ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರೊಂದಿಗೆ ಕಲ್ಯಾಣ ಕಹಳೆ ನೇರಾನೇರ ಸಂದರ್ಶನ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರೊಂದಿಗೆ  ಕಲ್ಯಾಣ ಕಹಳೆ ನೇರಾನೇರ ಸಂದರ್ಶನ

ಛಲವಾದಿ ನಾರಾಯಣ ಸ್ವಾಮಿ

ಕಲ್ಯಾಣ ಕಹಳೆ : ವಿಪಕ್ಷ ನಾಯಕನಾಗಿ ನಿಮ್ಮ ಗುರಿ ?

ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಇದುವರೆಗೆ ಜೀವನದಲ್ಲಿ ಕಪ್ಪು ಚುಕ್ಕೆ ಇಟ್ಟುಕೊಂಡವನ್ನಲ್ಲ. ಯಾವುದೇ ಕಳಂಕವಿಲ್ಲದೇ ಬದುಕಬೇಕೆಂಬ ಆಸೆ ನನ್ನಲ್ಲಿ ಇದೆ. ವಿಧಾನ ಪರಿಷತ್ತಿನ ನಿಕಟಪೂರ್ವ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಒಂದು ಹೆಸರಿತ್ತು. ನಿಷ್ಕಳಂಕ ವ್ಯಕ್ತಿ ಎಂದು. ನಾನೀಗ ಅವರ ಸ್ಥಾನಕ್ಕೆ ಬಂದಿದ್ದೇನೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬ ಜವಾಬ್ದಾರಿ ನನಗಿದೆ. ನನ್ನ ಇಡಿ ಜೀವನದಲ್ಲಿ ನನ್ನವರು ಎಂದು ಕೈ ಹಿಡಿದವರು ಯಾರು ಇಲ್ಲ. ನನ್ನನ್ನು ಕೈ ಹಿಡಿದಿದ್ದು ಒಂದು ಡಾ ಬಿ ಆರ್ ಅಂಬೇಡ್ಕರ್‌ ಅವರ ತತ್ವಾದರ್ಶ ಹಾಗೂ ಇನ್ನೊಂದು ಬಿಜೆಪಿಯ ನಾಯಕತ್ವ.

 ಕಲ್ಯಾಣ ಕಹಳೆ : ನಿಮಗೆ ಬಿಜೆಪಿ ಸೇರುವಾಗಲೇ ಈ ನಿರೀಕ್ಷೆ ಇತ್ತಾ ?

ನಾನು ರಾಜಕಾರಣ ಮಾಡುತ್ತಿದ್ದೇನೆ. ಪಿಯುಸಿ ಆದ ಮೇಲೆ ಡಿಗ್ರಿ ಮಾಡಲೇಬೇಕಲ್ವೆ? ನಾನು ಡಿಗ್ರಿ ಪೂರೈಸಿದ್ದೇನೆ. ಕಾಂಗ್ರೆಸ್‌ ನಾಯಕತ್ವ ನನ್ನನ್ನು ಗ್ರಹಿಸಲಿಲ್ಲ. ಆದರೆ ಬಿಜೆಪಿಯವರು ನನ್ನ ಯೋಗ್ಯತೆ ಗಮನಿಸಿದರು. 

ನನ್ನನ್ನು ಯಾವ ರೀತಿ, ಎಲ್ಲಿ ಬಳಕೆ ಮಾಡಬೇಕೆಂಬ ವಿಶ್ವಾಸವೂ ಅವರಲಿತ್ತು. ನಾನು ಕೂಡ ಮೈಗಳ್ಳನಾಗದೇ ಎಲ್ಲವನ್ನೂ ಮರೆತು ಪಕ್ಷಕ್ಕೆ ನಾನು ತೊಡಗಿಸಿಕೊಂಡೆ. ಇವತ್ತಿಗೂ ನಾನು ಬೆಳಗ್ಗೆ ಎದ್ದ ತತ್‌ಕ್ಷಣ ಪಕ್ಷದ ಕಚೇರಿಗೆ ಹೋಗುತ್ತೇನೆ. ಮಧ್ಯಾಹ್ನ ಅಲ್ಲಿಯೇ ಊಟ ಮಾಡಿ ಸಂಜೆಯವರೆಗೂ ನಿಯೋಜಿಸಿದ ಕರ್ತವ್ಯ ನಿಭಾಯಿಸಿ, ಸಂಜೆ ಯಾವುದಾದರೊಂದು ಟಿವಿ ಚರ್ಚೆಯಲ್ಲಿ ಭಾಗವಹಿಸಿ ಸೀದಾ ಮನೆಗೆ ಹೋಗುತ್ತೇನೆ. ಇದನ್ನು ಬಿಟ್ಟರೆ ನನಗೆ ಬೇರೆ ಯಾವ ಅಭ್ಯಾಸವಾಗಲಿ, ವ್ಯವಹಾರವಾಗಲಿ ಇಲ್ಲ. ಇದನ್ನು ಪಕ್ಷ ಗುರುತಿಸಿದೆ.

 ಕಲ್ಯಾಣ ಕಹಳೆ : ಹಾಗಾದರೆ ಕಾಂಗ್ರೆಸ್‌ನಲ್ಲಿ ನಿಮ್ಮಂಥವರು ಇಲ್ಲವಾ ?

ಅಲ್ಲೂ ಇದ್ದಾರೆ. ಆದರೆ ಅಲ್ಲಿನ ನಾಯಕತ್ವ ಅಂಥವರನ್ನು ಗುರುತಿಸುವುದಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲೋ ಕೆಲಸ ಮಾಡಿ, ಸಂಜೆ ಟ್ರಿಮ್ಮಾಗಿ ಡ್ರೆಸ್‌ ಮಾಡಿಕೊಂಡು ಬಂದು ನಾಯಕರನ್ನು ಕಾರಲ್ಲಿ ಕುಳ್ಳಿರಿಸಿಕೊಂಡು ಬೇರೆ ಬೇರೆ ಕಡೆ ಸುತ್ತಾಡಿಸಿಕೊಂಡು ಬಂದವರನ್ನು ಮಾತ್ರ ಅಲ್ಲಿ ಗುರುತಿಸುತ್ತಾರೆ. ನಮ್ಮಲ್ಲಿ ಆ ವ್ಯವವಸ್ಥೆ ಇಲ್ಲ. ಇಲ್ಲಿ ಪಕ್ಷದ ಕೆಲಸ ಮಾಡಿ, ಜನರ ಜತೆಯಲ್ಲಿ ಬೆರೆತು ಬಂದವನಿಗೆ ಬೆಲೆ ಇದೆ. ಇದು ಬಿಜೆಪಿ ಹಾಗೂ ಅನ್ಯ ಪಕ್ಷದವರಿಗೆ ಇರುವ ವ್ಯತ್ಯಾಸ.

ಕಲ್ಯಾಣ ಕಹಳೆ : ನಿಮ್ಮ ಈ ಬೆಳವಣಿಗೆ ಕಾಂಗ್ರೆಸನವರಿಗೂ ಸಂತೋಷ ತಂದಿರಬೇಕು ?

ನನ್ನಂತೆ ಅನ್ಯಾಯಕ್ಕೆ ಒಳಪಟ್ಟ ಸಹಸ್ರಾರು ಜನರು ಕಾಂಗ್ರೆಸ್‌ನಲ್ಲಿ ಇಂದಿಗೂ ಇದ್ದಾರೆ. ನಾನು ವಿಪಕ್ಷ ನಾಯಕನಾಗಿ ಘೋಷಣೆಯಾಗುತ್ತಿದ್ದಂತೆ ಹೆಚ್ಚು ಕರೆಗಳು ಬಂದಿದ್ದೇ ಕಾಂಗ್ರೆಸ್‌ ನಾಯಕರಿಂದ. 

ನಿನ್ನ ಬೆಳವಣಿಗೆ ನಮಗೆ ಖುಷಿ ತಂದಿದೆ. ನಾವು ಇಲ್ಲಿ ಸತ್ತೇ ಹೋಗಿದ್ದೇವೆ. ಇಲ್ಲಿ ನಮಗೆ ರಾಜಕೀಯ ಜೀವ ಬರುತ್ತದೆ ಎಂದು ಅನ್ನಿಸುತ್ತಿಲ್ಲ. ಅಂಥ ಪರಿಸ್ಥಿತಿಯಲ್ಲಿ ನಾವಿಲ್ಲಿ ಸಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮ ಮುಂದೆ ಸವಾಲಿದೆ. ಗ್ಯಾರಂಟಿ ಹಣ ವರ್ಗಾವಣೆ, ಪ್ರಬುದ್ಧ ಯೋಜನೆ ಸ್ಥಗಿತ, ಮುಡಾ ಸೇರಿದಂತೆ ಹಲವು ವಿಷಯಗಳ ಸವಾಲಿದೆ ಎಂದಿದ್ದಾರೆ.

ಕಲ್ಯಾಣ ಕಹಳೆ : ಸರಕಾರದ ವಿರುದ್ಧ ಹೋರಾಟಕ್ಕೆ ಸಿದ್ದವಾಗಿದ್ದೀರಾ ?

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ 7ಡಿ ರದ್ದು ಪಡಿಸಿ, 7ಸಿಯಲ್ಲಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿದರು. ಈ ಬಗ್ಗೆ ನಾನು ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಆಕ್ಷೇಪಿಸಿದೆ. ದಲಿತರ ಹಣವನ್ನು ಯಾವ ಸೆಕ್ಷನ್‌ ಮೂಲಕ ಗ್ಯಾರಂಟಿ ಯೋಜನೆಗೆ ವಿನಿಯೋಗಿಸಿದರೂ ತಪ್ಪೇ. 

ಇದರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ರೂ. 11, 114 ಕೋಟಿ ರೂ. ಮೊದಲ ವರ್ಷದಲ್ಲಿ,ರೂ. 14, 282 ಕೋಟಿ ಒಟ್ಟಾರೆ 25, 396 ಕೋಟಿ ರೂ. ದಲಿತರ ಹಣವನ್ನು ಕಾಂಗ್ರೆಸ್‌ ಸರಕಾರ ಲೂಟಿ ಹೊಡೆದಿದೆ.

ಪ್ರಬುದ್ಧ ಯೋಜನೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದರು. ವಿದೇಶದಲ್ಲಿ ಪಿಎಚ್‌.ಡಿ ಮಾಡುತ್ತಿದ್ದರು. ಆದರೆ ಈ ಸರಕಾರ ಅದನ್ನು ನಿಲ್ಲಿಸಿಬಿಟ್ಟಿದೆ. ಅದ್ಯಾರೋ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಮಣಿವಣ್ಣನ್‌, “ಹೊರ ದೇಶಕ್ಕೆ ಹೋಗಿ ಓದುವುದೆಲ್ಲ ವೇಸ್ಟ್‌’ ಎಂದು ನಮ್ಮ ವಿದ್ಯಾರ್ಥಿಗಳಿಗೆ ಹಂಗಿಸಿದ್ದಾರಂತೆ. ಇದರಿಂದ ರೋಸಿ ಹೋಗಿರುವ ನಮ್ಮ ವಿದ್ಯಾರ್ಥಿಗಳು ರಾಜ್ಯಪಾಲರ ಬಳಿಗೆ ಹೋಗಿ ನಮ್ಮ ಕಿಡ್ನಿ ಮಾರಾಟ ಮಾಡುವುದಕ್ಕೆ ಅವಕಾಶ ಕೊಡಿ, ನಾವು ವಿದೇಶಕ್ಕೆ ಹೋಗಿ ಪಿಎಚ್‌.ಡಿ ಮಾಡುತ್ತೇವೆ’ ಎಂಬ ಪರಿಸ್ಥಿತಿಗೆ ಸಿದ್ದರಾಮಯ್ಯನವರ ಸರಕಾರ ದಲಿತ ಸಮುದಾಯದವರನ್ನು ತಂದಿದೆ. ಹೀಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

 ಕಲ್ಯಾಣ ಕಹಳೆ : ರಾಜ್ಯದಿಂದ ರಾಷ್ಟ್ರಮಟ್ಟದವರೆಗೂ ಕರ್ನಾಟಕದ ದಲಿತ ನಾಯಕರು ಅತ್ಯಂತ ಪ್ರಭಾವ ಶಾಲಿಗಳಾಗಿದ್ದಾರೆ. ಅವರ ಗಮನಕ್ಕೆ ಇದೆಲ್ಲ ಇಲ್ಲವೇ ?

ರಾಜ್ಯ ಸರಕಾರ ನಮ್ಮ ಹಣವನ್ನು ದೋಚುತ್ತಿದ್ದರೂ ಅವರ್ಯಾರು ಮಾತನಾಡುತ್ತಿಲ್ಲ. ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ ! ಆದರೆ ನೀವು ಮಾಡುತ್ತಿರುವುದು ತಪ್ಪು ಎಂದು ರಾಜ್ಯ ಸರಕಾರದ ವಿರುದ್ಧ ಚಕಾರ ಎತ್ತಿಲ್ಲ. ಅದನ್ನು ಬಿಟ್ಟು ಸರಕಾರ ಹಾಗೂ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದಾರೆ. ಖರ್ಗೆಯವರೂ ಸೇರಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದರೆ ನಾನು ಸಮುದಾಯದ ಪರವಾಗಿ ನಿಂತು ಹೋರಾಡುತ್ತೇನೆ.

ಕಲ್ಯಾಣ ಕಹಳೆ :ಖರ್ಗೆಯವರ ಗಮನಕ್ಕೆ ತರುತ್ತೀರಾ ?

ಇಲ್ಲ. ನಾನು ಮಾಧ್ಯಮಗಳ ಮೂಲಕ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ಆದರೆ ನೇರವಾಗಿ ಮಾಡಿಲ್ಲ. ಏಕೆಂದರೆ ನಾನು ಖರ್ಗೆಯವರ ಜತೆಗೆ ಬಹುಕಾಲ ಇದ್ದವನು. ಅವರ ಬಗ್ಗೆ ಬೇಸರಗೊಂಡು ಪಕ್ಷ ತ್ಯಜಿಸಿದೆ. ಅವರು ನನಗೆ ನ್ಯಾಯ ಕೊಡಿಸಲಿಲ್ಲ. ಏಳು ಬಾರಿ ನಾನು ವಿಧಾನ ಸಭೆ ಟಿಕೆಟ್ ಗಿಟ್ಟಿಸಲು ಪ್ರಯತ್ನಿಸಿದರೂ ಅವರು ನನಗೆ ಅವಕಾಶ ಕಲ್ಪಿಸಲಿಲ್ಲ. ಒಮ್ಮೆಯಂತೂ ಅವರೇ ಅಧ್ಯಕ್ಷರಿದ್ದರು. ಎರಡು ಬಾರಿ ಪರಮೇಶ್ವರ ಇದ್ದರೂ ಸಿಗಲಿಲ್ಲ. ಹಾಗಾದರೆ ನನ್ನ ಕೈ ಹಿಡಿಯುವವರು ಯಾರು ? ಯಾಕೆ ಹಾಗಾಯಿತು?

ಯಾಕೆಂದು ಅವರನ್ನೇ ನೀವು ಕೇಳಬೇಕು. 

ಅದೇ ಅವರ ಮಗ ಆದರೆ .? ಕಾಡಿಬೇಡಿ ಖರ್ಗೆ ಟಿಕೆಟ್‌ ತಂದರು. ಒಮ್ಮೆ ಅವರ ಮಗನಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಒಂದು ವಾರ ದಿಲ್ಲಿ ಬಿಟ್ಟು ಈಚೆ ಬರಲಿಲ್ಲ. ನಮಗೂ ಹಾಗೆ ಮಾಡಬಹುದಿತ್ತಲ್ಲ ? ಮಗನಿಗೆ ಅವರು ಫಾದರ್ ; ಆದರೆ ನಾನು “ಗಾಡ್‌ ಫಾದರ್‌’ ಅಂದುಕೊಂಡಿದ್ದೆ. ಆದಾಗಿಯೂ ಅವರು ನನ್ನನ್ನು ಕೈ ಹಿಡಿಯಲಿಲ್ಲ ತಿರಸ್ಕಾರ ಮಾಡಿದರು. 

ಹೀಗಾಗಿ ಯಾವುದೇ ವಿಚಾರ ಸೃಷ್ಟಿಯಾದರೂ ನಾನು ಅವರನ್ನು ಸಂಪರ್ಕಿಸುವ ಗೊಡವೆಗೆ ಹೋಗುವುದಿಲ್ಲ. 

ಆದರೆ ಮಾಧ್ಯಮಗಳ ಮೂಲಕ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತೇನೆ. 

“ನನ್ನ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ನನಗನಿಸಿದಂತೆ ಅವರಿಗೂ ಅನ್ನಿಸಲಿ.

ಖರ್ಗೆಯವರ ಬಳಿಕ ಕರ್ನಾಟಕದಲ್ಲಿ : ದಲಿತ ನಾಯಕರಾದ ತಮಗೆ ಸಂವಿಧಾನಾತ್ಮಕ ಜವಾಬ್ದಾರಿ ಸಿಕ್ಕಿದೆ,ಇದನ್ನು ನಿರೀಕ್ಷೆ ಮಾಡಿದ್ದಿರಾ ?

ಬಿಜೆಪಿಯಲ್ಲಿ ನನಗೆ ಇದು ಯೋಗದಿಂದ ಬಂದಿದ್ದಲ್ಲ, ಯೋಗ್ಯತೆಯಿಂದ ಬಂದಿದ್ದು. 

ನಾನು ಈ ಮಾತನ್ನು ಸದನದಲ್ಲೂ ಹೇಳಿದ್ದೇನೆ. ಆದರೆ ನಾನು 40 ವರ್ಷಗಳ ಕಾಲ ಯಾರನ್ನು ಮತ್ತು ಯಾವ ಪಕ್ಷವನ್ನು ನಂಬಿದ್ದೆನೋ, ಅವರು ನನ್ನ ಯೋಗ್ಯತೆಯನ್ನು ಗುರುತಿಸುವಲ್ಲಿ ವಿಫ‌ಲರಾದರು. ನನ್ನಂಥ ಅನೇಕರಿಗೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಗಿದೆ. ನನ್ನ ಯೌವ್ವನದ ಬದುಕಿನ ನಲವತ್ತು ವರ್ಷವನ್ನು ಒಂದು ಪಕ್ಷಕ್ಕೆ ಮುಡಿಪಾಗಿಟ್ಟಾಗ ನನ್ನ ಯೋಗ್ಯತೆಯನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ ಎಂದರೆ ನನ್ನ ತಾಳ್ಮೆಗೂ ಒಂದು ಮಿತಿ ಇರುತ್ತದೆಯಲ್ಲವೇ .. ? ಆ ತಾಳ್ಮೆಯ ಕಟ್ಟೆ ಒಡೆದಾಗ ನನ್ನ ತೀರ್ಮಾನವನ್ನು ನಾನು ಮಾಡಬೇಕಾಯ್ತ, ಹೀಗಾಗಿ 

ಬಿಜೆಪಿಗೆ ಬಂದೆ. ನಮ್ಮ ಪಕ್ಷದ ನಾಯಕತ್ವ ನನ್ನನ್ನು ಗುರುತಿಸಿದೆ. ಇಲ್ಲಿ ಪಕ್ಷದ ನಾಯಕತ್ವ ಹೇಗಿದೆಯೆಂದರೆ ಯೋಗ್ಯರನ್ನು ಯೋಗ್ಯ ಸ್ಥಾನದಲ್ಲಿ ಕುಳ್ಳಿರಿಸುತ್ತದೆ ಎನ್ನುವುದಕ್ಕೆ ನಾನೆ ಸಾಕ್ಷಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.