬಸವಣ್ಣನವರು ಹುಟ್ಟು ಹಾಕಿದ ಶರಣ ತತ್ವಗಳನ್ನು ಶೂನ್ಯ ಸಿಂಹಾಸನ ಪೀಠವನ್ನು ಅಲಂಕರಿಸಿದ ಅಲ್ಲಮಪ್ರಭುಗಳು ಅನೇಕ ಶರಣರ ಜೊತೆಗೂಡಿ ಅನುಭಾವದ ಆಧಾರದ ಮೇಲೆ ಚರ್ಚಿಸಿ, ಈ ಶರಣ ತತ್ವಗಳನ್ನು ಚಾಲನೆಗೆ ತಂದರು. ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲ ತತ್ವಗಳನ್ನು ಭಕ್ತನಾದವನು ಜೀವನದಲ್ಲಿ ಅಳವಡಿಸಕೊಳ್ಳಲು ಪ್ರೇರೇಪಿಸಿದರು. ಅಷ್ಟಾವರಣಗಳನ್ನು ಅಂಗವಿಸಿಕೊಂಡು, ಪಂಚಾಚಾರಗಳನ್ನು ಪಾಲಿಸುತ್ತ, ಷಟಸ್ಥಲಗಳನ್ನು ಏರಬೇಕು ಎನ್ನುವ ನಿಯಮಗಳನ್ನು ರೂಢಿಗೆ ತಂದರು. ಇದಕ್ಕೆ ಅನೇಕ ಶರಣರು, ಶರಣೆಯರು ಒಪ್ಪಿಕೊಂಡು ಶರಣ ಸಂಸ್ಕೃತಿಯ ಭಾಗವಾದರು. ವಿಶೇಷವಾಗಿ ಶರಣೆಯರ ಬಗ್ಗೆ ಹೇಳುವುದಾದರೆ ಅಕ್ಕನಾಗಮ್ಮ, ಗಂಗಾAಬಿಕೆ, ನೀಲಾಂಬಿಕೆ ಅಕ್ಕಮಹಾದೇವಿ, ಮುಕ್ತಾಯಕ್ಕ, ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಗೊಗ್ಗವ್ವೆ, ದುಗ್ಗವ್ವೆ, ಕಾಳವ್ವೆ, ಬೊಂತಾದೇವಿ, ಹಡಪದಪ್ಪಣ್ಣನ ಪುಣ್ಯ ಸ್ತ್ರೀ ಲಿಂಗಮ್ಮ, ಅಕ್ಕಮ್ಮ, ಮೋಳಿಗೆ ಮಹಾದೇವಿ ಇಂಥ ಇನ್ನೂ ಅನೇಕ ಶರಣೆಯರು, ಈ ಚಳುವಳಿಯಲ್ಲಿ ಭಾಗವಹಿಸಿದರು, ಇವರಲ್ಲಿ ಅನೇಕರು ಮೂಲತಃ ಅಕ್ಷರಜ್ಞಾನವಿಲ್ಲದವರು ತಮ್ಮ ತಮ್ಮ ಕಾರ್ಯದಲ್ಲಿ ನಿರತವಾಗಿ ಅಕ್ಷರಭ್ಯಾಸ ಮಾಡಿ ವಚನಗಳನ್ನು ರಚಿಸಿ ವಚನಕಾರ್ತಿಯರಾದರು. ಉದಾಹಾರಣೆಗಾಗಿ, ಆಶೆಯ ಬಗ್ಗೆ ಆಯ್ದಕ್ಕಿ ಲಕ್ಕಮ್ಮ ತನ್ನ ವಚನದಲ್ಲಿ ಹೀಗೆ ಹೇಳಿದ್ದಾಳೆ.
ಆಶೆಯೆಂಬುದು ಅರಸಿಂಗಲ್ಲದೆ
ಶಿವಭಕ್ತರಿಗುಂಟೆಯಯ್ಯಾ
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆಯಯ್ಯ
ಈಸಕ್ಕಿಯಾಸೆ ನಿಮಗೇಕೆ
ಈಶ್ವರನೊಪ್ಪ ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ ಎಂದು ತಿಳಿಸಿ ಹೇಳುತ್ತಾಳೆ.
ನೇಮದ ಬಗ್ಗೆ ಸತ್ಯಕ್ಕ ತನ್ನ ವಚನದಲ್ಲಿ ಸಮಾಜದಲ್ಲಿ ಕಠಿಣವಾದ ನೇಮಗಳನ್ನು ಆಚರಿಸುವವರು ಅನೇಕ ಜನ ಇದ್ದಾರೆ ಆದರೆ ಬರೀ ನೇಮಗಳನ್ನು ಆಚರಿಸುವ ಬದಲು ಒಳ್ಳೆಯ ನಡೆ ನುಡಿ ಭಾವನೆ ಇರಬೇಕೆಂದು ನೇಮದ ಬಗ್ಗೆ ತನ್ನ ವಚನದಲ್ಲಿ ಹೀಗೆ ಹೇಳಿದ್ದಾರೆ.
ಅರ್ಚನೆ ಪೂಜೆ ನೇಮವಲ್ಲ
ಮಂತ್ರ ತಂತ್ರ ನೇಮವಲ್ಲ
ಧೂಪ ದೀಪಾರತಿ ನೇಮವಲ್ಲ
ಪರಧನ ಪರಸ್ತ್ರೀ ಪರದೈವಗಳಿಗೆರದಿಪ್ಪುವದೇ ನೇಮ,
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣ ನಿತ್ಯನೇಮ.
ಸಮಾಜದಲ್ಲಿ ಹೆಣ್ಣುಗಂಡಿನ ಭೇಧ ಬಹಳವಿತ್ತು. ಹೀಗಾಗಿ ಹೆಣ್ಣು ಗಂಡು ಭೇಧದ ಬಗ್ಗೆ ಗೊಗ್ಗವ್ವೆ, ತನ್ನ ವಚನದಲ್ಲಿ ಹೀಗೆ ಹೇಳಿದ್ದಾಳೆ
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದಡೆ ಗಂಡೆಂಬರು,
(ಈ ಉಭಯದ ಜ್ಞಾನ) ಒಳಗೆ ಸುಳಿವ ಆತ್ಮ
ಹೆಣ್ಣೊ ಗಂಡೋ ನಾಸ್ತಿನಾಥ
ಕಾಯಕದ ಬಗ್ಗೆ ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ,
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ
ಆಶೆಯೆಂಬುದು ಭವದ ಬೀಜ
ನಿರಾಶೆಯೆಂಬುದು ನಿತ್ಯ ಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
ವ್ರತಹೀನರ ಬಗ್ಗೆ ಗುಂಡಯ್ಯಗಳ ಪುಣ್ಯಸ್ತಿçà ಕೇತಲದೇವಿ ಹೀಗೆ ಹೇಳುತ್ತಾಳೆ.
ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರಾ
ಹೀಗೆ ಎಲ್ಲಾ ವಚನಕಾರ್ತಿಯರು ತಮ್ಮ ವಚನಗಳಲ್ಲಿ ಶರಣ ತತ್ವಗಳ ಬಗ್ಗೆ ವಚನಗಳನ್ನು ರಚಿಸಿದ್ದಾರೆ. ಇಂಥ ಅನೇಕ ಶರಣ ಶರಣೆಯರ ಅನುಭಾವದ ವಚನಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬಾರದೇಕೆ? ಕೊನೆಯಲ್ಲಿ ಬಸವ ತತ್ವ, ಶರಣ ತತ್ವದ ತಿರುಳನ್ನು ಒಂದು ಭಾವಗೀತೆಯಲ್ಲಿ ಕಟ್ಟಿಕೊಟ್ಟಂಥ ಸಿದ್ಧಯ್ಯ ಪುರಾಣಿಕ ಇವರ ಈ ಬಾವಗೀತೆ ಹಾಡುತ್ತೇನೆ.
ಪ್ರಕೃತಿಯೇ ಗುರು, ಗಗನ ಲಿಂಗವು
ಜಗವೇ ಕೂಡಲ ಸಂಗಮ
ಹುಡಿಯೆ ಭಸ್ಮವು ಹುಲ್ಲೆ ಪತ್ರಿಯು
ಜಡವಿದೆಲ್ಲವು ಜಂಗಮ. ||ಪ||
ಕುಡಿವ ನೀರೆ ತೀರ್ಥ, ತಿನ್ನುವ ರೊಟ್ಟಿ ಶಿವನ ಪ್ರಸಾದವು
ಶ್ರಮದ ಬೆವರೇ ಸ್ನಾನ, ದುಡಿತದ ಹಾಡೆ ಮಂತ್ರ ನಿನಾದವು ||೧||
ಪ್ರಕೃತಿಯೇ ಗುರು ಗಗನ ಲಿಂಗವು....
ಸರ್ವವು ಶಿವನಂಶವೆನ್ನುವ ಧರ್ಮವೊಂದೆ ಧರ್ಮವು
ಅನ್ಯರನು ಅಳಲಿಸದ ಹಿತಕರ ಕರ್ಮವೊಂದೆ ಕರ್ಮವು ||೨||
ಪ್ರಕೃತಿಯೇ ಗುರು ಗಗನ ಲಿಂಗವು
ಎಲ್ಲರೆಲ್ಲರಿಗಾಗಿ ಎನ್ನುವ ಜ್ಞಾನ ಒಂದೇ ಜ್ಞಾನವು
ಒಲಿದು ಒಲಿಸುವ ನಲಿದು ನಲಿಸುವ
ಕಲೆಯೆ ಅಮೃತ ನಿನಾದವು ||೩||
ಪ್ರಕೃತಿಯೆ ಗುರು ಗಗನ ಲಿಂಗವು
೩. ಉಣಿಸಿ ಉಣ್ಣುವ ಭಾವ ಭಕ್ತಿಯು
ಒಲ್ಲೆನೆನೆಸುವ ವಿರಕ್ತಿಯು, ಕೂಡಿಕಲಿಯಲು
ಕೂಡಿ ಬೆಳೆಯಲು ಕುಡಿ ನಲಿಯಲು ಮುಕ್ತಿಯು
ಪ್ರಕೃತಿಯೇ ಗುರು ಗಗನ-ಲಿಂಗವು
ಜಗವೇ ಕೂಡಲಸಂಗಮ
ಪ್ರಕೃತಿ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಸೌರ‍್ಯ, ಸೌಲಭ್ಯ, ಸಮಾನತೆ, ಸಹಜೀವನ, ಸಹಬಾಳ್ವೆ, ಸಮಾಧಾನ, ಸಂತೃಪ್ತಿ, ಸಮೃದ್ಧಿ ಎಲ್ಲವನ್ನು ಕೊಡುತ್ತದೆ. ಹೀಗಾಗಿ ಪ್ರಕೃತಿಯೇ ನಮಗೆ ಗುರು, ಗಗನವೇ ನಮಗೆ ಲಿಂಗ, ಈ ಜಗತ್ತಿನಲ್ಲಿ ಪಶು, ಪ್ರಾಣಿ, ಗಿಡ, ಮರ, ಎಲ್ಲ ಜಾತಿ, ಮತ, ಪಂಥ, ಧರ್ಮದವರು ಕೂಡಿ ಸಮರಸವಾಗಿ ಬಾಳುವದೇ ಕೂಡಲ ಸಂಗಮ.
ಪೂಜ್ಯ ಅವ್ವಾ ಅವರು ಕೂಡ ಎಲ್ಲ ಎಲ್ಲರಿಗಾಗಿ ಎನ್ನುವ ಧರ್ಮವೊಂದೆ ಧರ್ಮವು ಅನ್ನುವಂತೆ, ಎಲ್ಲರಿಗಾಗಿ ಅವರ ಮನವು ಮಿಡಿಯುತ್ತದೆ. ಈ ಅನುಭವ ಮಂಟಪ ಎಲ್ಲರಿಗಾಗಿ ಇದೆ. ಅವರಿವರೆನ್ನದೆ ಎಲ್ಲರೂ ಬರಲಿ, ಎಲ್ಲರೂ ಎಲ್ಲದರಲ್ಲಿ ಭಾಗವಹಿಸಿಲಿ, ದತ್ತಿ-ಉಪನ್ಯಾಸಕ್ಕೆ ಬರಲಿ, ಪ್ರವಚನ ಕೇಳಲಿ, ಎಲ್ಲರೂ ಪ್ರಸಾದ ಮಾಡಲಿ ಎನ್ನುವ ಮಾತೃ ಹೃದಯ, ನಾವು ಪೂಜ್ಯ ಖೂಬಾ ಅವ್ವಾವರಲ್ಲಿ ಕಾಣುತ್ತೇವೆ. ಅವರು ಯಾವಾಗಲೂ ಹೀಗೆ ಆಯುರಾರೋಗ್ಯವಾಗಿ ಯಾವಾಗಲು ನಗು ನಗುತಾ ಇರಲಿ ಎಂದು ಪ್ರಾರ್ಥಿಸುವೆ. ನಮಗೆ ಇಂಥ ಅವಕಾಶ ಕೊಟ್ಟ ಅವ್ವಾವರಿಗೂ, ದಂಡೆ ಮೆಡಮ್ ಅವರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ವರೆಗೆ ಶಾಂತವಾಗಿ ಕುಳಿತು ಕೇಳಿದ ನನ್ನ ಎಲ್ಲರಿಗೂ ಅನೇಕ ಧನ್ಯವಾಗಳನ್ನು ಅರ್ಪಿಸುತ್ತೇನೆ. ಮತ್ತೊಮ್ಮೆ
ಎಲ್ಲರಿಗೂ ಶರಣ ಶರಣಾರ್ಥಿಗಳು.
- ಶ್ರೀಮತಿ ಪುಷ್ಪಾ ಕೆ. ವಾಲಿ
ಸಂಗನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಅಂಗ ನಾಸ್ತಿಯಾಯಿತ್ತು.
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು.
ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಾಯತವಾಯಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ,
ಸಜ್ಜನೆಯಾಗಿ ಮಜ್ಜನಕ್ಕೆರೆವೆ,
ಶಾಂತಳಾಗಿ ಪೂಜೆಮಾಡುವೆ,
ಸರಮತಿಯಿಂದ ನಿಮ್ಮ ಹಾಡುವೆ,
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ನಗಲದ ಪೂಜೆ ಅನುವಾಯಿತ್ತೆನಗೆ.
ಎಂಬ ಶರಣರ ವಚನಗಳನ್ನು ನಾವು ಪಾಲಿಸಬೇಕು ಎಂದು ನುಡಿದರು.
ಬಸವ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಜಯಶ್ರೀ ದಂಡೆ , ಡಾ ವೀರಣ್ಣ ದಂಡೆ ,ಡಾ. ಕಲ್ಲಪ್ಪ ವಾಲಿ , ಡಾ. ಆನಂದ ಸಿದ್ಧಾಮಣಿ , ಸುರೇಖಾ ಮಾಲಿ ಪಾಟೀಲ್ ಉಪಸ್ಥಿತರಿದ್ದರು .
